ಐದೇ ದಿನದಲ್ಲಿ ದುಪ್ಪಟ್ಟು ದರ : ಸಾಮಾನ್ಯರಿಗೆ ಕೈಗೆಟುಕಲ್ಲ ಈರುಳ್ಳಿ

ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ  ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು ಇದೀಗ ಈರುಳ್ಳಿ ದರ ದುಪ್ಪಟ್ಟಾಗಿದೆ

Onion Price Raises In Karnataka snr

ಆರ್‌.ತಾರಾನಾಥ್‌

 ಚಿಕ್ಕಮಗಳೂರು (ಅ.23):  ಈರುಳ್ಳಿ ದುಬಾರಿಯಾದರೂ, ಇದರ ಲಾಭ ಮಾತ್ರ ನಮ್ಮ ಜಿಲ್ಲೆಯ ಬಯಲುಸೀಮೆಯ ರೈತರಿಗಿಲ್ಲ. ಕಾರಣ, ಕಳೆದ ಐದು ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಆದರೆ, ಜಿಲ್ಲೆಯ ರೈತರು ಬಳಿ ಮಾತ್ರ ಈರುಳ್ಳಿ ಫಸಲೇ ಇಲ್ಲ.

ಜಿಲ್ಲೆಯ ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲೂಕಿನ ಕೆಲವು ಭಾಗಗಳಲ್ಲಿ ಮುಂಗಾರಿನಲ್ಲಿ ಈರುಳ್ಳಿ ಪ್ರಮುಖ ಬೆಳೆ. ಸಕಾಲದಲ್ಲಿ ಮಳೆ ಬಂದು, ಈರುಳ್ಳಿ ಕೀಳುವ ಸಂದರ್ಭದಲ್ಲಿ ಬರದೆ ಇದ್ದರೆ ಬಂಪರ್‌ ಬೆಳೆ, ಇಷ್ಟೇ ಅಲ್ಲಾ, ಲಕ್ಕಿ ಬೆಲೆ.

ಆದರೆ, ಈ ಬಾರಿ ಜಿಲ್ಲೆಯ ರೈತರಿಗೆ ಉತ್ತಮ ಬೆಳೆಯೂ ಬಂದಿಲ್ಲ, ಬೆಲೆಯೂ ಇಲ್ಲದಂತಾಯಿತು. ಕಾರಣ, ಸಕಾಲದಲ್ಲಿ ಬಿತ್ತನೆ ಸಂದರ್ಭದಲ್ಲಿ ಮಳೆ ಬರಲಿಲ್ಲ. ಈರುಳ್ಳಿ ಕೇಳುವ ಸಂದರ್ಭದಲ್ಲಿ ಮಳೆ ಬಂದು ಅಪಾರ ನಷ್ಟವಾಯಿತು. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯ ನಡುವೆಯೂ ಕೆಲವು ರೈತರಿಗೆ ಉತ್ತಮ ಬೆಲೆ ಸಿಕ್ಕಿತು.

ಬೆಲೆ ಹೆಚ್ಚಳಕ್ಕೆ ಕಾರಣ:

ಈರುಳ್ಳಿ ಬೆಲೆ ಹೆಚ್ಚಳಕ್ಕೆ ಮಳೆಯೇ ಕಾರಣ. ಈರುಳ್ಳಿ ಬೆಳೆಗಾರರೇ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸದ್ಯ ಚಿಕ್ಕಮಗಳೂರು ಸೇರಿ ರಾಜ್ಯದಲ್ಲಿ ಈರುಳ್ಳಿ ಕೊಯ್ಲು ಸಂದರ್ಭದಲ್ಲಿ ಮಳೆ ಬಂದಿತು. ಕೆಲವೆಡೆ ರೈತರಿಗೆ ಅಪಾರ ನಷ್ಟವಾಯಿತು. ಕೊಳೆತ ಈರುಳ್ಳಿಯಲ್ಲೇ ಕೆಲವನ್ನು ಆಯ್ದು ಮಾರಾಟ ಮಾಡಲಾಯಿತು. ಆಗ ನಗರ ಪ್ರದೇಶಗಳಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 40 ರುಪಾಯಿ ಇತ್ತು. ಈ ಸಂದರ್ಭದಲ್ಲಿ ನೆರೆಯ ಮಹಾರಾಷ್ಟ್ರದಿಂದಲೂ ಕರ್ನಾಟಕಕ್ಕೆ ಈರುಳ್ಳಿ ಬರುತಿತ್ತು. ಆದರೆ, ಅಲ್ಲೂ ಮಳೆ ಬಂದು ರೈತರು ಫಸಲು ಕಳೆದುಕೊಂಡಿದ್ದಾರೆ. ಬೇಡಿಕೆಯಷ್ಟುಈರುಳ್ಳಿ ಇಲ್ಲದಿರುವುದರಿಂದ ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದಿಂದ ಈರುಳ್ಳಿ ತರಿಸಿಕೊಳ್ಳಲಾಗುತ್ತಿದೆ ಎಂದು ಸಗಟು ಈರುಳ್ಳಿ ವ್ಯಾಪಾರಸ್ಥರು ತಿಳಿಸಿದ್ದಾರೆ.

ಈರುಳ್ಳಿ ಬೆಲೆ ಕೇಳಿ ಕಂಗಾಲಾದ ಗ್ರಾಹಕ: ಇನ್ನೂ ಹೆಚ್ಚಾಗುವ ಸಾಧ್ಯತೆ ...

200 ರು. ಆಗುತ್ತೆ ಈರುಳ್ಳಿ:

ಮಧ್ಯಪ್ರದೇಶದಲ್ಲಿ ಈರುಳ್ಳಿ ಕೆ.ಜಿ.ಗೆ 50 ರು., ಸಾಗಾಣಿಕೆ ಹಾಗೂ ಇತರೆ ವೆಚ್ಚ ಸೇರಿ ಇಲ್ಲಿ ಕೆ.ಜಿ.ಗೆ 110 ರು.ಗೆ ಮಾರಾಟ ಮಾಡಲಾಗುತ್ತಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿ ಹೆಚ್ಚು ವ್ಯತ್ಯಾಸ ಕಂಡು ಬಂದರೆ ಇನ್ನೆರಡು ದಿನಗಳಲ್ಲಿ ಈಜಿಪ್ಟ್‌ನಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆಗ ಬೆಲೆ ಕೆ.ಜಿ.ಗೆ 200 ರು. ಗಡಿ ದಾಟುವ ಸಾಧ್ಯತೆ ವ್ಯಾಪಾರಸ್ಥರು ಅಂದಾಜು ಮಾಡಿದ್ದಾರೆ.

ಸಂಗ್ರಹಕ್ಕೆ ಯೋಗ್ಯವಲ್ಲ

ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವವರೆಗೆ ಅಡಕೆ, ತೆಂಗು, ಕಾಫಿ, ಭತ್ತ ಸೇರಿ ಇತರೆ ಬೆಳೆಗಳನ್ನು ರೈತರು ದಾಸ್ತಾನು ಮಾಡಿಕೊಳ್ಳಬಹುದು. ಈರುಳ್ಳಿ, ದಾಸ್ತಾನು ಮಾಡಿ ಇಡಲು ಸಾಧ್ಯವಿಲ್ಲ. ಅದರಲ್ಲೂ ತರೀಕೆರೆ ತಾಲೂಕಿನ ಅಜ್ಜಂಪುರ ಭಾಗದಲ್ಲಿ ಬೆಳೆಯುವ ಈರುಳ್ಳಿ ನೆಲದಿಂದ ಕಿತ್ತ ಮೇಲೆ ನಾಲ್ಕೈದು ದಿನಗಳು ಮಾತ್ರ ಇಡಬಹುದು. ಆರನೇ ದಿನಕ್ಕೆ ಇಡಲು ಸಾಧ್ಯವಿಲ್ಲ. ಕಾರಣ, ಹಾಳಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ರೈತರು ಕೂಡಲೇ ಮಾರಾಟ ಮಾಡಲಿದ್ದಾರೆ. ಆದರೆ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯ ಪ್ರದೇಶದಿಂದ ಬರುವ ಈರುಳ್ಳಿ ಕೆಲವು ದಿನಗಳವರೆಗೆ ದಾಸ್ತಾನು ಮಾಡಿ ಇಡಬಹುದು. ಅವು ಹಾಳಾಗುವುದಿಲ್ಲ ಎಂದು ಕೃಷಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios