Asianet Suvarna News Asianet Suvarna News

ಜೆಡಿಎಸ್ ಅಭ್ಯರ್ಥಿಗೆ ನೋಟಿಸ್ : ಹುದ್ದೆಯಿಂದ ವಜಾಗೊಳಿಸಲು ರಾಜಕೀಯ ತಂತ್ರ

ನಿರ್ದೇಶಕರಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯನ್ನು ವಜಾ ಮಾಡಲು ರಾಜಕೀಯ ಪ್ರೇರಿತವಾಗಿ ನೋಟಿಸ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ. 

Notice issued To Pandavapura  Manmul  Director
Author
Bengaluru, First Published Sep 19, 2019, 10:46 AM IST

 ಪಾಂಡವಪುರ [ಸೆ.19]:  ಮನ್‌ಮುಲ್ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾಗಿರುವ ಕೆ.ಆರ್‌.ಪೇಟೆ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಎಚ್‌.ಟಿ.ಮಂಜು ಅವರನ್ನು ವಜಾಗೊಳಿಸಲು ರಾಜಕೀಯ ತಂತ್ರಗಾರಿಗೆ ಮಣಿದು ಎಆರ್‌ ಅವರು ನೋಟಿಸ್‌ ನೀಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಪಟ್ಟಣದ ಸಹಕಾರಿ ಸಂಘಗಳ ಸಹಾಯ ನಿಬಂಧಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸಹಕಾರಿ ಸಂಘಗಳ ಸಹಾಯ ನಿಬಂಧಕರ ಕಚೇರಿ ಎದುರು ಸೇರಿದ ಜೆಡಿಎಸ್‌ನ ಪುರಸಭೆ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮನ್ಮುಲ್ ನಿರ್ದೇಶಕ ಎಚ್‌.ಟಿ.ಮಂಜು ಅವರು ಕೆಆರ್‌.ಪೇಟೆ ತಾಲೂಕಿನ ಹರಳಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 180 ದಿನಗಳ ಕಾಲ ಹಾಲು ಹಾಕಿದ್ದಾರೆ. ನಂತರ ಡೈರಿಯ ನಿರ್ದೇಶಕಕ್ಕೆ ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿ ಈಗಾಗಲೆ 54 ತಿಂಗಳು ಪೂರೈಸಿದ್ದಾರೆ. ಜತೆಗೆ ಇದೀಗ ಮನ್ಮುಲ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾಗ ಚುನಾವಣಾಧಿಕಾರಿಯಾಗಿದ್ದ ಅಪಾರ ಜಿಲ್ಲಾಧಿಕಾರಿಗಳೇ ನಾಮಪತ್ರದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ನಾಮಪತ್ರ ಸರಿಯಾಗಿದೆ ಎಂದು ಘೋಷಿಸಿದ್ದಾರೆ. ಎಚ್‌.ಟಿ.ಮಂಜು ಅವರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಆದರೆ, ಕೆಲವು ರಾಜಕೀಯ ತಂತ್ರಗಾರಿಕೆಯಿಂದಾಗಿ ಮಂಜು ಅವರು ಅಕ್ರಮವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂಬುದಾಗಿ ಸಹಕಾರಿ ಸಂಘಗಳ ಸಹಾಯ ನಿಬಂಧಕರು ನೋಟಿಸ್‌ ನೀಡಿರುವ ಕ್ರಮ ಸರಿಯಲ್ಲ ಎಂದು ಕಿಡಿಕಾರಿದರು. ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಇದೇ ಸೆ.23 ಅಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಇದೀಗ ಸಹಕಾರಿ ಸಂಘಗಳ ಸಹಾಯ ನಿಬಂಧಕರು ರಾಜಕೀಯ ಒತ್ತಡಕ್ಕೆ ಮಣಿದು ಎಚ್‌.ಟಿ.ಮಂಜು ಅವರಿಗೆ ನೀವು 180 ದಿನ ಹಾಲು ಹಾಕಿಲ್ಲ. ಹಾಲು ಸರಬರಾಜು ಮಾಡಿರುವುದಕ್ಕೆ ದಾಖಲೆಗಳಿಲ್ಲ. ಸರ್ಕಾರ ಪ್ರೋತ್ಸಾಹ ಹಣವನ್ನು ಪಡೆದಿಲ್ಲ. ನೀವು ಅಕ್ರಮವಾಗಿ ನಿರ್ದೇಶಕರಾಗಿದ್ದೀರಾ ಎಂದು ನೋಟಿಸ್‌ ನೀಡಿರುವುದು ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವಿಚಾರಕ್ಕೆ ಸೆ.21ಕ್ಕೆ ಇದೇ ಪಟ್ಟಣದ ಎಆರ್‌ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಸಿ.ಅಶೋಕ್‌, ಮನ್ಮುಲ್ ಮಾಜಿ ಅಧ್ಯಕ್ಷ ಕೆ.ವೈರಮುಡಿಗೌಡ, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ತಾಪಂ ಸದಸ್ಯ ವಿ.ಎಸ್‌.ನಿಂಗೇಗೌಡ, ದೇವಳ್ಳಿ ಪ್ರಭಾಕರ್‌, ಬಲರಾಮು, ಚಲುವರಾಜು, ಚೇತನ್‌, ಪುರಸಭಾ ಸದಸ್ಯರಾದ ಗಿರೀಶ್‌, ಬಾಬು ಸೇರಿದಂತೆ ಎಲ್ಲಾ ಪುರಸಭಾ ಸದಸ್ಯರು ಹಾಜರಿದ್ದರು.

Follow Us:
Download App:
  • android
  • ios