ಮಂಗಳೂರು(ಡಿ.16): ಪಾಣೆಮಂಗಳೂರು ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಮಗೆ ಅಕ್ಷರಭ್ಯಾಸ ಮಾಡಿದ ಶಿಕ್ಷಕ ನಿವೃತ್ತಗೊಂಡ ಸಂದರ್ಭ ಕಾರೊಂದನ್ನು ಉಡುಗೊರೆಯಾಗಿ ನೀಡಿ ಬೀಳ್ಕೊಡುವ ಮೂಲಕ ಮಾದರಿಯಾಗಿದ್ದಾರೆ.

ಪಾಣೆಮಂಗಳೂರು ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಹಾಜಿ ಫಕ್ರುದ್ದೀನ್ ಬಿ.ಕೆ. ಸೇವೆಯಿಂದ ನಿವೃತ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರಿಗೆ ಪಾಣೆಮಂಗಳೂರು ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘ ಮತ್ತು ಊರ ನಾಗರಿಕರ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಜಿ ಪಕ್ರುದ್ದೀನ್ರನ್ನು ಸನ್ಮಾನಿಸಿ ಕಾರೊಂದನ್ನು ಉಡುಗೊರೆಯಾಗಿ ನೀಡಲಾಯಿತು.

 ಶಾಲೆಯ ಸಂಚಾಲಕ ಹಾಜಿ ಸೈಫುದ್ದೀನ್ ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕ್ಕರಂಗಡಿ ಜುಮಾ ಮಸೀದಿಯ ಖತೀಬ್ ಆರಿಫ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಮುಖ್ಯ ಅತಿಥಿಗಳಾಗಿದ್ದರು.

ಪುರಸಭಾ ಸದಸ್ಯ ಇದ್ರೀಸ್ ಪಿ.ಜೆ., ಮೆಲ್ಕಾರ್ ವುಮೆನ್ಸ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ಲತೀಫ್, ವಗ್ಗ ಕಾಲೇಜಿನ ಮುಖ್ಯಶಿಕ್ಷಕ ಶೇಖ್ ಆದಂ ಸಾಹೇಬ್, ಉಪನ್ಯಾಸಕ ಅಬ್ದುರ್ರಝಾಕ್ ಅನಂತಾಡಿ, ನಿವೃತ್ತ ಶಿಕ್ಷಕರಾದ ಅಮಾನುಲ್ಲಾ ಖಾನ್, ರಾಮಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಬಿ.ಎಂ.ತುಂಬೆ ಅಭಿನಂದನಾ ಭಾಷಣ ಮಾಡಿದರು.

ದಾರುಲ್ ಇಸ್ಲಾಂ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯ ಹಮೀದ್ ಕೆ. ಮಾಣಿ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕ ನೂರುದ್ದೀನ್ ವಂದಿಸಿದರು. ಉಳಿಬೈಲು ಪ್ರಾಥಮಿಕ ಶಾಲೆಯ ಶಿಕ್ಷಕ ಅಕ್ಬರ್ ಅಲಿ ಕಾರ್ಯಕ್ರಮ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ನೆನಪಿನಂಗಳದ 40 ವರ್ಷ ಪುಸ್ತಕ ಬಿಡುಗಡೆ ಹಾಗೂ ನಮ್ಮ ಮಾಣಿಕ್ಯ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ವಿವಿಧ ಸಂಘಟನೆಗಳ ವತಿಯಿಂದ ಫಕ್ರುದ್ದೀನ್ ರವರಿಗೆ ಸನ್ಮಾನ, ಗೌರವ ವಂದನೆ ಕಾರ್ಯಕ್ರಮ ನಡೆಯಿತು.