Asianet Suvarna News Asianet Suvarna News

ಓಲಾ, ಉಬರ್‌ ಆಟೋಗೆ ನಾಳೆ ದರ ನಿಗದಿ

ಆ್ಯಪ್‌ ಆಟೋಗಳಿಗೆ ಅನುಮತಿ ಬಳಿಕ, ದರದ ಕುರಿತು ಚರ್ಚೆ ಸಾಧ್ಯತೆ, ಕನಿಷ್ಠ ದರ .50, ಬಳಿಕ ಪ್ರತಿ ಕಿ.ಮೀ.ಗೆ 25ಕ್ಕೆ ಕಂಪನಿಗಳ ಮೊರೆ ಸಂಭವ

Ola Uber Auto Fare Wii Be Set on October 29th grg
Author
First Published Oct 28, 2022, 1:30 PM IST

ಬೆಂಗಳೂರು(ಅ.28): ಓಲಾ, ಉಬರ್‌ ಹಾಗೂ ರ‍್ಯಾಪಿಡೋ ಆಟೋ ರಿಕ್ಷಾ ದರ ನಿಗದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅ.29ಕ್ಕೆ(ಶನಿವಾರ) ಕಂಪನಿಗಳ ಮುಖ್ಯಸ್ಥರು, ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಆಟೋ ರಿಕ್ಷಾ ಯೂನಿಯನ್‌ಗಳ ಸಭೆ ನಡೆಸಲಿದೆ. ಸಭೆಯಲ್ಲಿ ಮೊದಲು ಅಗ್ರಿಗೇಟರ್ಸ್‌ಗಳ ಆಟೋ ರಿಕ್ಷಾ ಸೇವೆಗೆ ಅನುಮತಿ ನೀಡಿ ಆನಂತರ ಕನಿಷ್ಠ ದರ, ಪ್ರತಿ ಕಿಲೋ ಮೀಟರ್‌ ದರ ನಿಗದಿ, ಹೆಚ್ಚುವರಿ ದರ ಪಡೆದರೆ ವಿಧಿಸುವ ದಂಡ ಕುರಿತು ಚರ್ಚೆಗಳು ನಡೆಯಲಿವೆ. ಇತ್ತ ಅಗ್ರಿಗೇಟರ್ಸ್‌ ಆಟೋರಿಕ್ಷಾ ಕಂಪನಿಗಳು ಕನಿಷ್ಠ ದರ (2 ಕಿ.ಮೀ) 50 ರು., ಆನಂತರ ಪ್ರತಿ ಕಿ.ಮೀ.ಗೆ 25 ರು. ನಿಗದಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡುವ ಸಾಧ್ಯತೆಗಳಿವೆ.

ಅನಧಿಕೃತ ಸೇವೆ, ಹೆಚ್ಚು ದರ ವಸೂಲಿಗೆ ಕಡಿವಾಣ ಹಾಕಿದ ಸಾರಿಗೆ ಇಲಾಖೆ ಕ್ರಮವನ್ನು ಪ್ರಶ್ನಿಸಿ ಅಕ್ಟೋಬರ್‌ ಎರಡನೇ ವಾರ ಅಗ್ರಿಗೇಟರ್ಸ್‌ಗಳಾದ ಓಲಾ, ಉಬರ್‌ ಹೈಕೋರ್ಟ್‌ ಮೊರೆ ಹೋಗಿದ್ದವು. ಆ ಸಂದರ್ಭದಲ್ಲಿ ‘ಮುಂದಿನ 15 ದಿನಗಳಲ್ಲಿ ಹೊಸದಾಗಿ ದರ ನಿಗದಿಪಡಿಸಬೇಕು. ಅನುಮತಿಗೆ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿತ್ತು. ಅಲ್ಲಿಯವರೆಗೆ 2021ರ ನವೆಂಬರ್‌ನಲ್ಲಿ ಸರ್ಕಾರ ನಿಗದಿಪಡಿಸಿರುವ ದರದ ಜೊತೆಗೆ ಶೇ.10ರಷ್ಟುಹೆಚ್ಚುವರಿ ಹಣ ಮತ್ತು ಸೇವಾ ತೆರಿಗೆ (ಸರ್ವೀಸ್‌ ಟ್ಯಾಕ್ಸ್‌) ಮಾತ್ರ ಪಡೆಯಬೇಕು ಎಂದು ಅಗ್ರಿಗೇಟರ್ಸ್‌ಗಳಿಗೆ ನಿರ್ದೇಶಿಸಿತ್ತು. ಸದ್ಯ ಹೈಕೋರ್ಟ್‌ ನೀಡಿದ್ದ ಕಾಲಾವಧಿ ಮುಗಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್‌.ವಿ.ಪ್ರಸಾದ್‌ ಅವರ ನೇತೃತ್ವದಲ್ಲಿ ಸಭೆ ಶನಿವಾರ ಸಭೆ ಹಮ್ಮಿಕೊಳ್ಳಲಾಗಿದೆ.

ಕೊನೆಗೂ ಉಬರ್‌ ಆಟೋ ದರ ಇಳಿಕೆ; ಓಲಾ ಸಡ್ಡು..!

ಸಭೆಗೆ ಆಗಮಿಸಲು ನೋಟಿಸ್‌:

ಸಭೆಗೆ ಆಗಮಿಸುವಂತೆ ಸದ್ಯ ನಗರದಲ್ಲಿ ಆಟೋರಿಕ್ಷಾ ಚಾಲನೆ ಮಾಡುತ್ತಿರುವ ಎಲ್ಲಾ ಅಗ್ರಿಗೇಟರ್ಸ್‌ ಕಂಪನಿಗಳಿಗೆ, ಸಾರಿಗೆ ಇಲಾಖೆ ಆಯುಕ್ತರು, ಜಂಟಿ ಆಯುಕ್ತರು, ಆಟೋರಿಕ್ಷಾ ಯೂನಿಯನ್‌ಗಳು, ಆಟೋರಿಕ್ಷಾ ಗ್ರಾಹಕರ ಹಿತರಕ್ಷಣಾ ವೇದಿಕೆಗಳಿಗೆ ನೋಟಿಸ್‌ ನೀಡಲಾಗಿದೆ. ಹೈಕೋರ್ಟ್‌ ಮೊದಲು ಅಗ್ರಿಗೇಟರ್ಸ್‌ಗಳಿಗೆ ಆಟೋರಿಕ್ಷಾ ಅನುಮತಿ ನಿಟ್ಟಿನಲ್ಲಿ ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ -2016’ಕ್ಕೆ ತಿದ್ದುಪಡಿ ಮಾಡುವ ಅಥವಾ ವಿಶೇಷ ಅನುಮತಿ ನೀಡುವ ಸಾಧ್ಯತೆಗಳಿವೆ. ಆ ಬಳಿಕ ಬೆಲೆ ನಿಗದಿ ಬಗ್ಗೆ ಚರ್ಚಿಸಲಾಗುತ್ತದೆ.

ಕಳೆದ 10 ದಿನಗಳಿಂದ ಸುಲಿಗೆಗೆ ಕಡಿವಾಣ:

ಹೈಕೋರ್ಟ್‌ ಸೂಚನೆಯಿಂದ ಎಚ್ಚೆತ್ತ ಓಲಾ, ಉಬರ್‌ ಆ್ಯಪ್‌ ಕಂಪನಿಯು ಅ.17 ರಿಂದ ಆಟೋರಿಕ್ಷಾ ಪ್ರಯಾಣ ದರ ಸುಲಿಗೆಯನ್ನು ನಿಲ್ಲಿಸಿದ್ದವು. ಸದ್ಯ ಸಾಮಾನ್ಯ ಆಟೋರಿಕ್ಷಾಗಳಿಗೆ ಸರ್ಕಾರ ನಿಗದಿಪಡಿಸಿರುವ ಮೀಟರ್‌ ದರ ಜತೆ ಶೇ. 10 ಹಾಗೂ ಜಿಎಸ್‌ಟಿ ಒಳಗೊಂಡ ದರವನ್ನು ಪ್ರಯಾಣಿಕರಿಂದ ಪಡೆಯುತ್ತಿವೆ. ಸದ್ಯ ಓಲಾ, ಉಬರ್‌ ಎರಡೂ ಆ್ಯಪ್‌ಗಳಲ್ಲಿಯೂ ಎರಡು ಕಿ.ಮೀ.ಗೆ 40 ರು.ಗಿಂತ ಕಡಿಮೆ ದರವಿದೆ.

ಹೈಕೋರ್ಟ್‌ ಸೂಚನೆ ಮೇರೆಗೆ ಸರ್ಕಾರದಿಂದ ಆ್ಯಪ್‌ ಆಧಾರಿತ ಆಟೋ ರಿಕ್ಷಾ ದರ ನಿಗದಿ ಸಂಬಂಧ ಶನಿವಾರ ಸಭೆ ನಡೆಸಲಾಗುತ್ತಿದೆ. ಕಂಪನಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು, ಆಟೋರಿಕ್ಷಾ ಯೂನಿಯನ್‌ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಲ್ಲಿ ಸಾಧ್ಯವಾದಷ್ಟುಕಡಿಮೆ ದರ ನಿಗದಿಪಡಿಸಲು ಸಾರಿಗೆ ಇಲಾಖೆಯಿಂದ ಕ್ರಮ ವಹಿಸಲಾಗುವುದು ಅಂತ ಸಾರಿಗೆ ಇಲಾಖೆ ಆಯುಕ್ತ ಎಚ್‌.ಎಂ.ಟಿ ಕುಮಾರ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios