ಶಿವಾನಂದ ಗೊಂಬಿ

ಹುಬ್ಬಳ್ಳಿ[ಡಿ. 06]:  ಸೇಬಿಗಿಂತ ಈರುಳ್ಳಿಯೇ ತುಟ್ಟಿಯಾಗಿದೆ. ಕಾಶ್ಮೀರ ಆ್ಯಪಲ್‌ 100-120ಗೆ ಕೆಜಿ ದೊರೆಯುತ್ತಿದ್ದರೆ, ಉತ್ತಮ ಈರುಳ್ಳಿ 150 ವರೆಗೆ ಬಿಕರಿಯಾಗುತ್ತಿದೆ. ಉಳ್ಳಾಗಡ್ಡಿ ಅಕ್ಷರಶಃ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.

ಹೌದು! ಅತ್ತ ಎಪಿಎಂಸಿಗಳಲ್ಲಿ ಕ್ವಿಂಟಲ್‌ ಈರುಳ್ಳಿ 12000ಕ್ಕೆ ದಾಟಿದರೆ, ಇತ್ತ ಮಾರುಕಟ್ಟೆಗಳಲ್ಲಿ ಗ್ರಾಹಕರು ಕನಿಷ್ಠ  120-150 ಕೊಟ್ಟು ಕೆಜಿ ಈರುಳ್ಳಿ ಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಇದರಿಂದಾಗಿ ಸೇಬಿಗಿಂತ ಈರುಳ್ಳಿಯೇ ಕಾಸ್ಟ್ಲಿಯಾದಂತಾಗಿದೆ ಎಂದು ಗೊಣಗುತ್ತಾ ಗ್ರಾಹಕರು ಸ್ವಲ್ಪವೇ ಸ್ವಲ್ಪ ಲೆಕ್ಕ ಹಾಕಿ ಈರುಳ್ಳಿ ಕೊಳ್ಳುತ್ತಿದ್ದ ದೃಶ್ಯ ಗುರುವಾರ ವಾಣಿಜ್ಯನಗರಿ ಹುಬ್ಬಳ್ಳಿಯ ಜನತಾ ಬಜಾರ್‌ ಮಾರುಕಟ್ಟೆಯಲ್ಲಿ ಕಂಡು ಬಂದ ದೃಶ್ಯ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜನತಾ ಬಜಾರ್‌ ಹಣ್ಣು, ಹೂವು, ತರಕಾರಿ, ಕಾಳು ಕಡಿಗಳಿಗೆಲ್ಲ ಹೆಸರುವಾಸಿಯಾದ ಮಾರುಕಟ್ಟೆ. ಇಲ್ಲಿ ಹಣ್ಣಿನ ಅಂಗಡಿಗಳು ಖಾಲಿ ಖಾಲಿ ಹೊಡೆಯುತ್ತಿದ್ದರೆ, ಈರುಳ್ಳಿ ಮಾತ್ರ ಭರ್ಜರಿಯಾಗಿ ವ್ಯಾಪಾರವಾಗುತ್ತಿತ್ತು.

ಆ್ಯಪಲ್‌ ದರ:

ಕಾಶ್ಮೀರ, ವಾಷಿಂಗ್ಟನ್‌, ಶಿಮ್ಲಾ ಆ್ಯಪಲ್‌ಗಳು ಇಲ್ಲಿನ ಮಾರುಕಟ್ಟೆಗೆ ಬರುತ್ತವೆ. ಶಿಮ್ಲಾ ಹಾಗೂ ಕಾಶ್ಮೀರ ಹಣ್ಣುಗಳು 100-120 ಕೆಜಿ ಮಾರಾಟವಾಗುತ್ತಿವೆ. ಕೊಂಡು ಕೊಳ್ಳಲು ಗ್ರಾಹಕ ಹಿಂಜರಿದರೆ ವ್ಯಾಪಾರಿಯೇ ಚೌಕಾಶಿಗೆ ಮುಂದಾಗುತ್ತಾನೆ. 120 ಕೆಜಿ ಹೇಳಿದ್ದ ಹಣ್ಣನ್ನು 100 ವರೆಗೂ ಮಾರಾಟ ಮಾಡುತ್ತಾನೆ. ಇನ್ನು ವಾಷಿಂಗಟನ್‌ ಹಣ್ಣು ಮಾತ್ರ 200-220 ಕೆಜಿ ಮಾರಾಟವಾಗುತ್ತಿದೆ. ನಮ್ಮತ್ತ ಗ್ರಾಹಕರು ಸುಳಿಯುತ್ತಿಲ್ಲ. ನಾವೇ ಚೌಕಾಶಿ ಮಾಡಿ ವ್ಯಾಪಾರ ಮಾಡುತ್ತಿದ್ದೇವೆ ಎಂದು ಹಣ್ಣಿನ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈರುಳ್ಳಿ ದರ:

ಉತ್ತರ ಕರ್ನಾಟಕದಲ್ಲಿ ಈರುಳ್ಳಿಯನ್ನು ಉಳ್ಳಾಗಡ್ಡಿಯೆಂದು ಕರೆಯಲಾಗುತ್ತದೆ. ಸೇಬಿನಲ್ಲಿ ಯಾವ ರೀತಿ ಬಗೆಯ ಬಗೆಯ ತಳಿಗಳು ಇವೆಯೋ ಅದೇ ರೀತಿ ಉಳ್ಳಾಗಡ್ಡಿಯಲ್ಲೂ ತಳಿಗಳಿವೆ. ಪುಣೆ, ತೆಲಗಿ, ಹೈದ್ರಾಬಾದ್‌, ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ತೆಲಗಿ ಈರುಳ್ಳಿ 130-150 ಗೆ ಕೆಜಿಯಂತೆ ಮಾರಾಟ ವಾಗುತ್ತಿದ್ದರೆ, ಸ್ಥಳೀಕ ಈರುಳ್ಳಿ 100- 130 ವರೆಗೂ ಕೆಜಿಯಂತೆ ಮಾರಾಟವಾಗುತ್ತಿವೆ.

ಹಾಗಂತ ಅದಕ್ಕಿಂತ ಕಡಿಮೆ ದರವೇ ಇಲ್ಲ ಅಂತೇನೂ ಇಲ್ಲ. 80-90 ಕೆಜಿ ಈರುಳ್ಳಿಯೂ ಸಿಗುತ್ತದೆ. ಇದು ಅತ್ಯಂತ ಕಳಪೆ ಮಟ್ಟದ ಈರುಳ್ಳಿಯಾಗಿದೆ. ಮುಂಚೆ ದರ ಇಲ್ಲದಾಗ ನಿರುಪಯುಕ್ತ ಎಂದು ಎಸೆಯುತ್ತಿದ್ದ, ದನಕ್ಕೆ ಹಾಕುತ್ತಿದ್ದ ಈರುಳ್ಳಿ ಈಗ 80- 90 ಕೆಜಿಯಂತೆ ಮಾರಾಟವಾಗುತ್ತಿದೆ. ಈರುಳ್ಳಿ ಖರೀದಿಯಲ್ಲಿ ಚೌಕಾಶಿ ಎಂಬ ಮಾತೇ ಇಲ್ಲ. ನಾವೇ 12 ಸಾವಿರ, 13 ಸಾವಿರ ಕೊಟ್ಟು ಕ್ವಿಂಟಲ್‌ ತಂದು ಮಾರಾಟ ಮಾಡುತ್ತಿದ್ದೇವೆ. ನಿಮಗೆ ಬೇಕಾದರೆ ತೆಗೆದುಕೊಳ್ಳಿ ಬೇಡವಾದರೆ ಬಿಡಿ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಗ್ರಾಹಕರು ಗೊಣಗುತ್ತಲೇ ಅಲ್ಪಸ್ವಲ್ಪ ಈರುಳ್ಳಿಯನ್ನು ಕೊಳ್ಳುತ್ತಿದ್ದಾರೆ.

ನಿನ್ನೆ ಮೊನ್ನೆಯೂ ದರ ಹೆಚ್ಚಳವಿತ್ತು. ಆದರೆ, 90- 100 ರ ಗಡಿ ದಾಟಿರಲಿಲ್ಲ. ಆದರೆ, ಗು​ರು​ವಾರ ಅಕ್ಷರಶಃ ಕೊಂಡುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ತಂದೊಡ್ಡಿದೆ. ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಬೇಕು ಎಂಬ ಮಾತು ಗ್ರಾಹಕರದ್ದು. ಒಟ್ಟಿನಲ್ಲಿ ಗುರುವಾರ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಸೇಬಿಗಿಂತ ಈರುಳ್ಳಿ ಕಾಸ್ಟ್ಲಿಯಾಗಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿರುವುದಂತೂ ಸುಳ್ಳಲ್ಲ.

ಹೌದು! ಸೇಬಿಗಿಂತ ಈರುಳ್ಳಿ ದರ ಹೆಚ್ಚಳವಾಗಿದೆ. ಉತ್ತಮ ಈರುಳ್ಳಿ 120-150 ವರೆಗೂ ಮಾರಾಟವಾಗುತ್ತಿದೆ. ನಾವು ಏನ್ಮಾಡೋದು ಸಾರ್‌ ನಮಗೆ ಎಷ್ಟಕ್ಕೆ ಸಿಗುತ್ತದೆ. ಸ್ವಲ್ಪ ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದೇವೆ ಅಷ್ಟೇ ಎಂದು ಈರುಳ್ಳಿ ವ್ಯಾಪಾರಸ್ಥ
 ಮೊಹದ್ದೀನ ಶೇಖ ಅವರು ಹೇಳಿದ್ದಾರೆ. 

ಕಳಪೆ ಮಟ್ಟದ ಈರುಳ್ಳಿಯೇ 80-90 ಹೇಳ್ತಾರೆ. ಇನ್ನು ಉತ್ತಮ ಗುಣಮಟ್ಟದ ಈರುಳ್ಳಿಗೆ 150 ರೂವರೆಗೆ ಹೇಳ್ತಾರೆ. ಸೇಬು ಹಣ್ಣೇ 100 ಕೆಜಿ ದೊರೆಯುತ್ತಿದೆ. ಹೀಗಾದರೆ ಬಡವರು, ಮಧ್ಯಮ ವರ್ಗದವರು ಬದುಕು ಸಾಗಿಸುವುದು ಹೇಗೆ ? ಸರ್ಕಾರ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗೃಹಿಣಿ ದಾಕ್ಷಾಯಿಣಿ ಇಟಗಿ ಅವರು ತಿಳಿಸಿದ್ದಾರೆ.