ಚಿಕ್ಕಮಗಳೂರು(ಏ.13): ಲಾಕ್‌ಡೌನ್‌ನಿಂದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಅನಾಥ ವಯೋವೃದ್ಧೆ ಭಾನುವಾರ ನಿಧನರಾಗಿದ್ದಾರೆ. ಇದೇ ಕೇಂದ್ರದ ವ್ಯಕ್ತಿಯೊಬ್ಬ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಮಾನವೀಯತೆ ಮೆರೆದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ನಳಿನಾ (70) ಮೃತಪಟ್ಟ ವಯೋವೃದ್ಧೆ.

ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘ ಹಾಗೂ ನಮ್ಮ ಸಹಾಯ ಹಸ್ತ ತಂಡದ ನೇತೃತ್ವದಲ್ಲಿ ಇಲ್ಲಿನ ಎಐಟಿ ವೃತ್ತದ ಬಳಿ ಇರುವ ಅಂಬೇಡ್ಕರ್‌ ವಸತಿ ನಿಲಯದಲ್ಲಿ ನಿರ್ಗತಿಕರಿಗೆ ತಾತ್ಕಾಲಿಕವಾಗಿ ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರದಲ್ಲಿ ವೃದ್ಧೆ ನಳಿನಾ ಅವರು ಕೆಲವು ದಿನಗಳಿಂದ ಆಶ್ರಯ ಪಡೆದಿದ್ದರು. ಅವರು ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದು, ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಡಿಕೆಶಿ ಕ್ಯಾಂಟೀನ್‌ ಮೂಲಕ ಬಡವರಿಗೆ ಉಪಹಾರ

ಬಳ್ಳಾರಿಯಿಂದ ಕಾಲು ನಡಿಗೆಯಲ್ಲಿ ಬಂದು ಇದೇ ನಿರಾಶ್ರಿತರ ಕೇಂದ್ರದಲ್ಲಿ ತಂಗಿದ್ದ ಬೆಂಗಳೂರಿನ ಸತ್ಯನಾರಾಯಣ್‌ ಅವರು ಇಲ್ಲಿನ ಉಪ್ಪಳ್ಳಿಯಲ್ಲಿರುವ ಚಿತಾಗಾರದಲ್ಲಿ ನಳಿನಾ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಮಾನವೀಯತೆ ಮೆರೆದರು. ಅಂತ್ಯಸಂಸ್ಕಾರದಲ್ಲಿ ನಮ್ಮ ಸಹಾಯ ಹಸ್ತ ತಂಡದ ರೂಬಿನ್‌ ಮೋಸಸ್‌, ತನೋಜ್‌ ಕುಮಾರ್‌, ಶಿವಕುಮಾರ್‌, ರಾಕೇಶ್‌, ಗುರು, ರಸೂಲ್‌ ಹಾಗೂ ಬ್ರಾಹ್ಮಣ ಸಮಾಜದ ಪರಶುರಾಮ್‌, ಮಂಜುನಾಥ ಜೋಷಿ, ನಾಗೇಂದ್ರ, ನಾಗಭೂಷಣ್‌ ಇದ್ದರು.