* ವಿವಿಧ ಬುಡಕಟ್ಟು ಸಮುದಾಯದ ಜೀವನಶೈಲಿ ಬಿಂಬಿಸುವ ಕಲಾಕೃತಿಗಳು* ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಏಕೈಕ ಬುಡುಕಟ್ಟು ಸಮುದಾಯದ ಸಮಗ್ರ ಚಿತ್ರಣ * ಕೋವಿಡ್‌ 2ನೇ ಅಲೆ ಪ್ರಾರಂಭವಾಗುತ್ತಿದ್ದಂತೆ ವೀಕ್ಷಣೆ ಬಂದ್‌ 

ಜಿ.ಡಿ. ಹೆಗಡೆ

ಕಾರವಾರ(ಜೂ.28): ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ನಿರ್ಮಾಣವಾದ ರಾಕ್‌ ಗಾರ್ಡನ್‌ ನಿರ್ವಹಣೆಯಿಲ್ಲದೇ ಸೊರಗುತ್ತಿದೆ. ಜಿಲ್ಲೆಯ ಹಾಲಕ್ಕಿ, ಗೊಂಡ, ಸಿದ್ದಿ, ಗೌಳಿ ಹೀಗೆ ವಿವಿಧ ಬುಡಕಟ್ಟು ಸಮುದಾಯದ ಜೀವನಶೈಲಿ ಬಿಂಬಿಸುವ ಕಲಾಕೃತಿಗಳು ಕಲಾವಿದರ ಕೈಯಲ್ಲಿ ಅರಳಿದೆ. 2018 ಫೆಬ್ರವರಿ ತಿಂಗಳಲ್ಲಿ ಲೋಕಾರ್ಪಣೆಗೊಂಡಿದ್ದು, ಇದುವರೆಗೆ ಸಾವಿರಾರು ಜನರು ಭೇಟಿ ನೀಡಿದ್ದಾರೆ. ಆದರೆ ಮಳೆಗಾಲದ ಸಂದರ್ಭದಲ್ಲಿ, ಕೋವಿಡ್‌ ಸೋಂಕಿನಿಂದ ಉಂಟಾದ ಲಾಕ್‌ಡೌನ್‌ ಅವಧಿಯಲ್ಲಿ ನಿರ್ವಹಣೆ ಇಲ್ಲದೇ ಗಾರ್ಡನ್‌ ಸೊರಗುತ್ತಿದೆ.

ಆಯಾ ಬುಡುಕಟ್ಟು ಸಮುದಾಯದ ಜೀವನ ಶೈಲಿ ಬಿಂಬಿಸುವ ಮೂರ್ತಿಗಳು, ಮನೆಗಳು, ಜಾನುವಾರುಗಳು... ಹೀಗೆ ಹತ್ತಾರು ಬಗೆಯ ಶಿಲ್ಪಗಳು ಇಲ್ಲಿವೆ. ಮನೆಗಳಿಗೆ ಕೆಳ ಭಾಗದಲ್ಲಿ ತಡಗಿನ ಶೀಟ್‌ ಹಾಕಲಾಗಿದ್ದು, ಸಾಂಪ್ರದಾಯಿಕವಾಗಿ ಕಾಣಲಿ ಎಂದು ಮೇಲ್ಭಾಗದಲ್ಲಿ ಸೋಗೆಯನ್ನು ಹಾಕಲಾಗಿದೆ. ರಾಕ್‌ ಗಾರ್ಡನ್‌ ಕಡಲ ತೀರದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಬಿರುಗಾಳಿಗೆ, ಭಾರಿ ಮಳೆಗೆ ಮೇಲ್ಚಾವಣಿಗೆ ಹಾಸಿದ ಸೋಗೆಗಳು ಕಿತ್ತುಹೋಗಿ ತಗಡಿನ ಶೀಟ್‌ ಕಾಣುತ್ತಿದೆ. ಗೊಂಡ ಸಮುದಾಯದ ಮನೆಯ ಮೇಲೆ ಮರ ಉರುಳಿ ಹಿಂಬದಿಯ ಭಾಗದ ಜಖಂಗೊಂಡಿದೆ. ಗಾರ್ಡನ್‌ ಒಳಭಾಗದ ಬಹುತೇಕ ಕಡೆ ಗಿಡಗಂಟಿಗಳು ಬೆಳೆದುಕೊಂಡಿದೆ. 

ಕಬ್ಬಿಣ, ಸಿಮೆಂಟಿನಿಂದ ತಯಾರಿಸಿದ ಮೂರ್ತಿ, ಹಗ್ಗ, ಮರದ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಸಮುದ್ರದ ಅಂಚಿನಲ್ಲಿ ಇರುವುದರಿಂದ ಉಪ್ಪು ನೀರಿನ ಅಂಶ ಗಾಳಿಯಲ್ಲಿ ಸೇರುವುದರಿಂದ ಬೇಗನೆ ವಸ್ತುಗಳು ಹಾಳಾಗುತ್ತವೆ. ಜತೆಗೆ ಮಳೆಗಾಲದ ಅವಧಿಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಿರುತ್ತದೆ. ಈ ಅವಧಿಯಲ್ಲಿ ಅಲ್ಲಿನ ವಸ್ತುಗಳು ಹಾಳಾಗದಂತೆ, ಬಣ್ಣ ಮಾಸದಂತೆ ಮುಚ್ಚಿಗೆ ಮಾಡುವ ಕಾರ್ಯ ನಡೆಯಬೇಕಿತ್ತು.

ಹಾವೇರಿ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣ: ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾದ ಉತ್ಸವ ಗಾರ್ಡನ್‌

ಮಕ್ಕಳು ಆಟವಾಡಲು ಬಿದಿರು ಮತ್ತು ಕಟ್ಟಿಗೆಗಳಿಂದ ನಿರ್ಮಾಣ ಮಾಡಲಾದ ಜೋಕಾಲಿ, ತಿರುಗಣಿ, ಅಟ್ಟಣಿಕೆ, ಮರಗಳ ಆಸರೆಯಲ್ಲಿ ಕೆನೊಪಿ ವಾಕ್‌ ಸೇತುವೆ ಕೂಡಾ ಹಾಳಾಗುತ್ತಿದೆ. ಕೋವಿಡ್‌ ಸೋಂಕಿನ ಮೊದಲ ಅಲೆಯಿಂದಾಗಿ 2020ರ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಬಂದ್‌ ಇಡಲಾಗಿತ್ತು. ನಂತರ ಅನ್‌ಲಾಕ್‌ ಆದ ಬಳಿಕ ನವೆಂಬರ್‌ ತಿಂಗಳಿನಿಂದ ಕಳೆದ ಮಾರ್ಚ್‌ವರೆಗೆ ಪುನಃ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಕೋವಿಡ್‌ 2ನೇ ಅಲೆ ಪ್ರಾರಂಭವಾಗುತ್ತಿದ್ದಂತೆ ವೀಕ್ಷಣೆಗೆ ಅವಕಾಶ ನೀಡುತ್ತಿಲ್ಲ.

ಜಿಲ್ಲೆಯಲ್ಲಿ ಇರುವ ಏಕೈಕ ಬುಡುಕಟ್ಟು ಸಮುದಾಯದ ಸಮಗ್ರ ಚಿತ್ರಣ ನೀಡುವ ಚಿತ್ತಾಕರ್ಷಕ ರಾಕ್‌ ಗಾರ್ಡನ್‌ ಕಳೆಗುಂದುತ್ತಿರುವುದು ಬೇಸರದ ಸಂಗತಿಯಾಗಿದೆ. ಜಿಲ್ಲಾಡಳಿತ ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ನಡೆಸುತ್ತಿದ್ದು, ಕಾಪಾಡಿಕೊಳ್ಳುವ ಆಸಕ್ತಿ ತೋರಬೇಕಿದೆ.

ಜಿಲ್ಲೆಯಲ್ಲಿ ಹಲವಾರು ರೀತಿಯ ಗಾರ್ಡನ್‌ಗಳು ಇರಬಹುದು. ಆದರೆ ಉತ್ತರ ಕನ್ನಡದ ಬುಡಕಟ್ಟು ಜನಾಂಗದ ಬದುಕನ್ನು ಕಣ್ಣಿಗೆ ಕಟ್ಟಿಕೊಡುವ ರೀತಿಯಲ್ಲಿ ಕಲಾವಿದರು ನಿರ್ಮಾಣ ಮಾಡಿದ ಏಕೈಕ ಗಾರ್ಡನ್‌ ಇದಾಗಿದ್ದು, ಇದನ್ನು ಉಳಿಸಿಕೊಳ್ಳುವ ಅವಶ್ಯಕತೆಯಿದೆ. ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ನಿರ್ಮಾಣವಾದ ರಾಕ್‌ ಗಾರ್ಡನ್‌ ಹಾಳು ಬಿಡುವುದು ಸರಿಯಲ್ಲ. ಮುತುವರ್ಜಿ ವಹಿಸಬೇಕು ಎಂದು ಸ್ಥಳೀಯರು ಅಕ್ಷಯ ನಾಯ್ಕ ತಿಳಿಸಿದ್ದಾರೆ.