ಶಿವಮೊಗ್ಗ(ಮೇ.08): ಕೊರೋನಾ ಸೋಂಕಿನಿಂದಾಗಿ ಸರ್ಕಾರ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆ ನಗರ ಮತ್ತು ಗ್ರಾಮೀಣ ಪ್ರದೇಶದ ಜನರ ಜೀವನ ಸಂಕಷ್ಟದಲ್ಲಿರುವ ಸಂದಿಗ್ಧ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿ, ಅವರ ನೆಮ್ಮದಿಯ ಬದುಕಿಗೆ ಆಸರೆ ಒದಗಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು. 

ಶಿವಮೊಗ್ಗ ಸಮೀಪದ ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಡಿಕೆ ಚೀಲೂರಿನ ರಾಮಪ್ಪನ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕೆರೆ ಕಾಮಗಾರಿ ವೀಕ್ಷಿಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ನಿರ್ವಹಿಸ ಲಾಗುತ್ತಿರುವ ಈ ಯೋಜನೆಯಡಿ ಅಂತರ್ಜಲ ಚೇತನ ಯೋಜನೆಯನ್ನು ರಾಜ್ಯಾದ್ಯಂತ ಕೈಗೆತ್ತಿಕೊ ಳ್ಳಲಾಗುತ್ತಿದೆ. 

ಈ ಯೋಜನೆಯಡಿ ಜಿಲ್ಲೆಯ 271 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಉದ್ಯೋಗ ದೊರೆಯಲಿದೆ ಎಂದರು. ವಿಶೇಷವಾಗಿ ಅಂತರ್ಜಲ ಚೇತನ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಂದಾಗಿ ಮಳೆ ನೀರು ಸಂಗ್ರ ಹಣೆ ಮತ್ತು ಮಣ್ಣಿನ ಸವಕಳಿ ತಡೆ, ಮಣ್ಣಿನ ತೇವಾಂಶ ಹೆಚ್ಚಳ, ಸ್ವಾಭಾವಿಕ ಹಳ್ಳಗಳುದ್ದಕ್ಕೂ ಕೃತಕ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸುವ ಹಾಗೂ ಸ್ವಾಭಾವಿಕ ಸಸ್ಯವರ್ಗ ಹೆಚ್ಚಿಸುವ ಕಾರ್ಯ ನಡೆಯಲಿದೆ ಎಂದ ಅವರು, ಜಿಲ್ಲೆಯಲ್ಲಿ ಬೋಲ್ಡರ್ ಚೆಕ್ (ಕಲ್ಲುಗುಂಡು ತಡೆ) ನಿರ್ಮಾಣ, ಇಂಗುಬಾವಿ, ಇಂಗುಕೊಳವೆ, ಕೆರೆ ಹೊಂಡ ಸೇರಿದಂತೆ ಒಟ್ಟು 32,731 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆಯನ್ನು ರಾಜ್ಯದ 5400 ಗ್ರಾಮ ಪಂಚಾಯ್ತಿಗಳಲ್ಲಿ ವಿಸ್ತರಿಸುವ ಬಗ್ಗೆ ಆಲೋಚನೆ ನಡೆಸಲಾಗಿದೆ ಎಂದರು. 

ಉದ್ಯೋಗ ಖಾತ್ರಿ ಶ್ರಮಿಕರು ಸಂಪಾದನೆಯ ಅಲ್ಪ ಹಣದ 3 ಚೆಕ್ ಕೋವಿಡ್-19 ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳ ನಿಧಿಗೆ ಸಚಿವರ ಮೂಲಕ ಸಮರ್ಪಿಸಿದರು. ಚೆಕ್‌ನ್ನು ಪಡೆದ ಸಚಿವರು ಮಾತನಾಡಿ, ಹಣವಂತರು ದಾನ ನೀಡುವುದು ಸಹಜ. ಆದರೆ, ಶ್ರಮಿಕರು, ಜನಸಾಮಾನ್ಯರು ನೀಡುವ ಆರ್ಥಿಕ ನೆರವು ಮಹತ್ವದ್ದಾಗಿರಲಿದೆ ಎಂದರು. ಸಂಕಷ್ಟಕ್ಕೊಳಗಾಗಿರುವ ರಾಜ್ಯದ ಅನ್ನದಾತರು, ಅಗಸರು, ಕ್ಷೌರಿಕರು, ನೇಕಾರರು ಹಾಗೂ ಆಟೋ ಚಾಲಕರ ನೆರವಿಗೆ ಧಾವಿಸಿ 1,610 ಕೋಟಿ ರು. ವಿಶೇಷ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನಾರ್ಹರು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಹೊಳಲೂರಿನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಸಿಇಒ ಎಂ.ಎಲ್. ವೈಶಾಲಿ, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಇ.ಕಾಂತೇಶ್, ಹೊಳಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ.ರಾಜು, ಸದಸ್ಯೆ ಸುಮಾ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.