ಬೆಂಗಳೂರು(ಮಾ.20): ಕೊರೋನಾ ವೈರಸ್‌ ಹರಡುವ ಭಯದಿಂದ ಗ್ರಾಹಕರು ಮಾರುಕಟ್ಟೆಯತ್ತ ಸುಳಿಯದ್ದರಿಂದ ಈರುಳ್ಳಿ ಬೆಲೆ ಕುಸಿತವಾಗಿದೆ. ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಕ್ವಿಂಟಾಲ್‌ಗೆ 1700, ಮಧ್ಯಮ 1100ರಿಂದ 1600, ಸಾಧಾರಣ 500ರಿಂದ 900 ವರೆಗೆ ನಿಗದಿಯಾಗಿದೆ.

ಈ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ ಈರುಳ್ಳಿ 2,000ಕ್ಕೆ ಖರೀದಿಯಾಗುತ್ತಿತ್ತು. ಇದೀಗ ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಈರುಳ್ಳಿ ಉತ್ತಮ ಇಳುವರಿ ಬಂದಿರುವುದರಿಂದ ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. ಇದರಿಂದ ಬೇಡಿಕೆ ಕುಸಿದು, ಬೆಲೆ ಇಳಿಕೆಯಾಗಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ 100 ರು.ಗೆ 4 ಕೆ.ಜಿ. ಮಾರಾಟ ಮಾಡಲಾಗುತ್ತಿದೆ.

200 ರೂ.ನಿಂದ 10 ರೂಪಾಯಿಗಿಳಿದ ಈರುಳ್ಳಿ ಬೆಲೆ, ರಫ್ತಿಗೆ ಅವಕಾಶ

ಇನ್ನೊಂದೆಡೆ ಸಾವಿರಾರು ರೈತರು, ಗ್ರಾಹಕರು, ವ್ಯಾಪಾರಿಗಳು, ಖರೀದಿದಾರರು ಇರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೋನಾ ಸೋಂಕು ಬಹುಬೇಗ ಹರಡಬಹುದು ಎಂಬ ದೃಷ್ಟಿಯಿಂದ ಜನರು ಮಾರುಕಟ್ಟೆಗೆ ಹೋಗುತ್ತಿಲ್ಲ. ಇದರಿಂದ ರೈತರು ತಂದ ಭಾರಿ ಪ್ರಮಾಣದ ಈರುಳ್ಳಿ ಖರೀದಿಯಾಗದೆ ಹಾಗೆ ಉಳಿದಿದೆ. ಈರುಳ್ಳಿ ಮಾರಾಟವಾಗದೆ, ಮಾರುಕಟ್ಟೆಗೆ ತಂದಿರುವ ಬಾಡಿಗೆಯೂ ಸಿಗದೆ ರೈತರು ಪರದಾಡುತ್ತಿದ್ದಾರೆ.