ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರಿಗೆ ಪೂರೈಕೆಯಾಗುವ ಆಹಾರ ಮಾರಿದ ಅಧಿಕಾರಿಗಳು!
ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರಿಗೆ ಪೂರೈಕೆಯಾಗುವ ಅಕ್ಕಿ ಗೋದಿಯನ್ನು ಅಧಿಕಾರಿಗಳೇ ಮಾರಿಕೊಂಡ ಪ್ರಕರಣವೊಂದು ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ಬೆಳಕಿಗೆ ಬಂದಿದೆ.
ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಸೆ.19): ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರಿಗೆ ಪೂರೈಕೆಯಾಗುವ ಅಕ್ಕಿ ಗೋದಿಯನ್ನು ಅಧಿಕಾರಿಗಳೇ ಮಾರಿಕೊಂಡ ಪ್ರಕರಣವೊಂದು ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸರ್ಕಾರ ಪೂರಕ ಪೌಷ್ಠಿಕ ಆಹಾರದಲ್ಲಿ ಅಕ್ರಮ ತಡೆಗಟ್ಟುವುದಕ್ಕೆ ಎಷ್ಟೇ ಕ್ರಮಗಳನ್ನು ಕೈಗೊಂಡರು ಇನ್ನು ಕಾಳಸಂತೆಯಲ್ಲಿ ಮಕ್ಕಳ ಅನ್ನ ಮಾರಾಟವಾಗುತ್ತಿರುವುದಕ್ಕೆ ಕಡಿವಾಣ ಬಿದ್ದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 100 ಕ್ವಿಂಟಲ್‌ಗೂ ಹೆಚ್ಚು ಅಕ್ಕಿ ಗೋದಾಮಿನಿಂದಲೇ ಕಳವು ಆಗಿದೆ.ಅಷ್ಟೇ ಅಲ್ಲದೇ ಅನಾಮಿಕ ವ್ಯಕ್ತಿಗಳ ಹೆಸರಿಗೆ ಲಕ್ಷಗಟ್ಟಲೆ ಹಣ ಪಾವತಿ ಆಗಿದ್ದು ಭಾರಿ ಪ್ರಮಾಣದಲ್ಲಿ ಹಣ ದುರುಪಯೋಗ ವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದ್ದು ಪ್ರಕರಣ ತನಿಖೆ ನಡೆಯುತ್ತಿದೆ. ದಾವಣಗೆರೆ ಜಿಲ್ಲಾ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬೆಂಗಳೂರಿನ ಪ್ರಧಾನ ಕಚೇರಿಯಿಂದ ತನಿಖೆ ನಡೆಯುತ್ತಿದ್ದು, ಈ ಹಿಂದೆ ಕಾರ್ಯ ನಿರ್ವಹಿಸಿದ ಸಿಡಿಪಿಒ ರೇಖಾ ನಾಡಿಗೇರ್ ಹಾಗೂ ಈಗಿನ ಸಿಡಿಪಿಓ ಬೀರೆಂದ್ರ ಗೆ ನೋಟಿಸ್ ನೀಡಲಾಗಿದೆ. ಸಿಡಿಪಿಒಗೆ ಸೇರಿದ ಪಟ್ಟಣದ ಎಪಿಎಂಸಿ ಗೋದಾಮಿ ನಲ್ಲಿರುವ ಅಕ್ಕಿ ಮತ್ತು ಗೋಧಿಯನ್ನು ಗೋಲ್ಮಾಲ್ ಮಾಡಲಾಗಿದೆ ಎಂದು ತನಿಖೆಯಲ್ಲಿ ದೃಢಪಟ್ಟಿದ್ದು, ಜಿ.ಪಂ. ಅಧಿಕಾರಿಗಳು ಈಚೆಗೆ ಇಲ್ಲಿನ ಕಚೇರಿಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಕಳೆದ ಜೂನ್‌ನಲ್ಲಿ ಪ್ರಭಾರಿ ಸಿಡಿಪಿಒ ಆಗಿದ್ದ ಬಿ.ಎಸ್. ಶಿವಕುಮಾರ್ ಜಗಳೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ನೋಡಿಕೊಳ್ಳುತ್ತಿದ್ದರು. ಜುಲೈ 11ರಂದು ಅವರು ಕರ್ತವ್ಯದಿಂದ ಬಿಡುಗಡೆಯಾಗಿದ್ದು ಪ್ರಭಾರಿ ಸಿಡಿಪಿಒ ಎಚ್, ಶಾಂತಮ್ಮ ನಿಗೆ ಗೋದಾಮಿನ ಕೀ ನೀಡಿದ್ದರು. ಈ ವೇಳೆ ಶಾಂತಮ್ಮ ಅಕ್ಕಿ ಮತ್ತು ಗೋಧಿಯ ಸಂಪೂರ್ಣ ದಾಸ್ತಾನನ್ನು ತೂಕ ಮಾಡಿಸಿದಾಗ ಭಾರಿ ವ್ಯತ್ಯಾಸ ಕಂಡುಬಂದಿತ್ತು.
ಗೋದಾಮಿನಲ್ಲಿ 1,750 ಕ್ವಿಂಟಲ್ ಅಕ್ಕಿ ಹಾಗೂ 26,900 ಕೆ.ಜಿ ಗೋಧಿಉಳಿಕೆಯಾಗಿರುವ ಬಗ್ಗೆ ದಾಸ್ತಾನು ವಹಿಯಲ್ಲಿ ನಮೂದಾಗಿದೆ.ತೂಕ ಮಾಡಿಸಿದಾಗ 1,650 ಕ್ವಿಂಟಲ್‌ನಷ್ಟು ಅಕ್ಕಿ ಇದ್ದು, 103 ಕ್ವಿಂಟಲ್‌ನಷ್ಟು ಅಕ್ಕಿ ಕಡಿಮೆಯಾಗಿತ್ತು. ಗೋಧಿ 353 ಗೋದಾಮಿನ ದಾಸ್ತಾನು ಇದ್ದು 84 ಕ್ವಿಂಟಲ್ ಕೆ.ಜಿ ಹೆಚ್ಚಿನ ಉಳಿಕೆ ಕಂಡುಬಂದಿತ್ತು.ದಾಸ್ತಾನು ವಹಿಯಲ್ಲಿನ ಪ್ರಮಾಣ ಹಾಗೂ ತೂಕದ ಸಮಯದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿರುವ ಬಗ್ಗೆ ಪ್ರಭಾರ ಸಿಡಿಪಿಒ ಶಾಂತಮ್ಮ ಅವರು ಜುಲೈ 30ರಂದು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪ ವರದಿ ಸಲ್ಲಿಸಿದ್ದಾರೆ
ಅನಾಮಿಕರಿಗೆ 7 ಲಕ್ಷ ಪಾವತಿ: ಏಪ್ರಿಲ್ 259 ಕೇಂದ್ರಗಳಿಗೆ ಮಹಿಳಾ ಪೂರಕ ಪೌಷ್ಟಿಕ ಆಹಾರ ಪೂರೈಕೆ ಘಟಕ (ಎಂ.ಎಸ್. ಪಿ.ಸಿ.)ದಿಂದ ಆಹಾರ ಪೂರೈಕೆಯಾಗುವ ಸಾಗಣೆ ವೆಚ್ಚ ಪ್ರತಿ ತಿಂಗಳು 55,000 ಇದ್ದು ಜುಲೈ ತಿಂಗಳೊಂದರಲ್ಲೇ 3 ಬಾರಿ 7 ಲಕ್ಷ ಹಣವನ್ನು ದಾವಣಗೆರೆ ನವೀನ್ ಜೈನ್ ಎಂಬ ವ್ಯಕ್ತಿಗೆ ಎಂ.ಎಸ್.ಪಿ.ಸಿ ಖಾತೆಯಿಂದ ಜಮಾ ಮಾಡಲಾಗಿದೆ ಎಂಬ ದೂರು ಇದೆ. ಆ ಸಮಯದಲ್ಲಿ ಬಿ.ಎಸ್. ಶಿವಕುಮಾರ್ ಅವರೇ ಪ್ರಭಾರ ಸಿಡಿಪಿಓ ಆಗಿದ್ದರು.
ಪ್ಲಾಸ್ಟಿಕ್ ಕವರ್ ಖರೀದಿಯಲ್ಲಿ 14 ಲಕ್ಷ ಅವ್ಯವಹಾರ: ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವ ಪ್ಲಾಸ್ಟಿಕ್ ಕವರ್ ಖರೀದಿಗೆ ಸಂಬಂಧಿಸಿದಂತೆ 2021 ರಿಂದ 2022 ರವರೆಗು 14 ಲಕ್ಷವನ್ನು ಪ್ಲಾಸ್ಟಿಕ್ ಕವರ್ ಪೂರೈಕೆದಾರರಿಗೆ ಪಾವತಿಸದೇ ಕೆಲ ಅಧಿಕಾರಿಗಳೇ ಗುಳುಂ ಮಾಡಿದ್ದಾರೆ.ಇದರಿಂದ ಎಂ.ಎಸ್. ಪಿ.ಸಿ.ಗೆ ಭಾರಿ ನಷ್ಟವಾಗಿದೆ. ಇದರಿಂದಾಗಿಯೇ ಪಟ್ಟಣದ ಸಿಡಿಪಿಒ ಎಂ.ಎಸ್.ಪಿ.ಸಿ ಘಟಕದಲ್ಲಿ 21 ಸಿಬ್ಬಂದಿ ಕೆಲಸ ಮಾಡುತ್ತಿದ್ದು, 4 ತಿಂಗಳಿಂದ ಅವರಿಗೆ ವೇತನ ಪಾವತಿಯಾಗಿಲ್ಲ.
ಒಂದೂವರೆ ವರ್ಷ ಕಾಲ ತಾಲ್ಲೂಕು ಕಚೇರಿಯಲ್ಲಿ ಅನಧಿಕೃತವಾಗಿ ಎಫ್.ಡಿ.ಎ ಹಾಗೂ ಪ್ರಭಾರಿ ಸಿಡಿಪಿಓ ಆಗಿ ಕಾರ್ಯನಿರ್ವಹಿಸಿದ ವ್ಯಕ್ತಿಯೊಬ್ಬರು ಬೇರೆ ಅಧಿಕಾರಿಗಳ ಹೆಸರಿನಲ್ಲಿರುವ ಡಿಜಿಟಲ್ ಕೀಯನ್ನು ದುರುಪಯೋಗಪಡಿಸಿಕೊಂಡು ಖಜಾನೆಯಿಂದ ವಿವಿಧ ಯೋಜನೆಗಳಡಿ ಹಣವನ್ನು ಡ್ರಾ ಮಾಡಿ ಗಂಭೀರ ಜುಲೈ ಅಪರಾಧ ಎಸಗಿದ್ದಾರೆ. ಇದೀಗ ಶಿವಕುಮಾರ್ ಗೆ ಬೇರೆಡೆ ವರ್ಗಾವಣೆಯಾಗಿದ್ದು ಬಿಟ್ಟರೇ ಇನ್ನು ಅಮಾನತ್ತುಗೊಳಿಸುವ ನಿರ್ಧಾರಕ್ಕೆ ಇಲಾಖೆ ಬಂದಿಲ್ಲ.
ಸ್ತನದಲ್ಲಿ ಕಾಣಿಸುವ ಇಂಥ ಸಮಸ್ಯೆಗೇನೂ ಟೆನ್ಷನ್ ಮಾಡಿಕೊಳ್ಳೋದು ಬೇಡ!
ಇಲಾಖೆಗೆ ಸೇರಿದ ಅಕ್ಕಿ ಮತ್ತು ಗೋಧಿಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿರುವುದು ಮುಂತಾದ ಆರೋಪಗಳ ಬಗ್ಗೆ ಇಬ್ಬರು ಅಧಿಕಾರಿಗಳಿಗೆ ಶಿಶು ಅಭಿವೃದ್ಧಿ ಇಲಾಖೆಯ ಪ್ರಧಾನ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ಜಿಲ್ಲಾ ಪಂಚಾಯಿತಿಯಿಂದಲೂ ತನಿಖೆ ನಡೆಯುತ್ತಿದೆ. ತನಿಖೆಯ ಈ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ತಿಳಿಸಿದ್ದಾರೆ.
‘ಮಾತೃವಂದನಾ’ ಹಣ ನಿರೀಕ್ಷೆಯಲ್ಲಿ ಗರ್ಭಿಣಿಯರು, ತಾಯಂದಿರು
ಜಗಳೂರು ತಾಲೂಕಿನಲ್ಲಿ ಸಿಡಿಪಿಓ ಇಲಾಖೆಯಲ್ಲಿ ಅಕ್ಕಿ ಗೋಲ್ಮಾಲ್ ಇದೇ ಮೊದಲಲ್ಲ. ಈ ಹಿಂದೆ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಅಕ್ಕಿ ಗೋಲ್ಮಾಲ್ ಆಗುತ್ತಿದೆ ಎಂಬ ಮಾಹಿತಿ ಮೇರೆಗೆ ಜಗಳೂರು ಸಿಡಿಪಿಓ ಗೋದಾಮಿನ ಮೇಲೆ ಕಾರ್ಯಾಚರಣೆಯಲ್ಲಿ ಸಿಡಿಪಿಓ ಗೋದಾಮಿನಿಂದ ಒಂದು ಲೋಡ್ ಅಕ್ಕಿ ಕಣ್ಮರೆಯಾಗಿದ್ದು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಪ್ರಕರಣ ದಾಖಲಾಗಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.