ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪಕ್ಷ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ. ಕ್ಷೇತ್ರದ ಮತದಾರ ಬಿಜೆಪಿ ಪರ ಇದ್ದು, ಮತ್ತೊಮ್ಮೆ ನನಗೆ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಡಾ. ಸಿ.ಎಂ. ರಾಜೇಶ್‌ ಗೌಡ ಹೇಳಿದರು.

ಶಿರಾ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪಕ್ಷ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ. ಕ್ಷೇತ್ರದ ಮತದಾರ ಬಿಜೆಪಿ ಪರ ಇದ್ದು, ಮತ್ತೊಮ್ಮೆ ನನಗೆ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಡಾ. ಸಿ.ಎಂ. ರಾಜೇಶ್‌ ಗೌಡ ಹೇಳಿದರು.

ತಾಲೂಕಿನ ಗೌಡಗೆರೆ ಹೋಬಳಿಯ ಇತಿಹಾಸ ಪ್ರಸಿದ್ಧ ಕಳುವರಹಳ್ಳಿ ಜುಂಜಪ್ಪನ ಸುಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಿರಾ ಕ್ಷೇತ್ರದಲ್ಲಿ ಸಾಗುವಳಿದಾರರಿಗೆ ಅತಿ ಹೆಚ್ಚು ಸಾಗುವಳಿ ಪತ್ರ ಮತ್ತು ಎರಡು ದಶಕಗಳಿಂದ ಮನೆ ಕಟ್ಟಿಹಕ್ಕುಪತ್ರವಿಲ್ಲದೆ ಪರದಾಡುತ್ತಿದ್ದ ಸಾವಿರಾರು ಬಡ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಅವರ ಬದುಕನ್ನು ಹಸನು ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಕಾರ್ಡಿಗೆ ಯಾವ ಗ್ಯಾರೆಂಟಿನೂ ಇಲ್ಲ, ಕಾಂಗ್ರೆಸ್‌ ಪಕ್ಷ ಸುಳ್ಳು ಭರವಸೆ ನೀಡುವ ಮೂಲಕ ಮುಗ್ಧ ಮತದಾರರಿಗೆ ಮಂಕು ಬೂದಿ ಎರಚುತಿದೆ. ಬಿಜೆಪಿ ಸರ್ಕಾರ ಕೊಟ್ಟಮಾತಿನಂತೆ ಮದಲೂರು ಕೆರೆಗೆ ಮೂರು ಬಾರಿ ಹೇಮಾವತಿ ನೀರು ಹರಿಸಿ ತಾಲೂಕಿನ ಕುಡಿಯುವ ನೀರಿನ ಬವಣೆ ಶಾಶ್ವತವಾಗಿ ನೀಗಿದೆ ಎಂದರು.

ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ ಮಾತನಾಡಿ, ಕಾಡುಗೊಲ್ಲ ಸಮುದಾಯಕ್ಕೆ ಹಿರಿಯೂರು ಕ್ಷೇತ್ರದಲ್ಲಿ ಶಾಸಕ ಸ್ಥಾನ ನೀಡಿ ಶಿರಾ ಕ್ಷೇತ್ರದ ಕಾಡುಗೊಲ್ಲ ಸಮುದಾಯದ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ನಿಗಮ ಅಧ್ಯಕ್ಷ ಸ್ಥಾನ ನೀಡುವುದರ ಜೊತೆಗೆ ಜುಂಜಪ್ಪನ ಕ್ಷೇತ್ರ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಅನುದಾನ ನೀಡಿರುವುದು ಬಿಜೆಪಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಟಿಎಪಿಎಂಎಸ್‌ ಅಧ್ಯಕ್ಷ ಹುಣಸೆಹಳ್ಳಿ ಶಿವಕುಮಾರ್‌ ಸೇರಿದಂತೆ ಹಲವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ತೊರೆದು ಶಾಸಕ ರಾಜೇಶ್‌ ಗೌಡ ಸಮಕ್ಷಮದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ತಾವರೆಕೆರೆ ದೇವರಾಜು, ಗೌಡಪ್ಪ ,ಶಿವಕುಮಾರ್‌, ಸೂಡಾ ಅಧ್ಯಕ್ಷ ಮಾರುತೇಶ್‌, ಲಕ್ಷ್ಮೀದೇವಿ, ಶಿವು ಸ್ನೇಹಪ್ರಿಯ, ಸೋಮನಾಥ್‌, ಪ್ರಕಾಶ್‌ ಗೌಡ, ಶಶಿಧರ್‌, ಶೇಖರ್‌, ಚಂದ್ರಮ್ಮ, ಲಕ್ಕಣ್ಣ, ಈಶ್ವರ್‌ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.