ಚಿಕ್ಕಬಳ್ಳಾಪುರ(ಜೂ.): ಜಿಲ್ಲಾಕೇಂದ್ರದಲ್ಲಿ ಪತ್ತೆಯಾಗಿದ್ದ ಎಲ್ಲ 9 ಕೊರೋನ ಸೋಂಕಿತ ಪ್ರಕರಣಗಳೂ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಚಿಕ್ಕಬಳ್ಳಾಪುರ ಕೋವಿಡ್‌ ಮುಕ್ತವಾಗಿತ್ತು. ಆದರೆ ಈಗ ಆಂಧ್ರದ ಕಂಟಕದಿಂದಾಗಿ ಪ್ರಸ್ತುತ ಮತ್ತೆ ಎರಡು ಸೋಂಕು ಪ್ರಕರಣ ಪತ್ತೆಯಾಗಿವೆ.

ನಗರದ 16ನೇ ವಾರ್ಡಿನ ದಂಪತಿಗೆ ಶುಕ್ರವಾರ ಸೋಂಕು ಪತ್ತೆಯಾಗಿದ್ದು, ಇವರು ಕಳೆದ ಮಾ.21ಕ್ಕೂ ಮುನ್ನ ಲಾಕ್‌ಡೌನ್‌ ಆರಂಭವಾಗುವುದಕ್ಕೂ ಮುನ್ನವೇ ತಮ್ಮ ಮಗಳ ಮನೆಗೆ ಆಂಧ್ರದ ಹಿಂದೂಪುರಕ್ಕೆ ಹೋಗಿದ್ದು, ಜೂ.2ರಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದಾರೆ.

ಎಂಟಿಬಿ‌, ಆರ್‌.ಶಂಕರ್‌,ಎಚ್‌.ವಿಶ್ವನಾಥ್‌ಗೆ ಎಂಎಲ್ಸಿ ಟಿಕೆಟ್..?‌

ಆದರೆ ಇವರು ಯಾವ ವಾಹನದ ಮೂಲಕ ಹಿಂದೂಪುರದಿಂದ ಚಿಕ್ಕಬಲ್ಳಾಪುರಕ್ಕೆ ಆಗಮಿಸಿದರು ಎಂಬ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಇನ್ನೂ ಮಾಹಿತಿ ಇಲ್ಲವಾಗಿದ್ದು, ಬಾಡಿಗೆ ಕಾರಿನಲ್ಲಿ ಬಂದಿದ್ದರೆ, ಆ ಕಾರಿನ ಚಾಲಕನನ್ನೂ ಕ್ವಾರಂಟೈನ್‌ ಮಾಡಬೇಕಿರುವ ಕಾರಣ ಅವರು ಸಂಚರಿಸಿದ ವಾಹನದ ಬಗ್ಗೆ ಮಾಹಿತಿ ಪಡೆಯುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.

ಪತಿಗೆ 75 ವರ್ಷ ಆಗಿದ್ದರೆ, ಪತ್ನಿಗೆ 70 ವರ್ಷ. ಇವರು ಕಳೆದ ಮೂರು ದಿನಗಳಿಂದ ಇದ್ದ ನಗರದ 16ನೇ ವಾರ್ಡ್‌ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೆ ನಗರಸಭೆಯಿಂದ ಶುಕ್ರವಾರ ಬೆಳಗ್ಗೆಯೇ ಸೋಂಕಿತರ ಮನೆ ಸೇರಿದಂತೆ ಈ ಪ್ರದೇಶವನ್ನು ಸಂಪೂರ್ಣ ಸ್ಯಾನಿಟೈಜ್‌ ಮಾಡಲಾಗಿದೆ.