ಮಂಡ್ಯ(ಜೂ.27): ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಅಮೃತ ಮಹಲ್ ಕಾವಲು ಪ್ರದೇಶದ ಸುಮಾರು 30ಕ್ಕೂ ಹೆಚ್ಚು ಅಕ್ರಮ ಕಲ್ಲುಗಣಿಗಾರಿಕೆ ಸ್ಥಳಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಟಿ.ವಿ.ಪುಷ್ಪ ಹಾಗೂ ಮತ್ತವರ ತಂಡ ಶುಕ್ರವಾರ ದಿಢೀರ್‌ ಭೇಟಿ ನೀಡಿ ಅಕ್ರಮವಾಗಿ ನಡೆಸುತ್ತಿದ್ದ ಗಣಿಗಾರಿಕೆಗೆ ಬ್ರೇಕ್‌ ಹಾಕಿದರು.

ಕಲ್ಲು ಗಣಿಗೆ ಸಂಪೂರ್ಣ ನಿಷೇಧ ಹೇರಿದ್ದರೂ ಸಹ ಬೇಬಿ ಬೆಟ್ಟದಲ್ಲಿ ಕದ್ದುಮುಚ್ಚಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಮಾಹಿತಿ ಇತ್ತು. ಅಲ್ಲದೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ಸೂಚನೆ ಮೇರೆಗೆ ಶುಕ್ರವಾರ ಬೆಳಿಗ್ಗೆ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಕ್ಕೆ ತೆರಳಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಟಿ.ವಿ.ಪುಷ್ಪ, ಗಣಿ ಅಧಿಕಾರಿ ನಟಶೇಖರ್‌, ಅರುಣ್‌ ಕುಮಾರ್‌ ಹಾಗೂ ಅಧಿಕಾರಿಗಳ ತಂಡ ಬೇಬಿಬೆಟ್ಟದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಸುಮಾರು 30ಕ್ಕೂ ಅಧಿಕ ಕಲ್ಲು ಗಣಿಗಾರಿಕೆಯ ಪ್ರದೇಶದಲ್ಲಿನ ಇಟಾಚಿಯಿಂದ ಟ್ರಂಚ್‌ ತೆಗೆಸಿ, ತಂತಿ ಬೇಲಿ ಹಾಕಿಸಿ ಆ ಸ್ಥಳಗಳಲ್ಲಿ ಗಿಡಗಳನ್ನು ನಡೆಸುವ ಮೂಲಕ ಬೇಬಿಬೆಟ್ಟದ ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣ ಬಂದ್‌ ಮಾಡುವ ಕೆಲಸಕ್ಕೆ ಮುಂದಾದರು.

ಕೊರೋನಾ ಪಾಸಿಟಿವ್‌: ಹೂವಿನಹಡಗಲಿ ಸೇರಿ ಮೂರು ಪ್ರದೇಶ ಸೀಲ್‌ಡೌನ್‌

ಬೇಬಿ ಬೆಟ್ಟದಲ್ಲಿ ಬಹಳ ವರ್ಷಗಳಿಂದಲೂ ಅನಧಿಕೃತವಾಗಿ ನಡೆಸುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಶಾಶ್ವತವಾಗಿ ಸ್ಥಗಿತಗೊಳಿಸುವ ಮೂಲಕ ಲೂಟಿಯಾಗುತ್ತಿದ್ದ ಪ್ರಾಕೃತಿಕ ಸಂಪತ್ತನ್ನು ರಕ್ಷಣೆ ಮಾಡುವ ಕೆಲಸಕ್ಕೆ ಅಧಿಕಾರಿಗಳ ತಂಡ ಮುಂದಾಗಿದೆ. ಬೇಬಿ ಬೆಟ್ಟಸೇರಿದಂತೆ ತಾಲೂಕಿನ ಅನೇಕ ಕಡೆ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಣಿಕೆಗೆ ಬ್ರೇಕ್‌ ಹಾಕಿದ್ದಾರೆ. ಇತ್ತೀಚೆಗಷ್ಟೆತಾಲೂಕಿನ ಪಟ್ಟಸೋಮನಹಳ್ಳಿ ಸಮೀಪದ ಮಡಿಕೆ ಪಟ್ಟಣದ ಬಳಿ ಕಳೆದ ಹಲವಾರು ವರ್ಷಗಳಿಂದ ನಡೆಸುತ್ತಿದ್ದ ಅಕ್ರಮ ಗ್ರಾನೈಟ್‌ ಕಲ್ಲು ಗಣಿಗಾರಿಕೆಯ ಮೇಲು ಸಹ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದ ಘಟನೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬಳ್ಳಾರಿ: ಕೊರೋನಾಗೆ ಮತ್ತೊಂದು ಬಲಿ, ಒಂದೇ ದಿನ ಹೊಸ 47 ಪಾಸಿಟಿವ್‌ ಕೇಸ್‌

ತಾಲೂಕಿನ ಬೇಬಿಬೆಟ್ಟದ ಅಮೃತಮಹಲ್ ಕಾವಲು ಪ್ರದೇಶದಲ್ಲಿ ಪರಿಸರ ವಿಮೋಚನ ಪತ್ರ ಪಡೆಯದ ಸುಮಾರು 30ಕ್ಕೂ ಅಧಿಕ ಕಲ್ಲು ಗಣಿಗುತ್ತಿಗೆಯನ್ನು ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿಯ ಸೂಚನೆಯಂತೆ ರದ್ದುಗೊಳಿಸಿದ್ದೇವೆ. ‘ಸಿ’ಫಾರಂ ಹೊಂದಿರುವ 21 ಮಂದಿ ಕ್ರಷರ್‌ ಗೆ ಕಲ್ಲು ಕ್ರಷಿಂಗ್ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಇಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶವಿಲ್ಲ, ಬೇರೆಡೆಯಿಂದ ಕಲ್ಲುತಂದು ಕ್ರಷರ್‌ ಮಾಡಬಹುದು ಎಂದು ಹಿರಿಯ ಭೂ ವಿಜ್ಞಾನಿ ಟಿ.ವಿ. ಪುಪ್ಪ ತಿಳಿಸಿದ್ದಾರೆ.