ಕೋವಿಡ್ ಬಿಟ್ಟರೂ ವಾಯುವ್ಯ ಸಾರಿಗೆ ಸಂಸ್ಥೆಗೆ ತಪ್ಪದ ಸಂಕಷ್ಟ
* ಇನ್ನೆರಡು ದಿನಗಳಲ್ಲಿ ಪೂರ್ಣ ಸಂಬಳ ಕೊಡುವ ಭರವಸೆ
* ಆದಾಯದಲ್ಲಿ ಗಣನೀಯ ಇಳಿಕೆ
* ನವೆಂಬರ್‌ವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ
ಮಯೂರ ಹೆಗಡೆ
ಹುಬ್ಬಳ್ಳಿ(ಅ.01): ಕೋವಿಡ್‌ನಿಂದ(Covid19) ಒಂದು ಮಟ್ಟಿಗೆ ಚೇತರಿಸಿಕೊಂಡರೂ ವಾಕರಸಾಸ(NWKRTC) ತನ್ನ ನೌಕರರಿಗೆ ಪೂರ್ಣ ಪ್ರಮಾಣದ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ. ಆಗಸ್ಟ್ ತಿಂಗಳ ಸಂಬಳವನ್ನು ಶೇ. 50ರಷ್ಟು ಕೊಟ್ಟಿರುವ ಸಂಸ್ಥೆ ಇನ್ನೆರಡು ದಿನಗಳಲ್ಲಿ ಪೂರ್ಣ ಸಂಬಳ ಕೊಡುವ ಭರವಸೆ ನೀಡಿದೆ.
ಕೋವಿಡ್ ವೇಳೆ ಸಂಪೂರ್ಣ ಬಂದ್ ಆಗಿದ್ದ ಬಸ್ ಸಂಚಾರ ಈಗ ಬಹುತೇಕ ಪೂರ್ಣ ಪ್ರಮಾಣದ ಸೇವೆ ಒದಗಿಸುತ್ತಿದೆ. ಆದರೂ ಬೊಕ್ಕಸಕ್ಕೆ ಹಿಂದಿನಷ್ಟು ಆದಾಯ ಸಿಗುತ್ತಿಲ್ಲ. ಹೀಗಾಗಿ ವಾಕರಸಾಸಂ ಸಂಸ್ಥೆಯ ಸುಮಾರು 21 ಸಾವಿರ ಉದ್ಯೋಗಿಗಳಿಗೆ ಕಳೆದ ಆಗಸ್ಟ್ ತಿಂಗಳ ಸಂಬಳ(Salary) ಶೇ. 50ರಷ್ಟು ಮಾತ್ರ ನೀಡಲಾಗಿದೆ. ಉಳಿದ ಬಾಕಿಯನ್ನು ಶೀಘ್ರ ಕೊಡುವುದಾಗಿ ನೌಕರರಿಗೆ ತಿಳಿಸಲಾಗಿದೆ.
ಸಂಸ್ಥೆಯ ಆದಾಯ ಖೋತಾಕ್ಕೆ ಕೋವಿಡ್ ಮಾತ್ರವಲ್ಲದೆ ಇನ್ನೂ ಕೆಲ ಕಾರಣಗಳು ಸೇರಿಕೊಂಡಿವೆ. ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಮುಂದಾಗದಿರುವುದು, ಹಬ್ಬ, ಜಾತ್ರೆಗಳ ವಿಶೇಷ ಬಸ್ ಸಂಚಾರದಿಂದ ಆದಾಯ ಖೋತಾ, ಈಗಲೂ ಮಹಾರಾಷ್ಟ್ರಕ್ಕೆ ತೆರಳುವ ಬಸ್‌ನಲ್ಲಿ ಹೆಚ್ಚಿನ ಜನ ಹೋಗಲು ಸಾಧ್ಯವಾಗದೆ ಅಲ್ಲಿಂದಲೂ ನಿರೀಕ್ಷಿತ ಆದಾಯ ಬಾರದಿರುವುದು ಸಮಸ್ಯೆ ತಂದಿಟ್ಟಿದೆ.
'ವಾಯುವ್ಯ ಸಾರಿಗೆಗೆ ನಿತ್ಯ 1.5 ಕೋಟಿ ನಷ್ಟ'
2019ರಲ್ಲಿ ಸುಮಾರು 4.90 ಲಕ್ಷ ವಿದ್ಯಾರ್ಥಿಗಳು(Students) ಬಸ್ ಪಾಸ್ ಪಡೆದಿದ್ದರು ಹಾಗೂ ನವೀಕರಣ ಮಾಡಿಕೊಂಡಿದ್ದರು. 2020ರಲ್ಲಿ ಕೋವಿಡ್ ಸಂಕಷ್ಟ ಎದುರಾಗಿದ್ದರೂ 2.26 ಲಕ್ಷದಷ್ಟು ವಿದ್ಯಾರ್ಥಿಗಳು ಪಾಸ್ ತೆಗೆದುಕೊಂಡಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಸಂಸ್ಥೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜೂನ್‌ನಿಂದ ಸೆ. 25ರ ವರೆಗೆ ಪಾಸ್ ಅವಧಿ ವಿಸ್ತರಿಸಿತ್ತು. ಈವರೆಗೆ ಕೇವಲ ಸುಮಾರು 40- 45 ಸಾವಿರದಷ್ಟು ವಿದ್ಯಾರ್ಥಿಗಳು ಮಾತ್ರ ಪಾಸ್ ಪಡೆದಿದ್ದಾರೆ. ಇದರ ಆದಾಯ ಸಂಸ್ಥೆಗೆ ಬಂದಿಲ್ಲ. ಈಗಲೂ ಕೋವಿಡ್ ಕಾರಣಕ್ಕಾಗಿ ಮಹಾರಾಷ್ಟ್ರದಿಂದ ಹೋಗಿ ಬರುವವರ ಆರ್‌ಟಿಪಿಸಿಆರ್ ವರದಿಯನ್ನು ಕಡ್ಡಾಯವಾಗಿ ಪಡೆಯಲಾಗುತ್ತಿದೆ. ಹೀಗಾಗಿ ಬೆಳಗಾವಿ, ಚಿಕ್ಕೋಡಿ ಮತ್ತು ಬಾಗಲಕೋಟೆಯಿಂದ ಮಹರಾಷ್ಟ್ರಕ್ಕೆ ಹೋಗಿಬರುತ್ತಿದ್ದ ಕಾರ್ಮಿಕರ ಸಂಚಾರ ಗಣನೀಯವಾಗಿ ಇಳಿದಿದೆ. ಈ ಮೂರು ವಿಭಾಗದಿಂದಲೇ ಸಂಸ್ಥೆಗೆ ದಿನಕ್ಕೆ 50- 60ಲಕ್ಷ ಆದಾಯ ಬರುತ್ತಿತ್ತು. ಆದರೆ ಈಗ ಇಲ್ಲಿನ ಆದಾಯ ಗಣನೀಯ ಇಳಿಕೆಯಾಗಿದೆ. ಇನ್ನು, ವಿಶೇಷ ಜಾತ್ರಾ ಮಹೋತ್ಸವಗಳಾದ ಶ್ರೀಶೈಲ, ಉಳವಿ ಚನ್ನಬಸಬಸವೇಶ್ವರ, ಯಲ್ಲಮ್ಮನ ಗುಡ್ಡದ ಜಾತ್ರೆಗಳು ನಡೆದಿಲ್ಲ. ವಿಶೇಷ ಬಸ್ ವ್ಯವಸ್ಥೆ ಮಾಡಿರಲಿಲ್ಲ. ಸಹಜವಾಗಿ ಭಕ್ತರು ತೆರಳಿಲ್ಲ. ಇದು ಕೂಡ ಬೊಕ್ಕಸ ತುಂಬದಿರಲು ಕಾರಣ.
ವಾಕರಸಾ ಸಂಸ್ಥೆಯಲ್ಲಿ ಒಟ್ಟಾರೆ 4600 ಮಾರ್ಗಸೂಚಿಗಳಿದ್ದು, ಪ್ರಸ್ತುತ 4200- 4300 ಮಾರ್ಗಸೂಚಿಗಳಲ್ಲಿ ಸಂಚಾರ ನಡೆದಿದೆ. ಕೋವಿಡ್ ಪೂರ್ವದಲ್ಲಿ ದಿನಕ್ಕೆ 4.50 ಕೋಟಿ ಆದಾಯ ಇರುತ್ತಿತ್ತು. ಕಳೆದ ಮೂರ್ನಾಲ್ಕು ತಿಂಗಳಲ್ಲಿ ದಿನಕ್ಕೆ ಸರಾಸರಿ 3.50ರಿಂದ 3.60 ಕೋಟಿ ಆದಾಯ ಬರುತ್ತಿದೆ. ಕಳೆದ ಎರಡು ದಿನಗಳಿಂದ ಇದು ಕೊಂಚ ಚೇತರಿಕೆ ಕಂಡಿದೆ ಎನ್ನುತ್ತಾರೆ ಅಧಿಕಾರಿಗಳು. ನಿರ್ವಹಣೆ ವೆಚ್ಚ ಸೇರಿದಂತೆ ಇತರೆ ಕಾರಣಕ್ಕೆ ಆಗಸ್ಟ್ ತಿಂಗಳಲ್ಲಿ ಪೂರ್ಣ ಪ್ರಮಾಣದ ಸಂಬಳ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪಾಸ್ ಪಡೆಯಿರಿ:
ಎಂಡಿ 2020- 21ನೇ ಸಾಲಿನಲ್ಲಿ ಪ್ರವೇಶ ಪಡೆದು ತರಗತಿ ಪರೀಕ್ಷೆ ಬಾಕಿ ಇರುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕಕ್ಕೆ ಅಂತ್ಯಗೊಳ್ಳುವಂತೆ ಗರಿಷ್ಠ ನವೆಂಬರ್‌ವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಸೆ. 1ರಿಂದ ವಿದ್ಯಾರ್ಥಿ ಬಸ್ ಪಾಸ್ ವಿತರಣೆಯ ಕಾರ್ಯ ಪ್ರಗತಿಯಲ್ಲಿದೆ. ಸೆ. 25ರ ವರೆಗೆ 95,179 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಸೆ. 26ರಿಂದ 29ರ ವರೆಗೆ ಕೇವಲ 4 ದಿನಗಳಲ್ಲಿ 54,769 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರಸಕ್ತ ವರ್ಷದ ಬಸ್‌ಪಾಸ್ ಪಡೆಯದೇ ಇರುವ ವಿದ್ಯಾರ್ಥಿಗಳು ಕೂಡಲೇ ಸೇವಾಸಿಂಧು ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ಸಂಸ್ಥೆಯ ಪಾಸ್ ಕೌಂಟರ್‌ಗಳಿಂದ ಬಸ್‌ಪಾಸ್ ಸೌಲಭ್ಯದ ಸದುಪಯೋಗ ಪಡೆಯಬೇಕೆಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ತಿಳಿಸಿದ್ದಾರೆ.