ಹಾವೇರಿ ತಾಲ್ಲೂಕಿನ ಹಾವನೂರು ಗ್ರಾಮದಲ್ಲಿ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಒಂದು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ಆಸ್ಪತ್ರೆಯ ಮುಂದೆ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದ್ದು, ವೈದ್ಯರ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ: ಸರ್ಕಾರಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರು ಸಿಗದೆ, ಸೂಕ್ತ ಚಿಕಿತ್ಸೆ ಲಭಿಸದೇ ಕೇವಲ ಒಂದು ವರ್ಷದ ಹೆಣ್ಣು ಮಗುವೊಂದು ಪ್ರಾಣ ಕಳೆದುಕೊಂಡಿರುವ ಕರುಳು ಹಿಂಡುವ ಘಟನೆ ಹಾವೇರಿ ತಾಲ್ಲೂಕಿನ ಹಾವನೂರು ಗ್ರಾಮದಲ್ಲಿ ನಡೆದಿದೆ. ಭವಾನಿ ಮಹೇಶ ಕಿಳ್ಳಿಕ್ಯಾತರ್ (1 ವರ್ಷ) ಮೃತಪಟ್ಟ ದುರ್ದೈವಿ ಮಗುವಾಗಿದ್ದಾಳೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆಯ ಮುಂದೆಯೇ ಮಗುವಿನ ಶವವನ್ನಿಟ್ಟು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಆಟವಾಡುತ್ತಿದ್ದ ಮಗು ಏಕಾಏಕಿ ಮೂರ್ಛೆ ಹೋಗಿತ್ತು:
ಮಗು ಭವಾನಿ ಮನೆಯಲ್ಲಿ ಎಂದಿನಂತೆ ನಗುನಗುತ್ತಾ ಆಟವಾಡುತ್ತಿತ್ತು. ಆದರೆ ಆಟವಾಡುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಮಗು ಪ್ರಜ್ಞೆ ತಪ್ಪಿ ಮೂರ್ಛೆ ಹೋಗಿದೆ. ಇದರಿಂದ ತೀವ್ರ ಆತಂಕಗೊಂಡ ಪೋಷಕರು ತಕ್ಷಣವೇ ಮಗುವನ್ನು ಉಪಚರಿಸಲು ಹಾವನೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಇರಲಿಲ್ಲ ವೈದ್ಯರು
ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಅಲ್ಲಿ ಯಾವುದೇ ವೈದ್ಯರು ಕರ್ತವ್ಯದಲ್ಲಿ ಇರಲಿಲ್ಲ ಎನ್ನಲಾಗಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರೂ ತುರ್ತು ಚಿಕಿತ್ಸೆ ನೀಡಲು ವೈದ್ಯರಿಲ್ಲದ ಕಾರಣ ಪೋಷಕರು ಅಸಹಾಯಕರಾಗಿ ಕಣ್ಣೀರು ಹಾಕಿದ್ದಾರೆ. ಅಲ್ಲಿ ಯಾವುದೇ ಸಕಾಲಿಕ ವೈದ್ಯಕೀಯ ನೆರವು ಸಿಗದ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಹಾವನೂರಿನ ಪಕ್ಕದ ಪಟ್ಟಣವಾದ ಗುತ್ತಲದ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಹಾವನೂರಿನಿಂದ ಗುತ್ತಲ ಪಟ್ಟಣದ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಮಗು ಜೀವ ಕಳೆದುಕೊಂಡಿದೆ. ಸಕಾಲಕ್ಕೆ ಹಾವನೂರು ಆಸ್ಪತ್ರೆಯಲ್ಲೇ ಚಿಕಿತ್ಸೆ ಸಿಕ್ಕಿದ್ದರೆ ನಮ್ಮ ಮಗು ಬದುಕುತ್ತಿತ್ತು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.
ಶವವಿಟ್ಟು ಪ್ರತಿಭಟನೆ, ಸಾರ್ವಜನಿಕರ ಆಕ್ರೋಶ:
ವೈದ್ಯರ ಬೇಜವಾಬ್ದಾರಿತನ ಹಾಗೂ ಆಸ್ಪತ್ರೆಯ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ನೇರ ಕಾರಣ ಎಂದು ರೊಚ್ಚಿಗೆದ್ದ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಮಗುವಿನ ಶವವನ್ನು ಹಾವನೂರು ಸರ್ಕಾರಿ ಆಸ್ಪತ್ರೆಯ ಮುಂದೆಯೇ ಇಟ್ಟು ಧರಣಿ ಕುಳಿತರು. ಆರೋಗ್ಯ ಇಲಾಖೆ ಹಾಗೂ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಗೈರುಹಾಜರಿಯಿಂದಾಗಿ ಬಡವರ ಜೀವಗಳು ಬಲಿಯಾಗುತ್ತಿವೆ ಎಂದು ಸಾರ್ವಜನಿಕರು ಆಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ತಾಲ್ಲೂಕು ವೈದ್ಯಾಧಿಕಾರಿ ಭೇಟಿ:
ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಹಾವೇರಿ ತಾಲ್ಲೂಕು ವೈದ್ಯಾಧಿಕಾರಿ (ಟಿ.ಎಚ್.ಒ) ಡಾ. ಪ್ರಭಾಕರ್ ಕುಂದೂರ ಅವರು ತಕ್ಷಣ ಹಾವನೂರು ಆಸ್ಪತ್ರೆಗೆ ಭೇಟಿ ನೀಡಿದರು. ಸ್ಥಳದಲ್ಲಿದ್ದ ಉದ್ರಿಕ್ತ ಜನರನ್ನು ಮಾತುಕತೆ ನಡೆಸಿ ಮಗುವಿನ ಕುಟುಂಬ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ವೇಳೆ ಸಾರ್ವಜನಿಕರು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಮುಗಿಬಿದ್ದು, ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದರು.
ಪೊಲೀಸ್ ಪ್ರಕರಣ ದಾಖಲು:
ಘಟನೆಗೆ ಸಂಬಂಧಿಸಿದಂತೆ ಸದ್ಯ ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಮುಂದಿನ ತನಿಖೆ ಪ್ರಗತಿಯಲ್ಲಿದೆ.


