ಬೆಂಗಳೂರು [ಜು.31]:  ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲೂ ಮಂಗಳವಾರ ಆಪರೇಷನ್‌ ಕಮಲ, ವಿಶೇಷ ವಿಮಾನ, ಬಸ್‌ ವ್ಯವಸ್ಥೆ ವಿಚಾರಗಳು ಸದ್ದು ಮಾಡಿ ಹಾಸ್ಯಕ್ಕೆ ಕಾರಣವಾಯಿತು.

ಯಲಹಂಕ ಶಾಸಕ ಬಿಜೆಪಿಯ ಎಸ್‌.ಆರ್‌.ವಿಶ್ವನಾಥ್‌ ನಗರದ ತ್ಯಾಜ್ಯ ಸಮಸ್ಯೆ ಕುರಿತು ಮಾತನಾಡುವಾಗ ಬಿಜೆಪಿ ಸದಸ್ಯರಿಗೆ ತಾರತಮ್ಯ ಮಾಡದೆ ಅನುದಾನ ಕೊಟ್ಟಿದ್ದರೆ ಅವರ ವಾರ್ಡ್‌ ವ್ಯಾಪ್ತಿಯ ಕ್ವಾರಿಗಳಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡುತ್ತಿದ್ದರು ಎಂದರು. ಈ ವೇಳೆ ಯಶವಂತಪುರ ವಾರ್ಡ್‌ ಕಾಂಗ್ರೆಸ್‌ ಸದಸ್ಯ ಜಿ.ಕೆ.ವೆಂಕಟೇಶ್‌ ಮಾತನಾಡಿ, ಶಾಸಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಡಿ ಇದಕ್ಕೆ ನಮ್ಮ ಆಕ್ಷೇಪವೇನಿಲ್ಲ ಎಂದರು.

ಆಗ, ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು, ಇದೆಲ್ಲಾ ವಿಶೇಷ ವಿಮಾನದ ಪರಿಣಾಮ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮುನಿರತ್ನ ಬೆಂಬಲಿಗ ವೆಂಕಟೇಶ್‌ ಅವರನ್ನು ಕುಟುಕಿದರು. ಅದಕ್ಕೆ, ವಿಶ್ವನಾಥ್‌ ಪ್ರತಿಕ್ರಿಯಿಸಿ, ಬಿಬಿಎಂಪಿಯಲ್ಲಿ ವಿಶೇಷ ವಿಮಾನದ ವ್ಯವಸ್ಥೆ ಏನೂ ಇರುವುದಿಲ್ಲ. ಸಾಮಾನ್ಯ ಬಸ್‌ ವ್ಯವಸ್ಥೆ ಇರುತ್ತದೆ ಎಂದಾಗ ಸಭೆಯಲ್ಲಿ ನಗು ಧ್ವನಿಸಿತು.