ಕೆ.ಆರ್‌.ಪೇಟೆ (ಡಿ.03):  ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ನಿಂಬೆಹಣ್ಣಿನ ಓಡಾಟ ಜಾಸ್ತಿಯಾಗಿತ್ತು. ಕೆ.ಆರ್‌.ಪೇಟೆ ನಮ್ಮ ಕಣ್ಣಿದ್ದಂತೆ ಎಂದು ಸುಳ್ಳು ಹೇಳಿ ರಾಜಕಾರಣ ಮಾಡುತ್ತಿದ್ದವರಿಂದ ಕ್ಷೇತ್ರದ ಸಂಕೋಲೆಯನ್ನು ಬಿಡಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಗ್ರಾಮ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿ, ನಾನೂ ಕೂಡಾ ಸುಳ್ಳು ಹೇಳುವವರ ಮಧ್ಯೆ ಇದ್ದೆ ಎಂದು ಹೇಳಲು ನಾಚಿಕೆಯಾಗುತ್ತಿದೆ. ನಾನು ಮತ್ತು ಗೋಪಾಲಯ್ಯ ಇಬ್ಬರೂ ಕೂಡಾ ಬಂಧನವನ್ನು ಬಿಡಿಸಿಕೊಂಡು ಬಂದು ಮುಖ್ಯಮಂತ್ರಿ ಯಡಿಯೂಪ್ಪನವರ ಜೊತೆಯಲ್ಲಿ ಸಂತೋಷದಿಂದ ಇದ್ದೇವೆ. ನಾವು ಈ ಸಮಾವೇಶವನ್ನು ನಮಗಾಗಿ ಮಾಡುತ್ತಿಲ್ಲ. ನಿಮಗಾಗಿ ಮಾಡುತ್ತಿದ್ದೇವೆ. ಮುಂಬರುವ ಗ್ರಾಪಂ ಚುನಾವಣೆಯಲ್ಲಿ ತಾಲೂಕಿನ ಎಲ್ಲ 33 ಗ್ರಾಪಂಗಳಲ್ಲಿಯೂ ಬಿಜೆಪಿಯ ಬಾವುಟವೆ ಹಾರಾಡಬೇಕು. ಇದಕ್ಕಾಗಿ ನಮ್ಮ ಶಕ್ತಿಯನ್ನು ನಿಮಗೆ ಧಾರೆಯೆರೆಯುತ್ತೇವೆ ಎಂದು ಘೋಷಿಸಿದರು.

ಮಂಡ್ಯಕ್ಕೆ ಬಿಜೆಪಿ ಮುಂದಿನ ಅಭ್ಯರ್ಥಿ ಫಿಕ್ಸ್ : ಅವರಿಗೆ ಕಂಡೀಶನ್ ಇದೆ .

ಸಮಾವೇಶದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಬರಡು ನೆಲದಲ್ಲಿಯೂ ಕೂಡಾ ಬಿಜೆಪಿಯ ಬೆಳೆಯನ್ನು ಬೆಳೆಯಬಹುದು ಎಂಬುದಕ್ಕೆ ಸಾಕ್ಷಿ ಕೆ.ಆರ್‌.ಪೇಟೆ ಮತ್ತು ಶಿರಾ ಕ್ಷೇತ್ರಗಳು. ಈ ಗೆಲುವನ್ನು ವಿರೋಧ ಪಕ್ಷಗಳಿಗೆ ಜೀರ್ಣಿಸಿಕೊಳ್ಳಲಾಗಿತ್ತಿಲ್ಲ. ಇವರ ಯೋಗ್ಯತೆಗೆ ಶಿರಾ ಕ್ಷೇತ್ರದ ಒಂದು ಕೆರೆಗೆ ನೀರು ತುಂಬಿಸಲಾಗಿರಲಿಲ್ಲ. ಆದರೆ, ಮುಖ್ಯಮಂತ್ರಿಗಳು ಚುನಾವಣೆಯಲ್ಲಿ ಕೊಟ್ಟಭರವಸೆಯಂತೆ ಶಿರಾ ಕ್ಷೇತ್ರದ ಮದಲೂರು ಕೆರೆಗೆ ನೀರು ತುಂಬಿಸಲಾಗುತ್ತಿದೆ ಎಂದರು.

ಕೆ.ಆರ್‌.ಪೇಟೆ ಕ್ಷೇತ್ರವನ್ನು ಕೂಡಾ ನಾವು ಕೈ ಬಿಡುವ ಪ್ರಶ್ನೆಯೆಯಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ನಾರಾಯಣಗೌಡ ಉಪ ಚುನಾವಣೆಯಲ್ಲಿ ನಾಮಪತ್ರವನ್ನು ಸಲ್ಲಿಸಲು ಆಗುವುದಿಲ್ಲವೇನೋ ಎಂಬಂತೆ ಜೆಡಿಎಸ್‌-ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಅಡ್ಡಿಮಾಡಿದರು. ಆದರೆ, ಬಿಜೆಪಿ ಪಕ್ಷದ ಸಹಸ್ರಾರು ಅಭಿಮಾನಿಗಳು ಯಾವುದೆ ಉದ್ವೇಗಕ್ಕೆ ಒಳಗಾಗದೆ ಪಕ್ಷದ ಮರ್ಯಾದೆಯನ್ನು ಕಾಪಾಡಿದ್ದೀರಿ. ಅದಕ್ಕಾಗಿ ನಾನು ಸದಾ ನಿಮಗೆ ಕೃತಜ್ಞರಾಗಿರುತ್ತೇವೆ ಎಂದರು.