ಚಾಮರಾಜನಗರ(ಜ.24): ನಮ್ಮನ್ನು ಆಳುವುದು ಈ ದೇಶದ ಕಾನೂನೇ ಹೊರತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅಲ್ಲ. ಧರ್ಮದ ಮೇಲೆ ದೇಶ ಕಟ್ಟಲು ಹೋಗುತ್ತಿರುವ ಮೋದಿ ನಿಜವಾದ ದೇಶದ್ರೋಹಿ. ಮುಸ್ಲಿಮರನ್ನು ಟಾರ್ಗೆಟ್‌ ಮಾಡಿರುವ ಮೋದಿ ಮುಸ್ಲಿಂ ಸಮುದಾಯಕ್ಕೆ ನೇರವಾಗಿ ಚೂರಿ ಚುಚ್ಚುತ್ತಿದ್ದಾರೆ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದ್ದಾರೆ.

ಪೌರತ್ವ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ಎನ್‌ಆರ್‌ಸಿ, ಸಿಎಎ, ಮತ್ತು ಎನ್‌ಪಿಆರ್‌ನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿ ಹನೂರು ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದರ ಮಹದೇಶ್ವರ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಎನ್‌ಆರ್‌ಸಿ ಇನ್ನೆರಡು ವರ್ಷಗಳಲ್ಲಿ ನಾಶ:

ದಲಿತರು, ಹಿಂದುಳಿದ ವರ್ಗಗಳ ಜನತೆಗೆ ಬೆನ್ನ ಹಿಂದೆ ಚೂರಿ ಹಾಕಲು ಹೊರಟಿದ್ದಾರೆ. ಈ ದೇಶದಲ್ಲಿ ಜನತೆಯ ರಕ್ತಹೀರುತ್ತಿರುವ ತಿಗಣೆಗಳು ಇದ್ದರೆ. ಅದು ಮೋದಿ ಮತ್ತು ಅಮಿತ್‌ ಶಾ. ಅಷ್ಟಲ್ಲದೇ ಮೋದಿ ಸರ್ಕಾರ ರೈತರ ರಕ್ತವನ್ನು ಹೀರುವಂತ ಸರ್ಕಾರವಾಗಿದೆ. ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳಿರುವಂತೆ ಸಂವಿಧಾನ ಉಳಿಯದೇ ಹೋದರೆ ಈ ದೇಶ ಮತ್ತೊಮ್ಮೆ ಗುಲಾಮ ರಾಷ್ಟ್ರವಾಗುತ್ತದೆ. ಹಿಂದೂ ರಾಷ್ಟ್ರ ಮಾಡಿದರೆ ದೇಶ ಚಿಂದಿಯಾಗುತ್ತದೆ. ಪೆನ್ನುಗಳ ಭಾರತ ಬೇಕೆ ಹೊರತು ಗನ್ನುಗಳ ಭಾರತ ಬೇಕಿಲ್ಲ. ಪ್ರಧಾನಿ ಮೋದಿ ಅವರು ಟಿಪ್ಪು ಸುಲ್ತಾನ್‌, ನಾಲ್ವಡಿ ಕೃಷ್ಣರಾಜರ ಆದರ್ಶ ಆಡಳಿತವನ್ನು ನಡೆಸಬೇಕು. ಎನ್‌ಆರ್‌ಸಿ , ಸಿಎಎ, ಇನ್ನು ಎರಡು ವರ್ಷಗಳಲ್ಲಿ ನಾಶವಾಗಲಿದೆ ಎಂದು ಹರಿಹಾಯ್ದರು.

ಎರಡನೇ ಸ್ವತಂತ್ರ್ಯ ಚಳವಳಿ:

ಕಾರ್ಯಕ್ರಮದಲ್ಲಿ ಭಾಷಣಗಾರ್ತಿ ಡಾ. ನಜ್ಮಾ ಮಾತನಾಡಿ, ಮಂಟೇಸ್ವಾಮಿ, ಮಲೆ ಮಹದೇಶ್ವರ ಜಾತಿ, ಧರ್ಮದ ಬಗ್ಗೆ ಎಂದು ತಾರತಮ್ಯ ನೀತಿಯನ್ನು ಬಿತ್ತಲಿಲ್ಲ. ಇಂತಹ ಪರಂಪರೆಯನ್ನು ಅವರು ಹುಟ್ಟು ಹಾಕಿ ಹೋಗಿದ್ದಾರೆ. ಇಂತಹ ನೆಲದಲ್ಲಿ ಎನ್‌ಆರ್‌ಸಿಯಂತ ಕಾಯ್ದೆ ಹೇಗೆ ಅನ್ವಯಗೊಳಲಿದೆ ಎಂದರು.

ಭಾರತ ಸ್ವತಂತ್ರ್ಯ ಚಳವಳಿ ನಂತರ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಚಳುವಳಿ ನಡೆಯುತ್ತಿದೆ. ಮುಸ್ಲಿಂ ಜನತೆಗೆ ಅಂಬೇಡ್ಕರ್‌ ಹಾಗೂ ಸಂವಿಧಾನ ಇಲ್ಲಿಯವರೆಗೆ ಗೊತ್ತಿರಲಿಲ್ಲ. ದಲಿತರನ್ನು ಅಪ್ಪಿಕೊಳ್ಳಲಿಲ್ಲ. ಅವರನ್ನು ಅರಿಯದ ಹಿನ್ನೆಲೆಯಲ್ಲಿ ನೀವು ಇಂದು ಬೀದಿಗೆ ಬಂದು ಬಿದ್ದಿದ್ದೀರಿ. ಪಂಚರ್‌ ಹಾಕುವವರ ಎದೆ ಸೀಳಿದರೆ ಒಂದು ಅಕ್ಷರ ಬರೊಲ್ಲ ಎಂದು ಹೇಳಿದ ತೇಜಸ್‌ ಇಲ್ಲದ ತೇಜಸ್ವಿ ಸೂರ್ಯ ಸಂಸದ ಹೇಳಿಕೆ ಎಷ್ಟರ ಮಟ್ಟಿಗೆ ಸರಿ. ಪೌರತ್ವ ಕಾಯ್ದೆಯಡಿ ದಲಿತರು, ಹಿಂದುಳಿದವರು ಮುಸ್ಲಿಂರನ್ನು ಒಟ್ಟುಗೂಡಿಸಿರುವುದಕ್ಕೆ ಮೋದಿ ಮತ್ತು ಅಮಿತ್‌ ಶಾಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.

ಟಿಪ್ಪು ಖಡ್ಗ ಮಾತನಾಡಬೇಕಾಗುತ್ತದೆ:

ಜೆಡಿಎಸ್‌ ಮುಖಂಡ ಮುಳ್ಳೂರು ಶಿವಮಲ್ಲು ಮಾತನಾಡಿ, ಧರ್ಮದ ಆಧಾರದ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಗೆ ನಮ್ಮ ವಿರೋಧವಿದೆ. ಭಾರತ ದೇಶ ಸರ್ವಧರ್ಮಗಳ ನೆಲವೀಡು ಶಾಂತಿಯ ಬೀಡು ಜಾತ್ಯತೀತ ರಾಷ್ಟ್ರ ಇಂತಹ ರಾಷ್ಟ್ರವನ್ನು ಹೊಡೆಯುವ ಕೆಲಸವನ್ನು ಮೋದಿ ಅಮಿತ್‌ ಶಾ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ತೊಂದರೆ ಉಂಟಾದರೆ ನಿಮ್ಮ ಅಧಿಕಾರದಲ್ಲಿರಲು ಬಿಡಲ್ಲ. ಮಾಧ್ಯಮಗಳು ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿವೆ. ಮೂಲ ನಿವಾಸಿಗಳ ಗುರುತನ್ನು ಕೇಳುತ್ತಿರುವ ಪರದೇಶಿಗಳಿಗೆ ಯಾವ ಹಕ್ಕು ಇದೆ. ಭಾರತೀಯ ಸಂವಿಧಾನದಲ್ಲಿ ಮುಸ್ಲಿಂ, ಕ್ರೈಸ್ತ, ಎಲ್ಲ ಜನತೆ ಕಾರ್ಯನಿರ್ವಹಿಸುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಟಿಪ್ಪು ಸುಲ್ತಾನ ಖಡ್ಗ ಹಾಗೂ ರಾಕೆಟ್‌ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

'ಭಾಗ್ಯದ ಬಳೆಗಾರ' ಹಾಡಿಗೆ ಚಿಣ್ಣರ ಜೊತೆ ರೋರಿಂಗ್ ಸ್ಟಾರ್ ಸ್ಟೆಪ್..!

ಹನೂರು ಪಟ್ಟಣದ ಆರ್‌ಎಂಸಿ ಆವರಣದಿಂದ ಹೊರಟ ಪ್ರತಿಭಟನಾಕಾರರು ಪೊಲೀಸ್‌ ಠಾಣೆ ಬಳಿ ಇರುವ ಡಾ.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಘೋಷಣೆಗಳನ್ನು ಕೂಗುತ್ತಾ ಮಹದೇಶ್ವರ ಕ್ರೀಡಾಂಗಣದಲ್ಲಿ ಜಮಾಯಿಸಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್‌ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಚಾಮರಾಜನಗರ ಎಸ್‌ಡಿಪಿಐ ಸಂಘಟನೆಯ ಅಧ್ಯಕ್ಷ ಅಬ್ರಾರ್‌ ಅಹ್ಮದ್‌, ತಾ.ಪಂ. ಸದಸ್ಯ ಜವಾದ್‌ ಅಹಮ್ಮದ್‌, ಅಂಬೇಡ್ಕರ್‌ ಸಂಘದ ಅಧ್ಯಕ್ಷ ಲಿಂಗರಾಜು ವಿವಿಧ ಗ್ರಾಮಗಳ ಮುಖಂಡರು, ಯುವಕರು, ರೈತರು, ಇದ್ದರು.