ಉಪ್ಪಿನಂಗಡಿ(ಏ.14): ಬಡ ಮಹಿಳೆಯೊಬ್ಬರು ಅಂತ್ಯೋದಯ ಕಾರ್ಡ್‌ನಿಂದ ತಮಗೆ ಸಿಕ್ಕಿದ ಅಕ್ಕಿಯನ್ನು ಬಡವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಪಂಜಿಕುಡೇಲ್‌ ನಿವಾಸಿ 50 ಹರೆಯದ ಚಿನ್ನಮ್ಮ ತಮ್ಮ ಇದ್ದೊಬ್ಬ ಮಗಳನ್ನು ಮದುವೆ ಮಾಡಿಕೊಟ್ಟಿದ್ದು, ಸಣ್ಣದಾದ ಮನೆಯಲ್ಲಿ ಒಂಟಿಯಾಗಿ ಬದುಕು ಸವೆಸುತ್ತಿದ್ದಾರೆ.

ಇವರು ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದು, ಅದರಲ್ಲಿ ಅವರಿಗೆ ತಲಾ 35 ಕೆ.ಜಿ.ಯ ಹಾಗೆ ಎರಡು ತಿಂಗಳ ಒಟ್ಟು 70 ಕೆ.ಜಿ. ಅಕ್ಕಿ ಸಿಕ್ಕಿತ್ತು. ತಣ್ಣೀರುಪಂಥ ಗ್ರಾಮ ಪಂಚಾಯಿತಿಯವರು ಗ್ರಾಪಂ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ನಾಳೆಯಿಂದ ಸರಳ, ಸ್ಮಾರ್ಟ್‌ ಲಾಕ್‌ಡೌನ್‌?: ಯಾರಿಗೆಲ್ಲಾ ಇರುತ್ತೆ ರಿಯಾಯಿತಿ?

ಅದರಂತೆ ಚಿನ್ನಮ್ಮ ಅವರ ಮನೆಗೂ ಭೇಟಿ ನೀಡಿ ಆಹಾರದ ಕಿಟ್‌ ನೀಡಲು ಮುಂದಾದಾಗ, ಅದನ್ನು ನಿರಾಕರಿಸಿದ ಅವರು ತನ್ನಲ್ಲಿ ಸರ್ಕಾರ ನೀಡಿದ ಅಕ್ಕಿಯಿದೆ. ತನಗೆ 20 ಕೆಜಿ ಸಾಕೆಂದು ಹೇಳಿ ಉಳಿದ 50 ಕೆ.ಜಿ. ಅಕ್ಕಿಯನ್ನು ಕೊಟ್ಟು, ಅಗತ್ಯವುಳ್ಳವರಿಗೆ ನೀಡುವಂತೆ ತಿಳಿಸಿದರು.

ತಾನೇ ಬಡತನದಲ್ಲಿದ್ದರೂ ಇನ್ನೊಬ್ಬರಿಗೆ ಸಹಾಯ ಮಾಡುವ ಭಾವನೆ ಹೊಂದಿರುವ ಚಿನ್ನಮ್ಮ ಅವರ ಕಾರ್ಯದ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯವಿಕ್ರಂ ಮೆಚ್ಚುಗೆ ವ್ಯಕ್ತಪಡಿಸಿದರು.