ಹುಬ್ಬಳ್ಳಿ(ಸೆ.29): ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಕಳೆದ ವಾರಕ್ಕೆ ಹೋಲಿಸಿದಲ್ಲಿ ಬೆಲೆ ಕೊಂಚ ತಗ್ಗಿದ್ದರೂ ದೀಪಾವಳಿಗೆ ಮುನ್ನವೆ ಈರುಳ್ಳಿ ಕೊಳ್ಳುವಾಗ ಕಣ್ಣೀರು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಆಗಸ್ಟ್ ಮೊದಲೆರಡು ವಾರ ಸುರಿದ ಮಳೆ ಈರುಳ್ಳಿ ರೈತನ ಹೊಟ್ಟೆ ಮೇಲೆ ಹೊಡೆದಿದೆ. ಅದರ ಪರಿಣಾಮವೀಗ ಗ್ರಾಹಕರ ಮೇಲಾಗುತ್ತಿದೆ. 

ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿರುವ ಹಾಗೂ ಭೂಮಿಯಲ್ಲಿ ತೇವಾಂಶ ನಿಂತು ಬೆಳೆ ಕೊಳೆಯುತ್ತಿರುವ ಕಾರಣ ಇಳುವರಿ ನೆಲಕಚ್ಚಿದೆ. ಅಕ್ಟೋಬರ್ ಅಂತ್ಯದಿಂದ ಮಾರುಕಟ್ಟೆಗೆ ಹೊಸ ಬೆಳೆ ಬರಲು ಆರಂಭವಾಗುವ ಕಾರಣ ಬೆಲೆ ಏರಿಕೆ ಇರುವುದಿಲ್ಲ. ಆದರೆ, ಉಳ್ಳಾಗಡ್ಡೆ ಮಣ್ಣಲ್ಲೆ ಕೊಳೆತು ಹೋಗಿರುವುದರಿಂದ ಬೆಲೆ ಹೆಚ್ಚಾಗಿದೆ. 

ಕಳೆದ ವರ್ಷ ಈ ಸಂದರ್ಭದಲ್ಲಿ ಈರುಳ್ಳಿ ಬೆಲೆ 3 ಸಾವಿರ ಇತ್ತು. ಆದರೆ, ಈ ಬಾರಿ ಕಳೆದ ವಾರ 4500 ಮುಟ್ಟಿತ್ತು. ಪ್ರಸ್ತುತ 3700 ರಿಂದ 3800 ಗೆ ಇಳಿ ಮುಖವಾಗಿದೆ. ಆದರೆ, ಅಕ್ಟೋಬರ್‌ನಲ್ಲಿ ಯಾವ ಪ್ರಮಾಣದಲ್ಲಿ ಹೊಸ ಈರುಳ್ಳಿ ಮಾರುಕಟ್ಟೆ ಪ್ರವೇಶಿಸುತ್ತದೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿ ಬೆಲೆ ನಿರ್ಧಾರವಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು. ಇಲ್ಲಿನ ಅಮರಗೋಳ ಎಪಿಎಂಸಿಗೆ ಈ ಸಂದರ್ಭದಲ್ಲಿ ಗರಿಷ್ಠ 80 ಲಾರಿಗಳು ಈರುಳ್ಳಿ ಹೊತ್ತು ತರುತ್ತಿದ್ದವು. ಆದರೆ, ಸದ್ಯ ವಿವಿಧೆಡೆಯಿಂದ 40-50 ಲಾರಿಗಳು ಮಾತ್ರ ಬರುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಅದರಲ್ಲೂ ಉತ್ತಮ ಗುಣಮಟ್ಟದ ಈರುಳ್ಳಿ ಕಡಿಮೆ. ಇವುಗಳ ಬೆಲೆ 4 ಸಾವಿರದ ವರೆಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಗೆ 35 ರಿಂದ 40 ವರೆಗೂ ಬೆಲೆಯಿದೆ. ನವರಾತ್ರಿ ಹಬ್ಬದ ಕಾರಣ ಮುಂದಿನ ವಾರ ಬೆಲೆ ಏರಿಳಿತವಾಗುವ ಸಾಧ್ಯತೆಯಿದೆ. ಎಪಿಎಂಸಿಗೆ ವಿಜಯಪುರ, ಗದಗ, ನರಗುಂದ, ನವಲಗುಂದ, ಹಾವೇರಿ, ಧಾರವಾಡ, ಬಾಗಲಕೋಟೆ, ಬಸವನಬಾಗೇವಾಡಿ, ರಾಮದುರ್ಗ ಸೇರಿ ವಿವಿಧೆ ಡೆಯಿಂದ ಈರುಳ್ಳಿ ಬರುತ್ತದೆ. ಇದರಲ್ಲಿ ಸ್ಥಳೀಯವಾಗಿ ಬರುತ್ತಿದ್ದ ಲಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. 

ಶನಿವಾರ ಎಪಿಎಂಸಿಗೆ 54  ಲಾರಿ ಈರುಳ್ಳಿ ಬಂದಿದೆ. ದೀಪಾವಳಿ ನಂತರ 150  ಲಾರಿಗಳ ವರೆಗೆ ಈರುಳ್ಳಿ ಬರುತ್ತದೆ ಎಂದು ಎಪಿಎಂಸಿ ವ್ಯಾಪಾರಸ್ಥ ವಿಜಯ ಭಾಗ್ವತ ತಿಳಿಸಿದರು. ಇನ್ನು, ಮಾರುಕಟ್ಟೆಗೆ ಬರುವ ಈರುಳ್ಳಿಯನ್ನು ವಾರದಲ್ಲಿಯೆ ನಾವು ಬೇರೆ ಮಾರುಕಟ್ಟೆಗೆ ಕಳಿಸುತ್ತಿದ್ದೇವೆ. ಹಸಿಯಾಗಿರುವ ಉಳ್ಳಾಗಡ್ಡಿ ತೆಗೆದ ಬಳಿಕ ಹೆಚ್ಚು ದಿನ ಇಟ್ಟುಕೊಳ್ಳುವ ಪರಿಸ್ಥಿತಿಯೂ ಇಲ್ಲ. ಮೂರ್ನಾಲ್ಕು ದಿನಗಳಲ್ಲಿಯೆ ಗ್ರಾಹಕನಿಗೆ ಪೂರೈಕೆಯಾಗುವಂತೆ ನೋಡಿಕೊಳ್ಳಲು ಯತ್ನಿಸುತ್ತಿದ್ದೇವೆ ಎಂದರು. 

ಈ ಬಗ್ಗೆ ಮಾತನಾಡಿದ ಬೀದಿ ವ್ಯಾಪಾರಸ್ಥ ನಾಗರಾಜ ಮಾತನಾಡಿ, ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೇಡಿಕೆಯಿದೆ, ಆದರೆ ಅಗತ್ಯದಷ್ಟು ಪೂರೈಕೆ ಆಗುತ್ತಿಲ್ಲ. ಪೂರೈಕೆ ಆದರೂ ಬೆಲೆ ಹೆಚ್ಚಾಗಿದೆ. ಏಕಾಏಕಿ ಬೆಲೆಯೇರಿಕೆ ಅಗಿರುವ ಕಾರಣ ಗ್ರಾಹಕರು ಬೇಸರಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. 

ಸದ್ಯ ಎಪಿಎಂಸಿಗೆ 50 ಲಾರಿಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಕೊಂಚ ಏರಿಕೆಯಾಗಬಹುದಾದರೂ ಇದೇ ಬೆಲೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಈರುಳ್ಳಿ ಹೋಲ್‌ಸೇಲ್ ವ್ಯಾಪಾರಸ್ಥ ವಿಜಯ ಭಾಗ್ವತ ಅವರು ಹೇಳಿದ್ದಾರೆ.