ಹೈಕೋರ್ಟ್‌ ಸೂಚನೆಗೆ ತಲೆಬಾಗಿದ ಉಬರ್‌, 2 ಕಿ.ಮೀ.ಗೆ ಉಬರ್‌ ಆಟೋದಲ್ಲಿ 45 ರು., ಓಲಾದಲ್ಲಿ ಇದೇ ಅಂತರಕ್ಕೆ 75 ರುಪಾಯಿ 

ಬೆಂಗಳೂರು(ಅ.16):  ಹೈಕೋರ್ಟ್‌ ಸೂಚನೆ ಬೆನ್ನಲ್ಲೇ ಶನಿವಾರ ಉಬರ್‌ ಆ್ಯಪ್‌ ಕಂಪನಿಯು ಆಟೋ ರಿಕ್ಷಾ ಪ್ರಯಾಣ ದರವನ್ನು ತಗ್ಗಿಸಿದೆ. ಆದರೆ, ಓಲಾ ಆ್ಯಪ್‌ ಕಂಪನಿ ಪ್ರಯಾಣಿಕರಿಂದ ದರ ಸುಲಿಗೆಯನ್ನು ಮುಂದುವರೆಸಿದೆ. ಉಬರ್‌ ಆಟೋ ರಿಕ್ಷಾ ದರ ಶೇ.25ರಿಂದ ಶೇ.30ರಷ್ಟು ಇಳಿಕೆಯಾಗಿದ್ದು, ಎರಡು ಕಿ.ಮೀ.ಗೆ 40-45 ರು. ದರ ಪಡೆಯಲಾಗುತ್ತಿದೆ. ಓಲಾ ಮಾತ್ರ ಇದೇ ಎರಡು ಕಿ.ಮೀ.ಗೆ 75 ರಿಂದ 80 ರು. ದರ ವಿಧಿಸುತ್ತಿದೆ. ಈ ಮೂಲಕ ಓಲಾ ಹಿಂದಿನಂತೆಯೇ ದರ ಸುಲಿಗೆ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಅನುಮತಿ ಪಡೆಯದೆ ಆಟೋ ರಿಕ್ಷಾ ಸೇವೆ ಹಾಗೂ ಹೆಚ್ಚು ದರ ವಿಧಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಹೈಕೋರ್ಟ್‌, ‘ಸಂಸ್ಥೆಗಳೊಂದಿಗೆ ಚರ್ಚಿಸಿ ಮುಂದಿನ 15 ದಿನಗಳಲ್ಲಿ ಹೊಸದಾಗಿ ದರ ನಿಗದಿಪಡಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ‘ಅಲ್ಲಿಯವರೆಗೆ 2021ರ ನವೆಂಬರ್‌ನಲ್ಲಿ ಸರ್ಕಾರ ನಿಗದಿ ಪಡಿಸಿರುವ ದರದ ಜೊತೆಗೆ ಶೇ.10ರಷ್ಟುಹೆಚ್ಚುವರಿ ಹಣ ಮತ್ತು ಸೇವಾ ತೆರಿಗೆ (ಸರ್ವೀಸ್‌ ಟ್ಯಾಕ್ಸ್‌) ಮಾತ್ರ ಪಡೆಯಬೇಕು’ ಎಂದು ಓಲಾ ಮತ್ತು ಉಬರ್‌ ಸಂಸ್ಥೆಗಳಿಗೆ ನಿರ್ದೇಶಿಸಿತ್ತು. ಉಬರ್‌ ಸಂಸ್ಥೆ ಎಚ್ಚೆತ್ತುಕೊಂಡಿದ್ದು, ಶನಿವಾರ ಬೆಳಿಗ್ಗೆಯಿಂದ ಆಟೋರಿಕ್ಷಾ ಮಾತ್ರವಲ್ಲದೆ ಕಾರುಗಳ ದರವನ್ನು ಶುಕ್ರವಾರಕ್ಕೆ ಹೋಲಿಸಿದರೆ ಶೇ.25 ರಿಂದ 30 ರಷ್ಟುತಗ್ಗಿಸಿದೆ.

ಓಲಾ, ಉಬರ್‌ ಆಟೋಗೆ ಕೋರ್ಟ್‌ನಲ್ಲಿ ಸಿಹಿ-ಕಹಿ..!

ಒಂದೇ ಮಾರ್ಗ ಓಲಾ ದುಪ್ಪಟ್ಟು ದರ:

ಶಿವಾನಂದ ವೃತ್ತದಿಂದ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ 2 ಕಿ.ಮೀ.ಗಿಂತ ಕಡಿಮೆ ದೂರವಿದೆ. ಶನಿವಾರ ಮಧ್ಯಾಹ್ನ ಉಬರ್‌ ಆ್ಯಪ್‌ನ ಆಟೋರಿಕ್ಷಾಕ್ಕೆ 36 ರು. ದರವಿತ್ತು. ಇದೇ ಸಮಯದಲ್ಲಿ ಓಲಾ ಆ್ಯಪ್‌ ಆಟೋರಿಕ್ಷಾಕ್ಕೆ 64 ರು. ದರವಿತ್ತು. ಶಿವಾನಂದ ವೃತ್ತದಿಂದ ಬನಶಂಕರಿ ಮೊದಲ ಹಂತಕ್ಕೆ (7 ಕಿ.ಮೀ.) ಉಬರ್‌ ಆಟೋರಿಕ್ಷಾಕ್ಕೆ 123 ರು. ದರವಿದ್ದು, ಓಲಾ 193 ರು. ದರವಿತ್ತು. ಸಂಜೆ ಹೆಚ್ಚಿನ ದಟ್ಟಣೆ ಮತ್ತು ಮಳೆ ಅವಧಿಯಲ್ಲಿ ದರ ತುಸು ಹೆಚ್ಚಿದ್ದವು.

ಹೈಕೋರ್ಟ್‌ ಆದೇಶ ಪ್ರತಿ ಸಿಕ್ಕ ಬಳಿಕ ಸಭೆ:

ಓಲಾ, ಉಬರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಪೂರ್ಣ ಪ್ರಮಾಣದ ಆದೇಶ ಪ್ರತಿ ಸಾರಿಗೆ ಇಲಾಖೆಗೆ ಲಭ್ಯವಾಗಿಲ್ಲ. ಹೀಗಾಗಿ, ಶನಿವಾರ ಇಲಾಖೆ ಮತ್ತು ಆ್ಯಪ್‌ ಕಂಪನಿಗಳ ಜತೆ ಸಭೆ ನಡೆದಿಲ್ಲ. ಆದೇಶ ಸಿಕ್ಕ ಬಳಿಕ ಹೈಕೋರ್ಚ್‌ ಸೂಚನೆಯಂತೆಯೇ ಆ್ಯಪ್‌ ಕಂಪನಿಗಳ ಸಭೆ, ಬೆಲೆ ನಿಗದಿ, ಆಟೋರಿಕ್ಷಾ ಪರವಾನಗಿ ಅರ್ಜಿ ಪಡೆದು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಯಾವುದೇ ಆಟೋರಿಕ್ಷಾ ಜಪ್ತಿ, ದಂಡ ವಸೂಲಿಗೂ ಮುಂದಾಗುವುದಿಲ್ಲ ಎಂದು ಸಾರಿಗೆ ಇಲಾಖೆಯ ಆಯುಕ್ತ ಎಚ್‌ಎಂಟಿ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.