ಹುಬ್ಬಳ್ಳಿ(ಆ.27):  ಹುಬ್ಬಳ್ಳಿಯಿಂದ ಅಂತಾರಾಜ್ಯ ಬಸ್‌ಗಳ ಸಂಚಾರವನ್ನು ಆರಂಭಿಸಲು ವಾಕರಸಾಸಂಸ್ಥೆ ಹುಬ್ಬಳ್ಳಿ ವಿಭಾಗದಲ್ಲಿ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ನಿರ್ದೇಶನ ಬಂದ ಕೂಡಲೇ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಬಸ್‌ಗಳ ಕಾರ್ಯಾಚರಣೆಯನ್ನು ಮರು ಪ್ರಾರಂಭ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ತಿಳಿಸಿದ್ದಾರೆ.

ಲಾಕ್‌ಡೌನ್‌ ಪೂರ್ವದಲ್ಲಿ ಹುಬ್ಬಳ್ಳಿ ವಿಭಾಗದಿಂದ ಮಹಾರಾಷ್ಟ್ರಕ್ಕೆ 38, ಗೋವಾ 11, ತೆಲಂಗಾಣ 12, ತಮಿಳುನಾಡು 2 ಹಾಗೂ ಆಂಧ್ರಪ್ರದೇಶಕ್ಕೆ 2 ಒಟ್ಟು 65 ಬಸ್‌ಗಳು ಸಂಚರಿಸುತ್ತಿದ್ದವು.

ಹುಬ್ಬಳ್ಳಿ: ಫ್ರೂಟ್ ಇರ್ಫಾನ್ ಕೊಲೆ, ಬಾಂಬೆ ಶೂಟರ್ಸ್ ಅರೆಸ್ಟ್‌

ಮುಂಬೈ, ಶಿರಡಿ, ಪಿಂಪ್ರಿ, ಹೈದರಾಬಾದ್‌, ಚೆನ್ನೈ, ಸೊಲ್ಲಾಪುರ ಮುಂತಾದ ಪ್ರಮುಖ ಸ್ಥಳಗಳಿಗೆ ವೋಲ್ವೊ, ಎಸಿ ಸ್ಲೀಪರ್‌, ನಾನ್‌ ಎಸಿ ಸ್ಲೀಪರ್‌ ಹಾಗೂ ರಾಜಹಂಸ ಸೇರಿದಂತೆ 26 ಪ್ರತಿಷ್ಠಿತ ಐಷಾರಾಮಿ ಬಸ್‌ಗಳು ಸಂಚರಿಸುತ್ತಿದ್ದವು. ಇವುಗಳೊಂದಿಗೆ ಮುಂಬೈ, ಪೂನಾ, ಬೊರಿವಿಲಿ, ಪಣಜಿ, ವಾಸ್ಕೋ, ಮಡಗಾಂವ, ಔರಂಗಾಬಾದ್‌, ಇಚಲಕರಂಜಿ, ಮೀರಜ್‌, ಸೋಲ್ಲಾಪುರ, ಬಾರ್ಶಿ, ಮಂತ್ರಾಲಯ, ಹೈದರಾಬಾದ್‌ ಮತ್ತಿತರ ಸ್ಥಳಗಳಿಗೆ 39 ವೇಗದೂತ ಬಸ್ಸುಗಳನ್ನು ಸಹಾ ಕಾರ್ಯಾಚರಣೆ ಮಾಡಲಾಗುತ್ತಿತ್ತು.

ಕೊರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಯಾವ ಮಾರ್ಗಗಳಲ್ಲಿ ಯಾವ ಬಗೆಯ ಮತ್ತು ಎಷ್ಟು ಬಸ್‌ಗಳನ್ನು ಕಾರ್ಯಾಚರಣೆ ಮಾಡಬೇಕು ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.