ತುಮಕೂರು(ಡಿ.03): ಓಲ್ಡ್‌ ಸ್ಟಾಕ್‌ ಈರುಳ್ಳಿ ಕೇಜಿಗೆ ಕೇವಲ 60 ರು. ಬನ್ನಿ ಬೇಗ ಬನ್ನಿ. ಬೇಗ ಬಂದವರಿಗೆ ಮಾತ್ರ ಲಕ್ಕಿ ಚಾನ್ಸ್‌. ಸ್ಟಾಕ್‌ ಕ್ಲೋಸ್‌ ಆದ್ಮೇಲೆ ಪಶ್ಚಾತ್ತಾಪ ಪಡಬೇಡಿ. ಕ್ಲೋಸ್‌ ಈರುಳ್ಳಿ ಕ್ಲೋಸ್‌, ಬನ್ರೀ, ಬನ್ರೀ ಬೇಗ ಬನ್ರೀ...

ಅಯ್ಯೋ ಈರುಳ್ಳಿ ಕೇಜಿಗೆ ಬರೀ 60 ರುಪಾಯಿ. ಅಯ್ಯೋ ಎಲ್ಲಿ ಸಿಗುತ್ತಪ್ಪಾ ಅಂತ ಯೋಚ್ನೆ ಮಾಡ್ತಾ ಇದ್ದೀರಾ. ಇದು ಪಟ್ಟಣದ ವಿಶ್ವ ವಿಜಯ ವಿದ್ಯಾಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸಂತೆಯಲ್ಲಿ ಮಕ್ಕಳು ಗ್ರಾಹಕರನ್ನು ಕೂಗಿ ಕೂಗಿ ಕರೆಯುತ್ತಿದ್ದ ಪರಿ.

ಈರುಳ್ಳಿ ತರಂಗಿಲ್ಲ, ಬೇಯಿಸಂಗಿಲ್ಲ: ಸಿಲಿಂಡರ್ ಬೆಲೆ ಏರಿದೆಯಲ್ಲ!

ಮಕ್ಕಳು ತಮ್ಮ ಮನೆಗಳಲ್ಲಿ ಬೆಳೆದಿದ್ದ ಆಹಾರ ಪದಾರ್ಥಗಳು, ದಿನಸಿ ಪದಾರ್ಥಗಳು ಸೇರಿದಂತೆ ಹಲವಾರು ವಸ್ತುಗಳನ್ನು ಮಾರಾಟ ಮಾಡಲು ಬಂದಿದ್ದರು. ಇದರಲ್ಲಿ ಈರುಳ್ಳಿ ಎಲ್ಲರ ಗಮನ ಸೆಳೆಯಿತು. ಮಾರ್ಕೆಟ್‌ನಲ್ಲಿ ಪ್ರತಿ ಕೇಜಿಗೆ ಸುಮಾರು .100 ಇದ್ದ ಈರುಳ್ಳಿಯ ಬೆಲೆ ಇಲ್ಲಿ ಕೇವಲ 60 ರು. ಆಗಿತ್ತು. ಸಂತೆಗೆ ಬಂದು ಮನೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಬಂದಿದ್ದವರು ಈರುಳ್ಳಿ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಯತ್ತ ನುಗ್ಗಿ ಪ್ರತಿ ಕೇಜಿಗೆ .60ರಂತೆ ಖುಷಿ ಪಟ್ಟರು. ವಿದ್ಯಾರ್ಥಿ ಚರಣ್‌ ತಮ್ಮ ಮನೆಯಲ್ಲಿ ಈ ಹಿಂದೆ ಬೆಳೆದಿದ ಈರುಳ್ಳಿಯನ್ನು ಮಕ್ಕಳ ಸಂತೆಯಲ್ಲಿ ಮಾರಿ ಎಲ್ಲರ ಗಮನ ಸೆಳೆದ. ಕೆಲವೇ ನಿಮಿಷಗಳಲ್ಲಿ ಒಂದು ಕ್ವಿಂಟಲ್‌ನಷ್ಟು ಈರುಳ್ಳಿ ಮಾರಾಟ ಮಾಡಿದನು.

ಇಳಿಯಿತು ಈರುಳ್ಳಿ ಬೆಲೆ : ಈಗೆಷ್ಟು ?

ಸಂತೆಯಲ್ಲಿ ಮಕ್ಕಳು ಸೊಪ್ಪು, ತರಕಾರಿ, ತಿಂಡಿ ತಿನಿಸುಗಳು, ತೆಂಗಿನಕಾಯಿ, ಪಾನೀಪುರಿ, ಚುರಿಮುರಿ, ಮಹಿಳೆಯರ ಸೌಂದರ್ಯವರ್ಧಕ ಸಾಧನಗಳು, ಮಕ್ಕಳ ಆಟದ ಸಾಮಾನು, ತಂಪು ಪಾನೀಯ, ಹಪ್ಪಳ, ಸಂಡಿಗೆ, ಫೇಣಿ, ಜೋಳ, ಹೆಸರುಕಾಳು, ತೊಗರಿ, ಉದ್ದು, ಕಡಲೇಕಾಯಿ ಸೇರಿದಂತೆ ಅನೇಕ ತರಾವರಿ ಸಾಮಾನುಗಳನ್ನು ಸಾಲಾಗಿಟ್ಟುಕೊಂಡು ಲವಲವಿಕೆಯಿಂದ ವ್ಯಾಪಾರ ಮಾಡಿದರು. ಪೋಷಕರೂ ಮಕ್ಕಳೊಂದಿಗೆ ಕೈಜೋಡಿಸಿದರು. ಕೊಳ್ಳುವವರು ಸಹಾ ಎಂದಿನಂತೆ ಮಾಮೂಲಿ ಚೌಕಾಸಿ ಮಾಡಿ ವಸ್ತುಗಳನ್ನು ಖರೀದಿಸುತ್ತಿದ್ದರು. ಹಳ್ಳಿಗಾಡಿನ ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಬೆಳೆದ ಧವಸ ಧಾನ್ಯಗಳು, ಬೆಣ್ಣೆ, ತರಕಾರಿ, ತೆಂಗಿನಕಾಯಿ ಇತ್ಯಾದಿ ತಂದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು.

ತಿಂಡಿಪೋತರಿಗೆ ಸುಗ್ಗಿ:

ಕೆಲವು ಮಕ್ಕಳುಗಳು ಪಾನಿಪುರಿ, ಬೇಲ್‌ ಪುರಿ, ಬೋಂಡ, ಸೂಪ್‌, ಕಾಂಗ್ರೆಸ್‌ ಮಸಾಲಾ, ಗುಗ್ಗರಿ, ಜ್ಯೂಸ್‌ನಂತಹ ತಿಂಡಿ ತಿನಿಸುಗಳನ್ನು ಸ್ಳಳದಲ್ಲಿಯೇ ತಯಾರಿಸಿ ಮಾರಾಟ ಮಾಡುತ್ತಿದ್ದರು. ಸಂತೆಗೆ ಬಂದಿದ್ದವರು ಮಕ್ಕಳು ಮಾಡಿದ್ದ ಬಗೆಬಗೆಯ ತಿಂಡಿ ತಿನಿಸುಗಳನ್ನು ಮನಸ್ಫೂರ್ತಿ ತಿಂದು ಸಂತಸಪಟ್ಟರು.

ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ, ವಿವಿಧ ಶಾಲೆಯ ಶಿಕ್ಷಕರಾದ ಪ್ರೇಮಾ, ಮಮತಾ, ಶೋಭಾ, ಲತಾ, ಚೈತ್ರಾ, ಚೇತನ್‌ ಕುಮಾರಿ, ಯಶೋದಾ, ಸುಮಿತ್ರಾ ಇದ್ದರು.