ಮೃತ ವ್ಯಕ್ತಿಯ ಹೆಸರಲ್ಲಿ ನರೆಗಾ ಬಿಲ್?
ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಬದಲು ಜಮಖಂಡಿ ತಾಲೂಕಿನ ಕೃಷಿ ಇಲಾಖೆ ವ್ಯಾಪ್ತಿಯ ನರೆಗಾ ಯೋಜನೆಯಡಿ ನಡೆದಿರುವ ಕಾಮಗಾರಿಯಲ್ಲಿ ಮೃತ ವ್ಯಕ್ತಿ ಹೆಸರಲ್ಲಿ ಕೂಲಿ ಹಣ ಸಂದಾಯ ಮಾಡಲಾಗಿದೆ ಎಂಬ ಆರೋಪ
ಜಮಖಂಡಿ(ಡಿ.08): ಮೃತ ವ್ಯಕ್ತಿಯ ಹೆಸರಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಿಲ್ ಸಂದಾಯ ಮಾಡಿ ಅಕ್ರಮವೆಸಗಿದ ಕೃಷಿ ಇಲಾಖೆ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ತಾಲೂಕು ಘಟಕ ಪ್ರತಿಭಟನೆ ನಡೆಸಿತು.
ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ರಾಜ್ಯ ಅಧ್ಯಕ್ಷ ಚಿನ್ನಪ್ಪ ಕುಂದರಗಿ ಮಾತನಾಡಿ, ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಕನಿಷ್ಠ 100 ದಿನಗಳು ಉದ್ಯೋಗ ಸಿಗಲಿ ಎಂಬ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ಆದರೆ, ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಬದಲು ಜಮಖಂಡಿ ತಾಲೂಕಿನ ಕೃಷಿ ಇಲಾಖೆ ವ್ಯಾಪ್ತಿಯ ನರೆಗಾ ಯೋಜನೆಯಡಿ ನಡೆದಿರುವ ಕಾಮಗಾರಿಯಲ್ಲಿ ಮೃತ ವ್ಯಕ್ತಿ ಹೆಸರಲ್ಲಿ ಕೂಲಿ ಹಣ ಸಂದಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಬಾಗಲಕೋಟೆ: ಅಭಿಮಾನಿ ಮನೆಗೆ ನಟ ಧ್ರುವ ಸರ್ಜಾ ಭೇಟಿ, ಸ್ಪೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್..!
ಹಿಪ್ಪರಗಿ ಗ್ರಾಮದ ಶೇಖವ್ವ ಶಂಕರ ಜತ್ತಿ ಇವರ ಜಾಬ್ ಕಾರ್ಡ್ (ನಂಬರ್ ಏಒ-01-005-025-001/164) ಇವರು 27-06-2021ರಂದು ಮರಣ ಹೊಂದಿದರೂ ಇವರ ಹೆಸರಿನಲ್ಲಿ ಸತತವಾಗಿ 01-10-2021ರಿಂದ 07-10-2021ರವರೆಗೂ ಕೂಲಿ ಹಣ ಸಂದಾಯ ಮಾಡಲಾಗಿದೆ. ಅಧಿಕಾರಿಗಳು ತಾವು ಮಾಡಬೇಕಾದ ಕೆಲಸದಲ್ಲಿ ಕಾನೂನು ಉಲ್ಲಂಘನೆ ಹಾಗೂ ಕರ್ತವ್ಯಲೋಪವೆಸಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳಾದ ಡಾಟಾ ಎಂಟ್ರಿ ಆಪರೇಟರ್ ಹಾಗೂ ನರೇಗಾ ಯೋಜನೆ ಅನುಷ್ಠಾನ ಮಾಡುವ ಎಂಜಿನಿಯರ್‌ರನ್ನು ಕೂಡಲೇ ಅಮಾನತುಗೊಳಿಸಿ, ವಿಚಾರಣೆಗೆ ಗುರಿ ಪಡಿಸಬೇಕು.
ಕರ್ತವ್ಯಲೋಪ ಮಾಡಿದ ಅಧಿಕಾರಿಗಳ ವಿರುದ್ಧ ಇಲಾಖೆ ಕ್ರಿಮಿನಲ್ ದೂರು ದಾಖಲೆ ಮಾಡಿ ಕೆಲಸದಿಂದ ವಜಾಗೊಳಿಸಬೇಕು. ಒಂದು ವೇಳೆ ಅವರ ವಿರುದ್ಧ ಯಾವುದೇ ಕಾನೂನು ಕ್ರಮಕೈಗೊಳ್ಳದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ತಾಲೂಕು ಅಧ್ಯಕ್ಷ ಬಸವರಾಜ ಕಾಂಬಳೆ, ಗೌರವಾಧ್ಯಕ್ಷ ಶಂಕರಾನಂದ ಕೋಪರ್ಡೆ, ಕಾರ್ಯದರ್ಶಿ ರವಿ ಪತ್ತಾರ, ಖಜಾಂಚಿ ಬಸವರಾಜ ಬಡಿಗೇರ ಅನೇಕರಿದ್ದರು.