ಹುಮನಾಬಾದ್(ಅ.2): ತುಳಜಾಪೂರದ ಅಂಬಾ ಭವಾನಿ ದೇವಿಯ ದರ್ಶನ ಪಡೆದು ಮರಳಿ ಗ್ರಾಮಕ್ಕೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು 9 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. 

ತಾಲೂಕಿನ ಚಿಲ್ಲರ್ಗಿ ಗ್ರಾಮದವರು ಓಮಿನಿ ವಾಹನದಲ್ಲಿ ತುಳಜಾಪೂರಕ್ಕೆ ತೆರಳಿ ಭವಾನಿ ಮಾತೆಯ ದರ್ಶನ ಪಡೆದುಕೊಂಡು ಮರಳಿ ಗ್ರಾಮಕ್ಕೆ ತೆರಳುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. 
ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಅಭಿಷೇಕ್ ಬಾರ್ ಬಳಿ ಓಮಿನಿ ವಾಹನಕ್ಕೆ ಹಿಂದಿನಿಂದ ಮಹೇಂದ್ರ ಕಾರು ಡಿಕ್ಕಿ ಹೊಡೆದ ಪರಿಣಾಮ ಚಿಲ್ಲರ್ಗಿ ಗ್ರಾಮದ ಶಿವರಾಜ ಪುಂಡಲಿಕ (41) ಸ್ಥಳದಲ್ಲಿಯೇ ಮೃತರಾಗಿದ್ದಾರೆ. ತುಕಾರಾಮ ಮಾರುತಿ (55), ರಾಯಪ್ಪ ಘಾಳೆಪ್ಪ ನೆಲವಾಡ್ (40) ಇವರಿಗೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಬೀದರ್‌ನ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇವರಿಬ್ಬರೂ ಮೃತಪಟ್ಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಘಟನೆಯಲ್ಲಿ ಸುಮಾರು 9 ಜನರು ಗಾಯಗೊಂಡಿದ್ದು ಕೆಲವರನ್ನು ಹುಮನಾಬಾದ್ ಹಾಗೂ ಬೀದರ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಿವೈಎಸ್‌ಪಿ ಮಹೇಶ್ವರಪ್ಪ, ಸಿಪಿಐ ಜೆ.ಎಸ್. ನ್ಯಾಮಗೌಡರ್, ಸಂಚಾರ ಪಿಎಸ್‌ಐ ಸುಜಾತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.