ಶ್ರೀಶೈಲ ಮಠದ 

ಬೆಳಗಾವಿ(ಫೆ.16): ಪ್ರತಿವರ್ಷ ಬೇಸಿಗೆ ಕಾಲ ಬಂತೆಂದರೆ ಉತ್ತರ ಕರ್ನಾಟಕ ಭಾಗದ ಜೀವನದಿ ಕೃಷ್ಣಾ ತೀರದಲ್ಲಿ ಹನಿ ನೀರಿಗೂ ಪರದಾಡುವುದು ತಪ್ಪಿಲ್ಲ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸುವ ವಿಚಾರ ಇನ್ನು ತಾರ್ಕಿಕ ಅಂತ್ಯಕಂಡಿಲ್ಲ. ಸಮಸ್ಯೆ ಬಗೆಹರಿದಿಲ್ಲ. 

ಕೃಷ್ಣಾ ನದಿಯು ಹರಿದು ಹೋಗಿರುವ ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ಸೇರಿದಂತೆ ವಿವಿಧ ಭಾಗಗಗಳಲ್ಲಿ ಹಾಗೂ ಬಾಗಲಕೋಟೆಯ ತೇರದಾಳ, ಜಮಖಂಡಿ, ಮುಧೋಳ ಸೇರಿದಂತೆ ಇತರೆ ಗ್ರಾಮಗಳಲ್ಲಿ ಪ್ರತಿ ಬೇಸಿಗೆ ಕಾಲದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. 

ಬೇಸಿಗೆಯಲ್ಲಿ ಕೃಷ್ಣಾ ನದಿ ಬತ್ತಿ ಬರಿದಾದರೆ ನದಿ ತೀರದ ಗೋಳು ಹೇಳತೀರದು. ಇಂತಹ ಸಂದರ್ಭದಲ್ಲಿ ಮಹಾರಾ ಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತದೆ. ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆಗೆ ಈ ಭಾಗದ ರಾಜಕೀಯ ಪ್ರತಿನಿಧಿಗಳ ನಿಯೋಗ ಮಹಾರಾಷ್ಟ್ರಕ್ಕೆ ಮನವಿ ಸಲ್ಲಿಸಬೇಕು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಚಿವರು, ನೀರಾವರಿ ಇಲಾಖೆ ಅಧಿಕಾರಿಗಳು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಿದಾಗ ಮಾತ್ರ ನೀರು ಬಿಡಲಾಗುತ್ತದೆ. ಇಲ್ಲದಿದ್ದರೆ ಇಲ್ಲ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದ ವೇಳೆ ಅಂದಿನ ಸಿಎಂ ದೇವೇಂದ್ರ ಫಡ್ನವೀಸ್ ಕರ್ನಾಟಕ್ಕೆ ನೀರು ಬಿಡುವ ಸಂಬಂಧ ಷರತ್ತು ವಿಧಿಸಿದ್ದರು. 

ಪ್ರತಿವರ್ಷ ನಾಲ್ಕು ಟಿಎಂಸಿ ನೀರನ್ನು ಕೊಯ್ನಾ ಜಲಾಶಯದಿಂದ ಬಿಡಲಾಗುತ್ತದೆ. ಅದರಂತೆ ಅದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ರಾಜ್ಯದ ಜತ್ತ, ಸೊಲ್ಲಾಪುರ ಮತ್ತಿತರ ಪ್ರದೇಶಗಳಿಗೆ ಆಲಮಟ್ಟಿ ಜಲಾಶಯದಿಂದ ನೀರು ಬಿಡಬೇಕು.ಈ ಕುರಿತು ಉಭಯ ರಾಜ್ಯಗಳ ನಡುವೆ ಒಡಂಬಡಿಕೆಗೆ ಮುಂದಾಗಿದ್ದರು. ನೀರಿಗೆ ಬದಲು ನೀರೇ ಬಿಡುವಂತೆ ಷರತ್ತು ವಿಧಿಸಲಾಗಿತ್ತು. 

2017 ರಲ್ಲಿಯೇ ಮಹಾರಾಷ್ಟ್ರ ಸರ್ಕಾರ ಈ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರದ ಮುಂದಿಟ್ಟಿತ್ತು. ಆದರೆ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಈ ಸಂಬಂಧ ಯಾವುದೇ ಒಡಂಬಡಿಕೆಯಾಗಲಿಲ್ಲ. ಇದಕ್ಕೆ ತಾಂತ್ರಿಕ ತೊಂದರೆಯೇ ಪ್ರಮುಖ ಕಾರಣ. 

ನೀರಿಗೆ ನೀರು ಒಪ್ಪಂದ: 

ಕೃಷ್ಣಾ ನದಿತೀರದ ಪ್ರದೇಶಗಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ಹಿಂದಿನ ವರ್ಷಗಳಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಹಣ ಕೊಟ್ಟು ಕೊಯ್ನಾದಿಂದ ನೀರು ಪಡೆಯಲಾಗುತ್ತಿತ್ತು. 2004ರಲ್ಲಿ 2.12 ಕೋಟಿ, 2019ರಲ್ಲಿ 6.63 ಕೋಟಿ, 2014ರಲ್ಲಿ 2.84 ಕೋಟಿ ನೀಡಲಾಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಹಣ ಬೇಡವೆಂದು ಹೇಳಿ, ನೀರಿನ ಬದಲಾಗಿ ನೀರು ಹರಿಸುವಂತೆ ಷರತ್ತು ವಿಧಿಸಿತ್ತು. 

ನೀರು ವಿನಿಮಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಒಡಂಬಡಿಕೆ ಮಾಡಿಕೊಳ್ಳುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಪ್ರತಿವರ್ಷ ಹಿಂಗಾರು ಮತು ಮುಂಗಾರು ಹಂಗಾಮಿನಲ್ಲಿ ತಲಾ ಎರಡು ಟಿಎಂಸಿ ನೀರು ತಮಗೆ ಆಲಮಟ್ಟಿಯಿಂದ ಒದಗಿಸಿದರೆ ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ಹರಿಸುವುದಾಗಿ ಮಹಾರಾಷ್ಟ್ರ ಹೇಳಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. 

ವಿಧಾನಸಭೆ ಚುನಾವಣೆ ಬಳಿಕ ಈ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ. ಕರ್ನಾಟಕ - ಮಹಾರಾಷ್ಟ್ರ ನಡುವೆ ನೀರು ಹಂಚಿಕೆ ಒಡಂಬಡಿಕೆ ಮಾಡಿಕೊಳ್ಳುವಂತೆ ಹಲವಾರು ಬಾರಿ ಸದನದಲ್ಲಿ ಚರ್ಚೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕ್ರಮ ಕೈಗೊಳ್ಳುವ ಮೂಲಕ ಕೃಷ್ಣಾ ನದಿ ತೀರದ ಜನತೆ ಎದುರಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವರೋ ಎಂಬುದನ್ನು ಕಾಯ್ದುನೋಡಬೇಕು.