Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ತಲೆ ಎತ್ತಲಿದೆ ಉತ್ತರ ಕರ್ನಾಟಕದ ಪ್ರಥಮ ರಂಗ ತರಬೇತಿ ಕೇಂದ್ರ

ರಂಗಕರ್ಮಿ ಯಶವಂತ ಸರದೇಶಪಾಂಡೆ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೇಂದ್ರ| ಕಳೆದ ಒಂದೂವರೆ ವರ್ಷದಿಂದ ಈ ತರಬೇತಿ ಕೇಂದ್ರದ ಕೆಲಸ ನಡೆದಿದೆ| ಎಲ್ಲವೂ ಅಂದುಕೊಂಡಂತೆ ಆದರೆ 2020ರಲ್ಲಿ ಮೊದಲ ಹಂತದಲ್ಲಿ ರಂಗಮಂದಿರವನ್ನು ಲೋಕಾರ್ಪಣೆ|ಉತ್ತರ ಕರ್ನಾಟಕದಲ್ಲಿ ರಂಗ ತರಬೇತಿ ಇಲ್ಲ ಎಂಬ ಕೊರಗನ್ನು ಈ ರಂಗ ತರಬೇತಿ ಶಾಲೆ ನಿವಾರಣೆ ಮಾಡಲಿದೆ| ಬಿಪಿಎಲ್‌ ಕಾರ್ಡ್‌ ಹೊಂದಿರುವ ಕಲಾಸಕ್ತರಿಗೆ ಉಚಿತ ತರಬೇತಿ|

North Karnataka First Theater Training Center Will Be Start in Hubballi
Author
Bengaluru, First Published Dec 4, 2019, 11:53 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ[ಡಿ.04]: ಉತ್ತರ ಕರ್ನಾಟಕದ ಪ್ರಪ್ರಥಮ ರಂಗ ತರಬೇತಿ ಕೇಂದ್ರ ಹುಬ್ಬಳ್ಳಿಯಲ್ಲಿ ತಲೆ ಎತ್ತಲಿದೆ. ನಾಟಕ, ಚಿತ್ರಕಲೆ, ಸಂಗೀತ, ಶಿಲ್ಪಕಲೆ, ನೃತ್ಯ ಕರಕುಶಲ ಕಲಾ ತರಬೇತಿ, ಪ್ರದರ್ಶನ ಇಲ್ಲಿ ಲಭಿಸಲಿದೆ. ಇದಕ್ಕಾಗಿ ಕಳೆದ ಕೆಲದಿನಗಳಿಂದ ಭರದಿಂದ ಕೆಲಸ ನಡೆದಿದೆ.

ಆಲ್‌ ದಿ ಬೆಸ್ಟ್‌, ರಾಶಿ ಚಕ್ರ, ಸಹಿ ರೀ ಸಹಿ, ಓ ಲವ್ವೇ ಜೀವನ ಸಾಕ್ಷಾತ್ಕಾರ, ಹಿಂಗಾದ್ರ ಡಾಟ್‌ ಕಾಮಿಡಿ ಹೀಗೆ ಹತ್ತಾರು ನಾಟಕಗಳನ್ನು ಪ್ರದರ್ಶಿಸಿ ಜನಮನ ಗೆದ್ದಿರುವ ಗುರು ಇನ್‌ಸ್ಟಿಟ್ಯೂಟ್‌ನ ಯಶವಂತ ಸರದೇಶಪಾಂಡೆ ಈ ರಂಗ ತರಬೇತಿ ಕೇಂದ್ರ ತೆರೆಯಲಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಈ ತರಬೇತಿ ಕೇಂದ್ರದ ಕೆಲಸ ನಡೆದಿದೆ. ಈಗ ಒಂದು ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2020ರಲ್ಲಿ ಮೊದಲ ಹಂತದಲ್ಲಿ ರಂಗಮಂದಿರವನ್ನು ಲೋಕಾರ್ಪಣೆಗೊಳಿಸುವ ಯೋಜನೆ ಇವರದ್ದು.

ಏನೇನು ಇರಲಿವೆ:

ನಗರದ ಗೋಕುಲ ರಸ್ತೆಯಲ್ಲಿನ ಲೋಹಿಯಾ ನಗರದ ರಾಯನಾಳ ಕೆರೆಗೆ ಹೊಂದಿಕೊಂಡಿರುವ 36000 ಚದುರಡಿ ವಿಶಾಲವಾದ ಜಾಗೆಯಲ್ಲಿ ಈ ತರಬೇತಿ ಕೇಂದ್ರ ತಲೆ ಎತ್ತಲಿದೆ. ಆರು ವಿಭಾಗಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಾಂಸ್ಕೃತಿಕ ಸಂಕುಲದ ಪ್ರಥಮ ಕಟ್ಟಡ ಆದಿ ರಂಗ. 450 ಆಸನಗಳನ್ನು ಹೊಂದಿರುವ ಇದು ಸುಸಜ್ಜಿತ ರಂಗ ಮಂದಿರವಾಗಲಿದೆ. ಬೇಸಿಕ್‌ ಲೈಟ್ಸ್‌ ಮತ್ತು ಸೌಂಡ್‌ ವ್ಯವಸ್ಥೆಗಳ ಜತೆಗೆ ಗ್ರೀನ್‌ ರೂಮ್‌ ಸೌಲಭ್ಯವಿದೆ. ವಾರಾಂತ್ಯದಲ್ಲಿ ಇಲ್ಲಿ ವಿವಿಧ ನಾಟಕಗಳ ಪ್ರದರ್ಶನ ನಡೆಯಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾಟಕಾಸಕ್ತ ಉತ್ತರ ಕರ್ನಾಟಕದ ಯುವಕರಿಗೆ ರಂಗ ತರಬೇತಿ ನೀಡಲಾಗುತ್ತದೆ. ಇದೊಂದು ಕಲಾ ಶಾಲೆಯಂತೆ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಯೋಗ, ಧ್ಯಾನ, ಸಂಗೀತ, ನೃತ್ಯ, ಸಮರ ಕಲೆ, ಚಿತ್ರಕಲೆ, ಶಿಲ್ಪ ಕಲೆ ಕರಕುಶಲ ಕಲೆಯಲ್ಲಿ ಆಸಕ್ತಿ ಇರುವವರಿಗೆ ತರಬೇತಿ ನೀಡಲಾಗುತ್ತದೆ. ಎಲ್ಲ ವಯೋಮಿತಿಯ ರಂಗಾಸಕ್ತರಿಗೆ ವಿವಿಧ ಕೋರ್ಸ್‌ಗಳನ್ನು ನಡೆಸುವ ಉದ್ದೇಶ ಸರದೇಶಪಾಂಡೆ ಅವರದು. ಮೂರು ತಿಂಗಳಿನ ಚುಟುಕು ಕೋರ್ಸ್‌, ಆರು ತಿಂಗಳ ವಿಶೇಷ ತರಬೇತಿ, ಒಂದು ವರ್ಷದ ಕಲಾ ಡಿಪ್ಲೋಮಾ ತೆರೆಯುವ ಯೋಚನೆ ಇದೆಯಂತೆ. ಇದಕ್ಕೆ ವಿಶ್ವ ವಿದ್ಯಾಲಯಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆ ನಡೆದಿದೆ. ಇದರೊಂದಿಗೆ ಇಂಗ್ಲಿಷ್‌ ಮಾತನಾಡುವ ಕೌಶಲ್ಯವನ್ನು ಕಲಿಸಿಕೊಡುತ್ತಾರಂತೆ.

ಇನ್ನು ‘ಬೇಂದ್ರೆ ರಂಗ’ ಎಂಬ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಮೂಲಕ ಬೇಂದ್ರೆ ಅವರಿಗೆ ಗೌರವ ಸಲ್ಲಿಸುವ ಉದ್ದೇಶ ಇದರದ್ದು. ಇಲ್ಲಿ ನಾಟಕಗಳ ರಿಹರ್ಸಲ್‌ ಹಾಗೂ ಸಮೂಹ ನೃತ್ಯ ತಾಲೀಮುಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದರೊಂದಿಗೆ ನಾಟಕ ಪ್ರದರ್ಶಿಸಲು ಆಗಮಿಸುವ ತಂಡದ ಸದಸ್ಯರಿಗೆ ಉಳಿದುಕೊಳ್ಳಲು ವ್ಯವಸ್ಥೆ, ಉಪಾಹಾರ -ಊಟಕ್ಕೆಂದು ಕ್ಯಾಂಟೀನ್‌ ಕೂಡ ವ್ಯವಸ್ಥೆಯಾಗಲಿದೆ.

ದೋಸ್ತಿ ಕ್ಲಬ್‌:

ಇನ್ನೂ 5 ನೇ ತರಗತಿ, 9ನೇ ತರಗತಿಯ ಮಕ್ಕಳಿಗೆ ದೋಸ್ತಿ ಕ್ಲಬ್‌ ಮಾಡುವ ಉದ್ದೇಶ ಈ ಸಂಸ್ಥೆಯದ್ದು. ತಿಂಗಳಲ್ಲಿ ಒಂದು ಭಾನುವಾರ ದೋಸ್ತಿ ಕ್ಲಬ್‌ನ ಚಟುವಟಿಕೆ ನಡೆಸಲಾಗುವುದು. ಅಲ್ಲಿ ಮಕ್ಕಳಿಗೆ ತಮ್ಮಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಜೊತೆಗೆ ಹಿರಿಯ ಕಲಾವಿದರು, ರಂಗಕರ್ಮಿಗಳಿಂದ ಅವರೊಂದಿಗೆ ಸಂವಾದ, ಹರಟೆ ನಡೆಸಲಾಗುವುದು. ಇದರಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಹಾಕಲು ಅನುಕೂಲವಾಗಲಿದೆ.

ಬಡವರಿಗೆ ಉಚಿತ:

ಇಲ್ಲಿ ತರಬೇತಿ ಪಡೆಯಲಿಚ್ಛಿಸುವ ಕಲಾಸಕ್ತರಿಗೆ ರಿಯಾಯಿತಿ ಶುಲ್ಕ ನಿಗದಿ ಪಡಿಸಲಾಗುತ್ತದೆ. ಆದರೆ, ಬಿಪಿಎಲ್‌ ಕಾರ್ಡ್‌ ಹೊಂದಿರುವ ಕಲಾಸಕ್ತರಿಗೆ ಇಲ್ಲಿ ಯಾವುದೇ ತರಬೇತಿ ಪಡೆಯಲು ಶುಲ್ಕ ವಿಧಿಸುವುದಿಲ್ಲ. ಉಚಿತ ತರಬೇತಿ ನೀಡಲಾಗುವುದು. ಇದರೊಂದಿಗೆ ತರಬೇತಿಗೆ ಬೇಕಾಗುವ ಸಾಮಗ್ರಿಗಳನ್ನು ಸಂಸ್ಥೆಯಿಂದಲೇ ಉಚಿತವಾಗಿಯೇ ಪೂರೈಕೆ ಮಾಡುವ ಯೋಜನೆ ಗುರು ಇನ್ಸ್‌ಟಿಟ್ಯೂಟ್‌ನದ್ದು.

ಯಾವಾಗ ಲೋಕಾರ್ಪಣೆ:

ರಂಗ ಮಂದಿರದ ಕೆಲಸ ಆಗಲೇ ಶೇ. 90ರಷ್ಟು ಮುಕ್ತಾಯವಾಗಿದೆ. ಇನ್ನುಳಿದ ಕಟ್ಟಡಗಳ ಸಿವಿಲ್‌ ಕಾಮಗಾರಿ ನಡೆದಿದೆ. ಆದರೆ, 2020ರ ಜನವರಿಯಲ್ಲಿ ಮೊದಲಿಗೆ ರಂಗ ಮಂದಿರವನ್ನು ಲೋಕಾರ್ಪಣೆಗೊಳಿಸಿ ಚಟುವಟಿಕೆ ಪ್ರಾರಂಭಿಸಲಾಗುವುದು. ಉಳಿದ ಕಟ್ಟಡಗಳನ್ನು ನಂತರದ ದಿನದಲ್ಲಿ ಪೂರ್ಣಗೊಳಿಸಲಾಗುವುದು. ಎಲ್ಲ ಕಟ್ಟಡಗಳು ಸಂಪೂರ್ಣವಾಗಿ ಮುಗಿದು ಪೂರ್ಣವಾಗಿ ಕಾರ್ಯಾರಂಭವಾಗಬೇಕೆಂದರೆ ಇನ್ನು 2 ವರ್ಷವಾದರೂ ಬೇಕಾಗುತ್ತದೆ ಎಂದರು ಯಶವಂತ ಸರದೇಶಪಾಂಡೆ.

ಒಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ರಂಗ ತರಬೇತಿ ಇಲ್ಲ ಎಂಬ ಕೊರಗನ್ನು ಈ ರಂಗ ತರಬೇತಿ ಶಾಲೆ ನಿವಾರಣೆ ಮಾಡಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಈ ಬಗ್ಗೆ ಮಾಹಿತಿ ನೀಡಿದ  ರಂಗಕರ್ಮಿ ಯಶವಂತ ಸರದೇಶಪಾಂಡೆ, ರಂಗಭೂಮಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಕೌಶಲ್ಯಗಳನ್ನು ಮಕ್ಕಳಲ್ಲಿ ವೃದ್ಧಿಸಿ ಕಳುಹಿಸುವುದೇ ಇದರ ಮುಖ್ಯ ಉದ್ದೇಶ. ಇಲ್ಲಿ ಕಲೆಗೆ ಸಂಬಂಧಪಟ್ಟಂತೆ ತರಬೇತಿ, ಮನರಂಜನೆ, ಪ್ರದರ್ಶನ ಮಾಡುವ ಉದ್ದೇಶವಿದೆ. ವರ್ಷದಲ್ಲಿ ಕನಿಷ್ಠ 100 ಪ್ರದರ್ಶನ, ನೂರಾರು ಜನರಿಗೆ ತರಬೇತಿ ನೀಡಿ ಸಜ್ಜುಗೊಳಿಸಬೇಕೆಂಬ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios