ವಿಮಾನ ನಿಲ್ದಾಣದಿಂದ 31.91 ಲಕ್ಷ ಮಂದಿ ಪ್ರಯಾಣ, ಒಂದೇ ವರ್ಷದಲ್ಲಿ ಶೇ.96 ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಸರಕು ಸಾಗಣೆಯಲ್ಲೂ ಸಾಧನೆ. 

ಬೆಂಗಳೂರು(ಏ.19): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಪ್ರಯಾಣಿಸುವವರ ಸಂಖ್ಯೆ ನಿರೀಕ್ಷೆಗೂ ಮೀರಿ ಏರಿಕೆಯಾಗಿದ್ದು, ದಾಖಲೆ ನಿರ್ಮಿಸಿದೆ. 2022-23ನೇ ಸಾಲಿನಲ್ಲಿ ಈ ವಿಮಾನ ನಿಲ್ದಾಣದ ಮೂಲಕ 31.91 ಲಕ್ಷ ಮಂದಿ ಪ್ರಯಾಣಿಸಿದ್ದು, ಒಂದೇ ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆ ಶೇ.96ರಷ್ಟು ಹೆಚ್ಚಳವಾಗಿದೆ.

2022-23ನೇ ಸಾಲಿನಲ್ಲಿ ಪ್ರಯಾಣಿಸಿದ 31.91 ಲಕ್ಷ ಪ್ರಯಾಣಿಕರ ಪೈಕಿ 28.12 ಲಕ್ಷ ದೇಶೀಯ ಮತ್ತು 3.78 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಒಳಗೊಂಡಿದೆ. ಈ ಮೂಲಕ ವಿಮಾನ ನಿಲ್ದಾಣದ ದೇಶೀಯ ವಲಯವು ಶೇ.85ರಷ್ಟು ಮತ್ತು ಅಂತಾರಾಷ್ಟ್ರೀಯ ವಲಯದಲ್ಲಿ ಶೇ.245ರಷ್ಟು ದಾಖಲೆಯ ಬೆಳವಣಿಗೆ ಕಂಡಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ(ಬಿಐಎಎಲ್‌) ಪ್ರಕಟಣೆಯಲ್ಲಿ ತಿಳಿಸಿದೆ.

ಮಳೆಯಿಂದ ಬದಲಾದ ಹವಮಾನ, ಬೆಂಗಳೂರಿಗೆ ಆಗಮಿಸಿದ 10 ವಿಮಾನ ಮಾರ್ಗ ಬದಲಾವಣೆ!

ಕಾರ್ಗೋ ವಿಭಾಗದ ಸರಕು ಸಾಗಣೆಯಲ್ಲಿ (ಬೇಗ ಹಾಳಾಗುವ ಹಣ್ಣು, ತರಕಾರಿ ಇತ್ಯಾದಿ) ಸತತ ಎರಡನೇ ವರ್ಷವೂ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಮುಂದುವರೆಸಿದೆ. 2022 ಆಗಸ್ಟ್‌ನಿಂದ ದೇಶದಲ್ಲಿ ಅಂತಾರಾಷ್ಟ್ರೀಯ ಕಾರ್ಗೋ ನಿರ್ವಹಣೆಯಲ್ಲಿ ಮೂರನೇ ಶ್ರೇಯಾಂಕ ಪಡೆದುಕೊಂಡಿದೆ. 2022 ಸೆಪ್ಟೆಂಬರ್‌ 29ರಂದು ಒಂದೇ ದಿನ 1,612 ಮೆಟ್ರಿಕ್‌ ಟನ್‌ ಸರಕು ಸಂಸ್ಕರಿಸಲಾಗಿದ್ದು, ಇದು ವಿಮಾನ ನಿಲ್ದಾಣ ಪ್ರಾರಂಭವಾದಾಗಿನಿಂದ ಈವರೆಗಿನ ಒಂದು ದಿನದಲ್ಲೇ ಅತ್ಯಧಿಕ ಸಂಸ್ಕರಣೆ ಎಂಬ ದಾಖಲೆಗೆ ಪಾತ್ರವಾಗಿದೆ ಎಂದು ಹೇಳಿದೆ.

ಬಿಐಎಎಲ್‌ ಮುಖ್ಯ ಕಾರ್ಯ ತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್‌ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ಚಾಲನೆ ನೀಡಿದ ಹೊಸ ಸೇವೆಗಳ ಪೈಕಿ ಸಿಡ್ನಿಗೆ ಕ್ವಾಂಟಾಸ್‌ನ ಸೇವೆ, ಎಮಿರೇಟ್‌ನಿಂದ ದೈನಂದಿನ ಏರ್‌ಬಸ್‌ ಸೇವೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಂದೇ ದಿನ 1.14 ಲಕ್ಷ ಪ್ರಯಾಣ ದಾಖಲೆ

ಕೋವಿಡ್‌ ನಂತರ ಪ್ರಯಾಣಿಕರ ಹೆಚ್ಚಳದಿಂದ ಹಲವು ಮಾರ್ಗಗಳು ಪುನರಾರಂಭಗೊಂಡಿವೆ. ಬೆಂಗಳೂರು ವಿಮಾನ ನಿಲ್ದಾಣ ಒಟ್ಟು 100 ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಈ ಪೈಕಿ ದೇಶೀಯ 75 ಸ್ಥಳಗಳಿಗೆ ಮತ್ತು 25 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಹೊಂದಿದೆ. ದೇಶೀಯ ವಾಯು ಸಾರಿಗೆಯಲ್ಲಿ ಶೇ.49.8ರಷ್ಟು, ಅಂತಾರಾಷ್ಟ್ರೀಯ ಬೆಳವಣಿಗೆ ಶೇ.59.60ರಷ್ಟಿದೆ. 2023 ಫೆಬ್ರವರಿ 26ರಂದು 1,14,299 ಪ್ರಯಾಣಿಕರು ಪ್ರಯಾಣಿಸಿದ್ದು, ಇದು 2023ರ ವಾರ್ಷಿಕ ಅವಧಿಯಲ್ಲಿ ಅತಿಹೆಚ್ಚು ಎನ್ನಲಾಗಿದೆ.

ಶೇ.57ರಷ್ಟು ಮಾರುಕಟ್ಟೆಪಾಲನ್ನು ಹೊಂದಿರುವ ಇಂಡಿಗೋ ಹೆಚ್ಚು ಆದ್ಯತೆಯ ದೇಶೀಯ ವಿಮಾನಯಾನ ಸಂಸ್ಥೆಯಾಗಿ ಮುಂದುವರೆದಿದೆ. ಶೇ.27ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಟಾಟಾ ಗ್ರೂಪ್‌ ನಂತರದ ಸ್ಥಾನದಲ್ಲಿದೆ. ಆಕಾಸ ಏರ್‌ ಕಾರ್ಯಾಚರಣೆ ಪ್ರಾರಂಭಿಸಿದ ಕೇವಲ ಎಂಟು ತಿಂಗಳಲ್ಲಿ ವಿಮಾನ ನಿಲ್ದಾಣದ ದೇಶೀಯ ಕಾರ್ಯಾಚರಣೆಗಳಲ್ಲಿ ಶೇ.10 ಪಾಲನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.