ಹುಬ್ಬಳ್ಳಿ(ಮೇ.13): ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಕಾರು ಹಾಗೂ ಬೈಕ್‌ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಸವಾರನೊಬ್ಬ ಮೃತಪಟ್ಟಿದ್ದು, ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಸಂತೋಷ (32) ಮೃತ ದುರ್ದೈವಿ. ಸಂದೀಪ ತೀವ್ರ ಗಾಯಗೊಂಡಿದ್ದು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಡಗೋಡ ಮೂಲದ ಬೈಕ್‌ ಸವಾರರು ದಾಬಾಗಳಿಗೆ ಪರೋಟಾ ಹಂಚುವ ಕಾರ್ಯವನ್ನು ಮಾಡಿ ಮರಳಿ ಹೋಗುವಾಗ ರಾಜಸ್ತಾನ ದಾಬಾ ಬಳಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರದ ರೂಲ್ಸ್ ಬ್ರೇಕ್ ಮಾಡಿ ಹೋದವರು ಮಸಣ ಸೇರಿದ್ರು..!

ಬೈಕ್‌ ಸವಾರರಿಬ್ಬರು ಮಾವಾ, ಅಳಿಯರಾಗಿದ್ದರು. ಅಪಘಾತ ಸಂಭವಿಸಿದಾಗ ಚಿಂತಾಜನಕ ಸ್ಥಿತಿಯಲ್ಲಿ ಇದ್ದ ಸಂತೋಷ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಬೆಕೆನ್ನುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಾರು ಹಾವೇರಿ ಕಡೆಯಿಂದ ಬೆಳಗಾವಿ ಕಡೆಗೆ ಹೊರಟಾಗ ಈ ಘಟನೆ ನಡೆದಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.