ನವದೆಹಲಿ(ಮಾ.03): ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿ ಕೆಜಿಗೆ 200 ರು.ವರೆಗೆ ತಲುಪಿದ್ದ ಈರುಳ್ಳಿ ಬೆಲೆ ಇದೀಗ ಕೇಜಿಗೆ 10 ರು.ವರೆಗೂ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಮತ್ತು ಮಾರುಕಟ್ಟೆಗೆ ಹೊಸ ಬೆಳೆ ಆಗಮನವಾಗಿರುವ ಹಿನ್ನೆಲೆಯಲ್ಲಿ ಈರುಳ್ಳಿ ರಫ್ತಿಗೆ ಹೇರಿದ್ದ ನಿಷೇಧ ಹಿಂಪಡೆದು, ಮಾ.15 ರಿಂದ ಈರುಳ್ಳಿ ರಫ್ತಿಗೆ ಅವಕಾಶ ಮಾಡಿ ಕೊಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಆ ಮೂಲಕ ಸುಮಾರು ಆರು ತಿಂಗಳ ಕಾಲ ಈರುಳ್ಳಿ ರಫ್ತಿನ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿದಂತಾಗಿದೆ. ಮಾಚ್‌ರ್‍ 15ರಿಂದ ರೈತರ ಹಿತಕ್ಕಾಗಿ ಸರ್ಕಾರ ಈರುಳ್ಳಿ ರಫ್ತಿಗೆ ಅವಕಾಶ ಮಾಡಿಕೊಡಲಿದೆ.

ಈ ನಿರ್ಧಾರ ರೈತರ ಆದಾಯ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಪಿಯೂಷ್‌ ಗೋಯಲ್‌ ಟ್ವೀಟ್‌ ಮಾಡಿದ್ದಾರೆ. ಸದ್ಯ ಹೊಸ ಬೆಳೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಬಂಪರ್‌ ಬೆಳೆಯಿಂದಾಗಿ ಬೆಲೆ ಇಳಿಕೆಯಾಗಿದೆ. ಹಾಗಾಗಿ ಸರ್ಕಾರ ಈರುಳ್ಳಿ ರಫ್ತಿಗೆ ಅವಕಾಶ ಮಾಡಿಕೊಟ್ಟಿದೆ.