ಗದಗ(ಫೆ.27): ಎತ್ತಿನ ಚಕ್ಕಡಿ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಹಾಗೂ ಎತ್ತು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಅಡವಿಸೋಮಾಪುರ ಬಳಿ ಬುಧವಾರ ಸಂಜೆ ನಡೆದಿದೆ. ಮೃತ ರೈತನನ್ನ ಹನುಮಪ್ಪ‌ ಮುಳ್ಳೂರ(75) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಮತ್ತಿಬ್ಬರಿಗೆ ಗಂಭೀರವಾದ ಗಾಯವಾಗಿದ್ದು, ಗದಗ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳನ್ನು ಚಕ್ಕಡಿನಲ್ಲಿ ಕೂತಿದ್ದ ಫಕೀರಪ್ಪ ಹಾಗೂ ನಾರಾಯಣ ಎಂದು ಗುರುತಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತ ರೈತ ಹಾಗೂ ಗಾಯಾಳುಗಳು ಸಂಭಾಪೂರ ಗ್ರಾಮದವರಾಗಿದ್ದಾರೆ. ಜಮೀನು ಕೆಲಸ‌ ಮುಗಿಸಿಕೊಂಡು ಮನೆಗೆ ಹೊಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಗದಗನಿಂದ ಉಪ್ಪಿನ ಬೆಟಗೇರಿಗೆ ಹೊರಟಿದ್ದ ಬಸ್ ಚಕ್ಕಡಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಬಸ್ ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.