ಭಾರೀ ಮಳೆಗೆ ನೆಲಕಚ್ಚಿದ ಬೆಳೆ, ಗಗನಕ್ಕೇರಿದ ಈರುಳ್ಳಿ ಬೆಲೆ, ಗ್ರಾಹಕರ ಕಣ್ಣಲ್ಲಿ ನೀರು..!
ಪೂರೈಕೆ ಕೊರತೆ: ನಗರದಲ್ಲಿ ಈರುಳ್ಳಿ ಕೇಜಿ 75| ಅತಿವೃಷ್ಟಿಯಿಂದ ನೆಲಕಚ್ಚಿದ ಈರುಳ್ಳಿ ಬೆಲೆ| ಬೆಂಗಳೂರಿಗೆ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ, ನಗರಕ್ಕೆ ಈಜಿಪ್ಟ್ ಈರುಳ್ಳಿ ಆಮದು?| ಮುಂದಿನ ದಿನಗಳಲ್ಲಿ ಮಳೆ ಹೀಗೆ ಸುರಿದರೆ ಬೆಲೆ ದುಪ್ಪಟ್ಟು|
ಬೆಂಗಳೂರು(ಅ.16): ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಈರುಳ್ಳಿ ಬೆಳೆ ನೆಲಕಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆ ಉಂಟಾಗಿ ಬೆಲೆ ಗಗನಕ್ಕೇರಿದೆ. ಹಾಪ್‌ಕಾಮ್ಸ್‌ನಲ್ಲಿ ಈರುಳ್ಳಿ ಕೆ.ಜಿ. 75 ತಲುಪಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಮುಂಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನಗರದ ಬಹುತೇಕ ಮಾರುಕಟ್ಟೆ, ಬೀದಿ ಬದಿ ವ್ಯಾಪಾರಿಗಳ ಬಳಿ ಸಾಧಾರಣ ಈರುಳ್ಳಿಯಿಂದ ಗುಣಮಟ್ಟದ ಈರುಳ್ಳಿವರೆಗೆ ಮಾರಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೊಂದೆಡೆ ಈರುಳ್ಳಿ ಕೊರತೆ ನೀಗಿಸಲು ಈಜಿಪ್ಟ್ ಈರುಳ್ಳಿ ಆಮದು ಮಾಡಿಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ.
ರಾಜ್ಯದಲ್ಲಿ ಬಂದಿರುವ ಹೊಸ ಬೆಳೆ ಅತಿವೃಷ್ಟಿಗೆ ನಾಶವಾಗಿದೆ. ಈರುಳ್ಳಿ ಬೆಳೆಯುವ ವಿವಿಧ ಜಿಲ್ಲೆಗಳಲ್ಲಿ ಮಳೆಗೆ ಬೆಳೆ ಭೂಮಿಯಲ್ಲೇ ಕೊಳೆಯುತ್ತಿದೆ. ಕಳೆದ ವರ್ಷವೂ ಸಹ ಮಳೆಗೆ ಈರುಳ್ಳಿ ಬೆಳೆ ನಾಶವಾಗಿ ಕೆ.ಜಿ.ಗೆ ನೂರು ರು. ದಾಟಿತ್ತು. ಮುಂದಿನ ದಿನಗಳಲ್ಲಿ ಮಳೆ ಹೀಗೆ ಸುರಿದರೆ ಬೆಲೆ ದುಪ್ಪಟ್ಟಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.
10 ಲಕ್ಷ ಮೌಲ್ಯದ ಈರುಳ್ಳಿ ತಿಪ್ಪೆಗೆಸೆದ ರೈತ
ಮಳೆಯಿಂದ ತರಕಾರಿ ಬೆಲೆಯೂ ಹೆಚ್ಚಾಗಿದೆ. ಇನ್ನೊಂದೆಡೆ ಮಾರುಕಟ್ಟೆಗೆ ಗುಣಮಟ್ಟದ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ರಾಜ್ಯದ ಕೆಲ ಜಿಲ್ಲೆಗಳಿಂದ ಹೊಸ ಈರುಳ್ಳಿ ಬರುತ್ತಿದ್ದರೂ ಹಸಿಯಾಗಿರುವುದರಿಂದ ಬಹುಬೇಗ ಕೊಳೆಯುತ್ತಿದೆ. ಅದನ್ನು ಹಲವು ದಿನಗಳು ದಾಸ್ತಾನು ಇಡಲು ಆಗುವುದಿಲ್ಲ. ಈ ಹಿಂದಿನ ವರ್ಷಕ್ಕೆ ಹೋಲಿಸಿದ್ದಲ್ಲಿ ಪೂರೈಕೆ ಕಡಿಮೆ ಇದೆ. ಸಗಟು ಮಾರುಕಟ್ಟೆಯಲ್ಲೇ ಮಹಾರಾಷ್ಟ್ರ ಈರುಳ್ಳಿಗೆ ಬಹುಬೇಡಿಕೆ ಇದೆ. ಸ್ಥಳೀಯ ಈರುಳ್ಳಿ ಕೆ.ಜಿ. .50 ನಿಗದಿಯಾಗಿದೆ. ಹೀಗಾಗಿ ಬೆಲೆ ಹೆಚ್ಚಳವಾಗಿದೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಹೇಳಿದರು.
ಮಾರುಕಟ್ಟೆಗೆ ಡ್ಯಾಮೇಜ್ ಈರುಳ್ಳಿ ಬರುತ್ತಿದೆ. ಅಕ್ಟೋಬರ್ ಮಾಸದಲ್ಲಿ ಅಂದಾಜು 80 ಸಾವಿರ ಚೀಲ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ, ಇದೀಗ 50 ಸಾವಿರ ಚೀಲ ಮಾತ್ರ ಈರುಳ್ಳಿ ಬರುತ್ತಿದೆ. ಈ ವರ್ಷ ಶೇ.50ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 50 ರಿಂದ 55, ಮಧ್ಯಮ ಕೆ.ಜಿ. .30ರಿಂದ 45 ರವರೆಗೆ ಬೆಲೆ ನಿಗದಿಯಾಗಿದೆ. ಮಹಾರಾಷ್ಟ್ರ ಹಳೆಯ ಈರುಳ್ಳಿ ಹೆಚ್ಚು ಬಂದರೆ ಬೆಲೆ ಇಳಿಕೆಯಾಗಬಹುದು. ಇಲ್ಲದಿದ್ದಲ್ಲಿ 2-3 ತಿಂಗಳು ಬೆಲೆ ಏರಿಳಿತ ಕಾಣಲಿದೆ. ಈರುಳ್ಳಿ ಕೊರತೆ ನೀಗಿಸಲು ಈಜಿಪ್ಟ್‌ನಿಂದ ಆಮದು ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ಯಶವಂತಪುರ ಎಪಿಎಂಸಿ ಆಲೂಗಟ್ಟೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯ್ ಶಂಕರ್ ತಿಳಿಸಿದರು.