ಅಕಾಲಿಕ ಮಳೆ ಆಪತ್ತು: ಈರುಳ್ಳಿ ಬೆಲೆಗೆ ವಿಪತ್ತು, ಕಂಗಾಲಾದ ರೈತ..!
* ದಿಢೀರನೆ ಕುಸಿದ ಈರುಳ್ಳಿ ಬೆಲೆ
* ಆವಕ ಹೆಚ್ಚಳವಾಗಿದ್ದೆ ದರ ಕುಸಿತಕ್ಕೆ ಕಾರಣ
* ಎಪಿಎಂಸಿಯಲ್ಲೂ ಸಿಗುತ್ತಿಲ್ಲ ಬೆಲೆ
ರುದ್ರಪ್ಪ ಆಸಂಗಿ
ವಿಜಯಪುರ(ಮೇ.20): ಅಕಾಲಿಕ ಮಳೆ ಜನಸಂಚಾರವನ್ನು ಮಾತ್ರವಲ್ಲ, ರೈತರಿಗೂ ಕಂಟಕವಾಗಿದೆ. ಕೈಗೆ ಬಂದ ಬೆಳೆಗಳು, ಬಾಯಿಗೆ ಬರದಂತಹ ಪರಿಸ್ಥಿತಿ ರೈತರದ್ದು. ಬಂದಿರುವ ಬೆಳೆಗಳನ್ನು ಕೈಗೆ ಬಂದಷ್ಟುಬೆಲೆಗೆ ಮಾರಾಟ ಮಾಡುತ್ತಿದ್ದಾನೆ ರೈತ. ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವುದರಿಂದ ಬೆಳೆಗಳು ಹಾಳಾಗಲು ಪ್ರಮುಖ ಕಾರಣವಾಗಿದೆ. ಅದರಲ್ಲಿ ಪ್ರಮುಖವಾಗಿ ಈರುಳ್ಳಿ ಕೂಡ ಬೆಲೆ ಕ್ಷೀಣಗೊಂಡು ರೈತ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.
ಹೊಲದಲ್ಲಿ ಈರುಳ್ಳಿ ಕಿತ್ತಾಗಿದೆ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅದು ರೈತನ ಕೈಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಈರುಳ್ಳಿಯನ್ನಾದರೂ ಮಾರುಕಟ್ಟೆಗೆ ಸಾಗಿಸಿದರೆ ಅಲ್ಲಿಯೂ ಅದಕ್ಕೆ ಯೋಗ್ಯ ಬೆಲೆ ಸಿಗುತ್ತಿಲ್ಲ. ತಮಗಿಷ್ಟದ ದರ ನೀಡಿ ಖರೀದಿಸುತ್ತಿದ್ದಾರೆ ವ್ಯಾಪಾರಿಗಳು. ಹಾಕಿದ ಬಂಡವಾಳ ಕೂಡ ಕೈಗೆ ಬರುತ್ತಿಲ್ಲ. ಮುಂದೇನು ಮಾಡುವುದು ಎಂಬ ಚಿಂತೆ ರೈತನದ್ದು.
Karnataka SSLC 2022 Topper ಬಡತನದಲ್ಲಿ ಅರಳಿದ ವಿಜಯಪುರದ ಪ್ರತಿಭೆ ರಾಜ್ಯಕ್ಕೆ ಟಾಪರ್!
ಎಪಿಎಂಸಿಯಲ್ಲೂ ಸಿಗುತ್ತಿಲ್ಲ ಬೆಲೆ:
ಹೊಲದಲ್ಲಿ ಬೆಳೆದು ನಿಂತ ಈರುಳ್ಳಿ ನೀರಿನಲ್ಲಿ ನಿಂತು ಸಂಪೂರ್ಣ ಹಾಳಾಗುತ್ತದೆ ಎಂಬ ಭೀತಿ ರೈತರನ್ನು ಆವರಿಸಿದೆ. ಹಾಗಾಗಿ ಬಹುತೇಕ ಈರುಳ್ಳಿ ಬೆಳೆಗಾರರು ತಮ್ಮ ಹೊಲದಲ್ಲಿ ಬೆಳೆದು ನಿಂತ ಈರುಳ್ಳಿಯನ್ನು ಕಿತ್ತು ಕೈಗೆ ಬಂದಷ್ಟು ಬರಲಿ ಎಂದು ಎಪಿಎಂಸಿಗೆ ತರುತ್ತಿದ್ದಾರೆ. ದಿನವೂ ಸಾವಿರಾರು ಕ್ವಿಂಟಲ್ ಈರುಳ್ಳಿಯನ್ನು ರೈತ ಎಪಿಎಂಸಿಗೆ ತರುತ್ತಿದ್ದಾನೆ. ಆದರೆ, ಅಲ್ಲಿ ಬೆಲೆ ದಿಢೀರನೆ ಕುಸಿದಿದೆ. ಹಾಕಿದ ಬಂಡವಾಳ ಕೂಡ ಈರುಳ್ಳಿಯಿಂದ ಬರುತ್ತಿಲ್ಲ ಎಂದು ರೈತ ಗೋಳಿಡುತ್ತಿದ್ದಾನೆ.
ರೈತರು ಒಮ್ಮೆಲೆ ಎಪಿಎಂಸಿಗೆ ಈರುಳ್ಳಿಯನ್ನು ತಂದಿದ್ದರಿಂದ ಆವಕ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ .1ಗೆ ಒಂದು ಕೆಜಿ ಈರುಳ್ಳಿ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ದೊಡ್ಡ ಗಾತ್ರದ ಈರುಳ್ಳಿಗೆ .6 ಕೆಜಿಯಂತೆ ಮಾರಾಟವಾಗುತ್ತಿದೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ವಾಪಸ್ ಕೊಂಡೊಯ್ದರೆ ಮಳೆಯಿಂದ ನೆಲ ಕೂಡ ತಂಪಾಗಿದೆ. ಎಲ್ಲಿಡಬೇಕು ಎಂಬ ಚಿಂತೆ ಅವರನ್ನು ಬಾಧಿಸಿದೆ. ಹೀಗಾಗಿ ಸಿಕ್ಕ ದರದಲ್ಲೇ ಕೊಟ್ಟು ಹೋಗುತ್ತಿದ್ದಾರೆ.
ಜಿಲ್ಲೆಯ ಕೊಲ್ಹಾರ, ಬಸವನ ಬಾಗೇವಾಡಿ, ನಿಡಗುಂದಿ ಮುಂತಾದ ತಾಲೂಕುಗಳಲ್ಲಿ ಈರುಳ್ಳಿಯನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಸಾವಿರಾರು ಎಕರೆ ಜಮೀನು ಈರುಳ್ಳಿಯನ್ನೇ ಆವರಿಸಿಕೊಂಡಿದೆ. ಧಾರಣೆ ಬಂದರೆ ರೈತರಿಗೆ ಬಂಪರ್ ಹೊಡೆದಂತೆ. ರೈತರು ಕೂಡ ಕೈತುಂಬ ಹಣ ಪಡೆದುಕೊಂಡು ಸಾಲದಿಂದ ಮುಕ್ತರಾಗುತ್ತಾರೆ. ಈ ರೀತಿ ವಿಪರೀತ ಮಳೆಯಾದರೆ ರೈತರ ಹೊಲದಲ್ಲಿನ ಈರುಳ್ಳಿ ಬೆಳೆ ನೀರಲ್ಲಿ ನಿಂತು ಕೊಳೆತು ಹೋಗುತ್ತದೆ. ಕಳೆದ 15 ದಿನಗಳ ಹಿಂದೆ ಈರುಳ್ಳಿ ಬೆಳೆ ಪ್ರದೇಶದಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ಹೀಗಾಗಿ ಇಲಾಯಿಯಲ್ಲಿ ಸಂಗ್ರಹಿಸಡಲಾದ ಈರುಳ್ಳಿ ಕೊಳೆಯಲು ಆರಂಭಿಸಿತು. ರೈತರು ಹೆದರಿ ಎಪಿಎಂಸಿಗೆ ಉಳ್ಳಾಗಡ್ಡಿ ತಂದು ಪುಕ್ಕಟೆ ಕೊಟ್ಟು ಹೋದಂತೆ ಆಗಿದೆ. ಕೆಲವು ರೈತರು ಹೊಲದಲ್ಲಿಯೇ ಈರುಳ್ಳಿಯನ್ನು ಬಿಟ್ಟಿದ್ದಾರೆ. ಅಲ್ಲಿಯೇ ಅದು ಗೊಬ್ಬರವಾಗಲಿ. ಆದರೆ, ಅದರ ಖರ್ಚನ್ನು ನಿಭಾಯಿಸುವುದು ಕಷ್ಟ ಎಂದಿದ್ದಾರೆ.
ಎರಡು ಎಕರೆಯಲ್ಲಿ ಈರುಳ್ಳಿಯನ್ನು ಬೆಳೆದಿದ್ದೆ. 400 ಪಾಕೆಟ್ ಈರುಳ್ಳಿ ಬೆಳೆಯಲಾಗಿತ್ತು. ಧಾರಣೆ ಕಡಿಮೆ ಇದ್ದರೂ ಸುಮಾರು . 2 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದೆ. ಆದರೆ ಈ ಬಾರಿ ಆಲಿಕಲ್ಲು ಮಳೆಯಾದ ಪರಿಣಾಮ ಈರುಳ್ಳಿ ಸಂಗ್ರಹಿಸಿ ಇಟ್ಟರೂ ಕೊಳೆಯ ತೊಡಗಿತು. ಹಾಗಾಗಿ ಎಪಿಎಂಸಿಗೆ ತಂದು ಮಾರಾಟ ಮಾಡಲಾಗಿದೆ. ಈರುಳ್ಳಿ ಕೃಷಿ ಮಾಡಿದ ಖರ್ಚು, ಆಳುಗಳ ಖರ್ಚು ಕೂಡ ಬರಲಿಲ್ಲ. ಬರೀ .30 ಸಾವಿರ ಮಾತ್ರ ಕೈಗೆ ಬಂದಿದೆ ಅಂತ ಮಸಬಿನಾಳ ರೈತ ನಂದಪ್ಪ ಮಡಗೊಂಡ ಹೇಳಿದ್ದಾರೆ.