ಇಳಿದ ಕೊರೋನಾ ಪಾಸಿಟಿವ್‌ : ಕೋವಿಡ್ ಓಡಿಸುವಲ್ಲಿ ಯಶಸ್ವಿಯಾದ ಶಿವಮೊಗ್ಗ

ಶಿವಮೊಗ್ಗದಲ್ಲಿ ಕೊರೋನಾ ಪ್ರಕರಣಗಳು ಇಳಿಮುಖವಾಗಿದೆ.  ಕಡಿಮೆ ಸಂಖ್ಯೆಯಲ್ಲಿ ಪಾಸಿಟಿವ್ ಬರುತ್ತಿದೆ. 

Number Of Corona Cases  Decreases in Shivamogga  snr

ಶಿವಮೊಗ್ಗ (ಅ.09): ಜಿಲ್ಲೆಯಲ್ಲಿ ಕಳೆದ ತಿಂಗಳು ಕೊರೋನಾ ಪಾಸಿಟಿವ್‌ ಪ್ರಕರಣಗಳು ಶೇ.25ರಷ್ಟುಇದ್ದುದು, ಇದೀಗ ಶೇ.6.6 ಗೆ ಇಳಿದಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದರು.

ಗುರುವಾರ ಅವರು ಕೊರೋನಾ ನಿಯಂತ್ರಣ ಕುರಿತು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿಗೆ ಜಿಲ್ಲೆಯ ಅಂಕಿ ಅಂಶಗಳ ಮಾಹಿತಿ ನೀಡಿದರು.

ಕಳೆದ ತಿಂಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಪಾಸಿಟಿವ್‌ ಪ್ರಕರಣಗಳು ಕಡಿಮೆಯಾಗಿದ್ದು, ಶೇಕಡಾ 6.6 ದಾಖಲಾಗಿದೆ. ಇದೇ ರೀತಿ ಕರೋನಾ ಸಾವಿನ ಪ್ರಮಾಣದಲ್ಲಿಯೂ ಗಣನೀಯವಾದ ಇಳಿಕೆ ಕಂಡು ಬಂದಿದೆ. ಶೇ.2.5ರಷ್ಟಿದ್ದ ಸಾವಿನ ಪ್ರಮಾಣ ಇದೀಗ 0.9ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಕರೋನಾ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಜಿಲ್ಲೆಗೆ ಪ್ರತಿದಿನ 2250 ಕರೋನಾ ಪರೀಕ್ಷೆ ಮಾಡಲು ಗುರಿ ನಿಗದಿಪಡಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಪ್ರತಿದಿನ 3500ರಿಂದ 3800ವರೆಗೆ ಪರೀಕ್ಷೆ ನಡೆಸಲಾಗುತ್ತಿದೆ. ಪ್ರತಿದಿನ 4500ಕ್ಕೂ ಹೆಚ್ಚು ಸ್ಯಾಂಪಲ್‌ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ಕೊರೋನಾ ಮರಣ ಪ್ರಮಾಣ ತಗ್ಗಿಸಿ; ಡಿಸಿಗಳಿಗೆ ಸಿಎಂ ಬಿಎಸ್‌ವೈ ಸೂಚನೆ ..

ಪರೀಕ್ಷೆ ಪ್ರಮಾಣ ಗಣನೀಯವಾಗಿ ಹೆಚ್ಚಿಸಿರುವುದರಿಂದ ಸೋಂಕಿತರನ್ನು ಆರಂಭಿಕ ಹಂತದಲ್ಲಿಯ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ. ಇದರಿಂದಾಗಿ ರೋಗ ಲಕ್ಷಣ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದ್ದು, ಸಾವಿನ ಪ್ರಮಾಣ ಸಹ ಕಡಿಮೆಯಾಗಲು ಮತ್ತು ರೋಗ ಇನ್ನೊಬ್ಬರಿಗೆ ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 1.33ಲಕ್ಷ ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಇವರ ಪೈಕಿ 18056ಮಂದಿಗೆ ಪಾಸಿಟಿವ್‌ ಕಂಡು ಬಂದಿದೆ. ಇವರ ಪೈಕಿ ಪ್ರಸ್ತುತ 1974 ಸಕ್ರಿಯ ಪ್ರಕರಣಗಳು ಇದ್ದು, ಆಸ್ಪತ್ರೆ, ಕೋವಿಡ್‌ ರ್ಕೇ ಸೆಂರ್ಟ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 310ಮಂದಿ ಕರೋನಾದಿಂದ ಸಾವಿಗೀಡಾಗಿದ್ದಾರೆ. ಇವರ ಪೈಕಿ 240ಮಂದಿ ಕರೋನಾ ಜತೆಗೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸಹ ಹೊಂದಿದ್ದರು. 71ಮಂದಿ ಬೇರೆ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಸಾವಿಗೀಡಾದರಲ್ಲಿ ಬಹುಪಾಲು ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಹೇಳಿದರು.

ಹೋಂ ಕ್ವಾರೆಂಟೈನ್ನಲ್ಲಿರುವ 1333 ಮಂದಿಯನ್ನು ನಿರಂತರವಾಗಿ ನಿಗಾ ವಹಿಸಲು 21ವೈದ್ಯರ ತಂಡಗಳನ್ನು ರಚಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಪ್ರತ್ಯೇಕ ವೈದ್ಯರ ತಂಡಗಳನ್ನು ರಚಿಸಲಾಗಿದೆ. ಈ ತಂಡ ಎರಡು ದಿನಗಳಿಗೆ ಒಮ್ಮೆ ಪಾಸಿಟಿವ್‌ ವ್ಯಕ್ತಿಗಳನ್ನು ಸಂಪರ್ಕಿಸಿ ಆರೋಗ್ಯ ತಪಾಸಣಾ ಕಾರ್ಯ ನಡೆಸುತ್ತಿದ್ದಾರೆ. ಇವರನ್ನು ಹೊರತುಪಡಿಸಿ ಆಶಾ ಕಾರ್ಯಕರ್ತೆಯರು ಸಹ ಕರೋನಾ ಪೀಡಿತರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿದರು.

ಕೊರೋನಾ ಪರಿಣಾಮಕಾರಿಯಾಗಿ ನಿಯಂತ್ರಿಸಿರುವ ಶಿವಮೊಗ್ಗ ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ವಿಡಿಯೋ ಕಾನ್ಪರೆನ್ಸನಲ್ಲಿ ಉಪಸ್ಥಿತರಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಎಚ್ಚರಿಕೆ ಅಗತ್ಯ

ಜಿಲ್ಲೆಯಲ್ಲಿ ಕೊರೋನಾ ಸದ್ಯಕ್ಕೆ ನಿಯಂತ್ರಣದಲ್ಲಿದ್ದರೂ, ಜನರು ತೀವ್ರ ಮುಂಜಾಗರೂಕತೆ ಪಾಲಿಸಬೇಕು. ಯಾವುದೇ ಕಾರಣಕ್ಕೂ ಮಾಸ್ಕ… ಇಲ್ಲದೆ ಹೊರಗೆ ಇಳಿಯಬಾರದು. 50ವರ್ಷಕ್ಕಿಂತ ಮೇಲ್ಪಟ್ಟವರು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ವಿಡಿಯೋ ಕಾನ್ಫರೆನ್ಸ್‌ ಬಳಿಕ ಮನವಿ ಮಾಡಿದರು.

ಪೊಲೀಸ್‌ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಜಿಪಂ ಸಿಇಒ ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios