ಬ್ಯಾಡಗಿ: ಅಧಿಕಾರಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರ
ಹಾವೇರಿ ಜಿಲ್ಲೆಯ ಬ್ಯಾಡಗಿ ಬಸ್ ಡಿಪೋದಲ್ಲಿ ನಡೆದ ಘಟನೆ| ಆತ್ಯಹತ್ಯೆ ಯತ್ನಕ್ಕೆ ಡಿಪೋ ಮ್ಯಾನೇಜರ್ ನೀಡುತ್ತಿರುವ ಕಿರುಕುಳವೇ ಕಾರಣ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ಇಲಾಖೆ ಸಿಬ್ಬಂದಿ|
ಬ್ಯಾಡಗಿ(ಮಾ.17): ಸಾರಿಗೆ ಇಲಾಖೆಯ ಚಾಲಕ ಕಂ ನಿರ್ವಾಹಕರೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಗ್ಗೆ ಬ್ಯಾಡಗಿ ಬಸ್ ಡಿಪೋದಲ್ಲಿ ನಡೆದಿದೆ.
ಇಲ್ಲಿಯ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎ.ಬಿ. ಮನೋಜಕುಮಾರ (45) ಆತ್ಮಹತ್ಯೆಗೆ ಪ್ರಯತ್ನಿಸಿದವರು. ಮೂಲತಃ ದಾವಣಗೆರೆ ಜಿಲ್ಲೆ ರಾಮಗೊಂಡನಹಳ್ಳಿ ನಿವಾಸಿಯಾಗಿರುವ ಇವರು ಹಲವು ವರ್ಷಗಳಿಂದ ಬ್ಯಾಡಗಿಯಲ್ಲಿ ಚಾಲಕ ಕಂ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಾವೇರಿ: ಬಸ್ ಇದ್ದರೂ ಓಡಿಸಲು ಚಾಲಕರಿಲ್ಲ, ವಿದ್ಯಾರ್ಥಿಗಳಿಗೆ ಸಮಸ್ಯೆ
ಘಟನೆ ಹಿನ್ನಲೆ:
ಡಿಪೋಗೆ ಬಂದಿದ್ದರೂ ಕರ್ತವ್ಯಕ್ಕೆ ತೆರಳದೆ ಕಾಲಹರಣ ಮಾಡಿದ್ದೀರಿ ಎಂದು ಕಾರಣ ನೀಡಿ ಡೀಪೋ ಮ್ಯಾನೇಜರ್ ಅವರು ಐದು ದಿನದ ಹಿಂದೆ ಮನೋಜಕುಮಾರ ಅವರನ್ನು ಅಮಾನತು ಮಾಡಿದ್ದರು. ಮನೋಜಕುಮಾರ, ಮಂಗಳವಾರ ಡಿಪೋಗೆ ತೆರಳಿ ಡಿಪೋ ಮ್ಯಾನೇಜರ್‌ಗೆ ಸರ್ ಹೀಗ್ಯಾಕೆ ಮಾಡಿದ್ದೀರಿ, ನಮ್ಮ ಹೆಂಡತಿ ಮಕ್ಕಳ ಗತಿ ಏನು ಎಂದು ಕೇಳಲು ಹೋಗಿದ್ದಾಗ ಇಬ್ಬರ ನಡುವೆ ವಾಗ್ವಾದ ನಡೆಸಿದೆ. ಇದರಿಂದ ಮನನೊಂದ ಮನೋಜಕುಮಾರ ಸ್ಥಳದಲ್ಲಿಯೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಅಲ್ಲಿದ್ದ ಸಿಬ್ಬಂದಿ ಪಟ್ಟಣದ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಅವರು ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮನೋಜಕುಮಾರ ಅವರ ಆತ್ಯಹತ್ಯೆ ಯತ್ನಕ್ಕೆ ಬ್ಯಾಡಗಿ ಡಿಪೋ ಮ್ಯಾನೇಜರ್ ನೀಡುತ್ತಿರುವ ಕಿರುಕುಳವೇ ಕಾರಣ ಎಂದು ಆರೋಪಿಸಿ ಸಾರಿಗೆ ಇಲಾಖೆ ಸಿಬ್ಬಂದಿ ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಇಲಾಖೆ ನೌಕರರು ಮೊದಲೇ ದಯನೀಯ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಮಯಲ್ಲಿ ನೌಕರರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಕೂಡಲೇ ಘಟನೆಗೆ ಕಾರಣರಾದ ಡಿಪೋ ಮ್ಯಾನೇಜರ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಕಾವು ತಟ್ಟಲಿದೆ ಎಂದು ನೌಕರರ ಕೂಟದ ಅಧ್ಯಕ್ಷ ಚಂದ್ರಪ್ಪ ದಾನಪ್ಪನರ ತಿಳಿಸಿದ್ದಾರೆ.