ಬಿಜೆಪಿ ಬೆಂಬಲಿಸಿದರಷ್ಟೇ Minister S Angara ಕ್ಷೇತ್ರದಲ್ಲಿ ಸರ್ಕಾರಿ ಸೌಲಭ್ಯ: ಆಡಿಯೋ ವೈರಲ್!
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಸಿದರೆ ಮಾತ್ರ ಸರ್ಕಾರದ ಸೌಲಭ್ಯಗಳು ಸಿಗೋದಂತೆ. ಬಿಜೆಪಿ ನಾಯಕರು, ಕಾರ್ಯಕರ್ತರು ಹೇಳಿದರಷ್ಟೇ ಸಚಿವ ಎಸ್ ಅಂಗಾರರ ಸಹಿ ಮತ್ತು ಶಿಫಾರಸ್ಸು ಸಿಗುತ್ತಂತೆ. ಹೀಗೊಂದು ಆಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಜು.19): ದ.ಕ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಸಿದರೆ ಮಾತ್ರ ಸರ್ಕಾರದ ಸೌಲಭ್ಯಗಳು ಸಿಗೋದಂತೆ. ಬಿಜೆಪಿ ನಾಯಕರು, ಕಾರ್ಯಕರ್ತರು ಹೇಳಿದರಷ್ಟೇ ಸುಳ್ಯದ ಶಾಸಕರ ಸಹಿ ಮತ್ತು ಶಿಫಾರಸ್ಸು ಸಿಗುತ್ತಂತೆ. ಹೀಗೊಂದು ಆಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಸುಳ್ಯ ಶಾಸಕ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಎಸ್.ಅಂಗಾರ ವಿರುದ್ದ ಅಸಮಾಧಾನ ಕೇಳಿ ಬಂದಿದೆ. ಬಿಜೆಪಿ ಬೆಂಬಲಿಸಿಲ್ಲ ಎಂಬ ಕಾರಣಕ್ಕೆ ವಿಕಲಚೇತನನಿಗೆ ಸರ್ಕಾರಿ ಸೌಲಭ್ಯವೊಂದು ಸಿಗದೇ ಇದ್ದು, ವಿಕಲಚೇತನನ ಗಂಗಾ ಕಲ್ಯಾಣ ಫೈಲ್ ನ್ನು ಸುಳ್ಯ ಶಾಸಕ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರೂ ಆಗಿರುವ ಎಸ್. ಅಂಗಾರ ರಿಜೆಕ್ಟ್ ಮಾಡಿದ್ದಾರೆ ಅಂತ ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ದೂರಿದ್ದಾರೆ. ಇದೀಗ ಈ ಸಂಬಂಧ ಕರಾವಳಿಯಲ್ಲಿ ಆ ಒಂದು ಸ್ಪೋಟಕ ಆಡಿಯೋ ಭಾರೀ ವಿವಾದ ಸೃಷ್ಟಿಸಿದೆ. ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ವಿಕಲಚೇತನ ಆಲೆಟ್ಟಿ ರಾಮಚಂದ್ರ ನಾಯ್ಕ್ ಎಂಬವರು ಗಂಗಾಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯ ಫೈಲ್ ಸುಳ್ಯ ಬಿಜೆಪಿ ಕಚೇರಿ ತಲುಪಿದ್ದು, ಶಾಸಕರ ಸಹಿಯ ಬಳಿಕ ಸೌಲಭ್ಯ ಸಿಗಬೇಕಿತ್ತು. ಆದರೆ ಸುಳ್ಯದ ಬಿಜೆಪಿ ಕಚೇರಿಯಲ್ಲಿ ಇದ್ದ ಫೈಲ್ ಗೆ ಶಾಸಕ ಅಂಗಾರ ಸಹಿ ಮಾಡಿಲ್ಲ ಎಂಬ ಕಾರಣಕ್ಕೆ ರಾಮಚಂದ್ರ ನಾಯ್ಕ ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಎಂಬರಿಗೆ ದೂರು ನೀಡಿದ್ದಾರೆ.
ಹೀಗಾಗಿ ಸುಂದರ ಪಾಟಾಜೆ ಸುಳ್ಯ ಬಿಜೆಪಿ ಕಚೇರಿ ಕಾರ್ಯದರ್ಶಿ ಚಂದ್ರಶೇಖರ ಎಂಬವರಿಗೆ ಕರೆ ಮಾಡಿ ಈ ಬಗ್ಗೆ ಕೇಳಿದ್ದು, ಈ ವೇಳೆ ಚಂದ್ರಶೇಖರ್ 'ರಾಮಚಂದ್ರ ನಾಯ್ಕ್ ಕಾಂಗ್ರೆಸ್ ವ್ಯಕ್ತಿ, ಅವರಿಗೆ ಯೋಜನೆ ಮಂಜೂರು ಸಾಧ್ಯವಿಲ್ಲ, ಅವರಿಗೆ ಯೋಜನೆ ಮಂಜೂರು ಮಾಡಿದರೆ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡುತ್ತಾರೆ, ಅಲ್ಲಿನ ಬಿಜೆಪಿ ನಾಯಕರು ಹೇಳದೇ ಅಲ್ಲಿ ಯಾವುದೇ ಕೆಲಸ ಮಾಡುವಂತಿಲ್ಲ, ಕಾರ್ಯಕರ್ತರ ವಿರೋಧ ಇದ್ದರೆ ಶಾಸಕ ಅಂಗಾರ ಅವರು ಕೂಡ ಸಹಿ ಮಾಡಲ್ಲ ಎಂದು ಹೇಳಿದ ತುಳು ಆಡಿಯೋ ವೈರಲ್ ಆಗಿದೆ. ಬಂದರು ಸಚಿವ, ಸುಳ್ಯ ಶಾಸಕ ಎಸ್.ಅಂಗಾರ ವಿರುದ್ದ ತಾರತಮ್ಯದ ಆರೋಪ ವ್ಯಕ್ತವಾಗಿದ್ದು, ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಏಷ್ಯಾನೆಟ್ ಸುವರ್ಣ ನ್ಯೂಸ್ ಸುಳ್ಯ ಬಿಜೆಪಿ ಕಚೇರಿ ಕಾರ್ಯದರ್ಶಿ ಚಂದ್ರಶೇಖರ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸುಳ್ಯ ಬಿಜೆಪಿ ಕಚೇರಿ ಕಾರ್ಯದರ್ಶಿ ಚಂದ್ರಶೇಖರ ಮತ್ತು ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ತುಳು ಆಡಿಯೋ ಕನ್ನಡ ಭಾಷಾಂತರ ಇಲ್ಲಿದೆ.
ಸುಂದರ ಪಾಟಾಜೆ: ಸಾರ್ ನಮಸ್ಕಾರ, ನಾನು ಸುಂದರ ಪಾಟಾಜೆ ಮಾತನಾಡೋದು....
ಚಂದ್ರಶೇಖರ: ಆ ನಮಸ್ಕಾರ...ಹೇಳಿ
ಸುಂದರ ಪಾಟಾಜೆ: ಆಲೆಟ್ಟಿ ರಾಮಣ್ಣ ನಾಯ್ಕರ ಫೈಲ್ ಏನಾಯ್ತು?
ಚಂದ್ರಶೇಖರ: ಆ ಜನ ಸ್ವಲ್ಪ ಉಲ್ಟ ಅಂತೆ, ಅಲ್ಲಿನ ಬಿಜೆಪಿ ನಾಯಕರು ಬೇಡ ಅಂತಾರೆ. ಅಲ್ಲಿನ ಗ್ರಾಮದ ಲೀಡರ್ ಗಳ ಹತ್ತಿರ ನಾವು ಜನ ಹೇಗೆ ಅಂತ ಕೇಳ್ತೀವಿ, ಈ ಜನ ನಮ್ಮ ಪಕ್ಷಕ್ಕೆ ಸ್ವಲ್ಪ ಉಲ್ಟ ಅಂತ ಹೇಳ್ತಾರೆ
ಸುಂದರ ಪಾಟಾಜೆ: ಹೌದಾ....
ಚಂದ್ರಶೇಖರ: ನಮ್ಮ ಗ್ರಾಮದ ನಾಯಕರ ಜೊತೆ ಕೇಳದೇ ಏನನ್ನೂ ಮಾಡಲಿಕ್ಕೆ ಆಗಲ್ಲ. ಅಂಥವರಿಗೆ ಕೊಟ್ಟರೆ ಮತ್ತೆ ಸಮಸ್ಯೆ ಆಗುತ್ತೆ, ನಮ್ಮಲ್ಲಿ ಕಾರ್ಯಕರ್ತರು ಇಲ್ವಾ ಅಂತ ಕೇಳ್ತಾರೆ. ಇದರಿಂದ ಊರೊಳಗೆ ಸಂಘರ್ಷ ಆಗುತ್ತೆ. ಮೊದಲು ಗ್ರಾಮದಲ್ಲಿ ಕೇಳಿಯೇ ಮಾಡುವುದು. ಶಾಸಕರು ಕೂಡ ಅದನ್ನೆಲ್ಲ ಕೇಳ್ತಾರೆ. ಹಾಗಾಗಿ ಅದು ಆಗಿಲ್ಲ
ಸುಂದರ ಪಾಟಾಜೆ: ಶಾಸಕರ ಸಹಿ ಒಂದು ಆಗಬೇಕಲ್ಬಾ?
ಚಂದ್ರಶೇಖರ: ಶಾಸಕರ ಸಹಿ ಇಲ್ಲದೇ ಆಗಲ್ಲ, ಅವರ ಸಹಿ ಮುಖ್ಯ. ಫೀಲ್ಡಿಗೆ ಹೋಗುವ ಕಾರ್ಯಕರ್ತರು ಬೇಡ ಅಂದ್ರೆ ಏನೂ ಆಗಲ್ಲ. ಅವನು ಫುಲ್ ಆ ಸೈಡ್ ಸಪೋರ್ಟ್
ಸುಂದರ ಪಾಟಾಜೆ: ಯಾವ ಸೈಡ್?
ಚಂದ್ರಶೇಖರ: ಅದೇ ಕಾಂಗ್ರೆಸ್ ಸೈಡ್. ಇದನ್ನೆಲ್ಲಾ ಶಾಸಕರತ್ರ ಹೇಳಿದಾಗ ಬೇಡ ಮಾರಾಯ ಅಂದ್ರು. ನಾವು ಎಲ್ಲಾ ಕೇಳಿಯೇ ಮಾಡೋದು, ನಮ್ಮ ವೈಯಕ್ತಿಕ ಅಲ್ಲ
ಸುಂದರ ಪಾಟಾಜೆ: ನಮ್ಮ ಸಂಘಟನೆಗೆ ದೂರು ನೀಡಿದ ಕಾರಣ ಕೇಳಿದೆ
ಚಂದ್ರಶೇಖರ: ದೂರು ಕೊಡೋದಕ್ಕೆ ಏನಿದೆ? ಅವರು ಮೊದಲು ಸರಿ ಇರಬೇಕು, ಶಾಸಕರ ಹತ್ರ ಮಾತನಾಡಿ ನೋಡಲಿ