ಹಾವೇರಿ: ಸೂರಿಗಾಗಿ ನಟ ಸೋನು ಸೂದ್‌ ಭೇಟಿಯಾದ ಸುಡುಗಾಡು ಸಿದ್ಧರು

* ಹಾವೇರಿಯ ಶಾಂತಿನಗರದ ಟೆಂಟ್‌ನಲ್ಲಿ ವಾಸವಾಗಿರುವ ಅಲೆಮಾರಿ ಸುಡುಗಾಡು ಸಿದ್ಧರು
* ಐದಾರು ಗಂಟೆ ಸುತ್ತಾಡಿ ಮುಂಬೈನಲ್ಲಿ ಸೋನು ಮನೆಗೆ ತೆರಳಿ ನಟನನ್ನು ಭೇಟಿಯಾದ ಯುವಕರು
* ತಮ್ಮ ಕೈಲಾದ ನೆರವು ನೀಡುವುದಾಗಿ ಭರವಸೆ ನೀಡಿದ ಸೋನು ಸೂದ್‌
 

Nomad Sudugadu Siddharu Met Bollywood Actor Sonu Sood grg

ಹಾವೇರಿ(ಜು.17): ಕೋವಿಡ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧಾವಿಸಿ ತಮ್ಮ ಸಹಾಯಹಸ್ತ ಚಾಚಿದ್ದ ಖ್ಯಾತ ನಟ ಸೋನು ಸೂದ್‌ ಅವರನ್ನು ಇಲ್ಲಿಯ ಸುಡುಗಾಡು ಸಿದ್ಧರ ಕುಟುಂಬದ ಯುವಕರು ಭೇಟಿಯಾಗಿ ತಮಗೆ ಶಾಶ್ವತ ಸೂರಿಗಾಗಿ ಮೊರೆಯಿಟ್ಟಿದ್ದು, ಅಲೆಮಾರಿಗಳ ಸಂಕಷ್ಟವನ್ನು ಆಲಿಸಿದ ಸೋನು ಸೂದ್‌ ತಮ್ಮ ಕೈಲಾದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಇಲ್ಲಿಯ ಹೊರವಲಯದ ಶಾಂತಿನಗರದ ಬಳಿ ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸಿಸುವ ಸುಡುಗಾಡು ಸಿದ್ಧರ ಯುವಕರು ನಟ ಸೋನು ಸೂದ್‌ ಅವರನ್ನು ಶುಕ್ರವಾರ ಮುಂಬೈನ ಅವರ ನಿವಾಸದಲ್ಲಿ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು.

ಗುರುವಾರ ರಾತ್ರಿ ಹಾವೇರಿಯಿಂದ ದಾದರ್‌ ಎಕ್ಸಪ್ರೆಸ್‌ ರೈಲಿನ ಮೂಲಕ ಯುವಕರಾದ ಶೆಟ್ಟಿ ವಿಭೂತಿ, ಗಂಗಾಧರ ಬಾದಗಿ, ಹುಸೇನಪ್ಪ ಬಾದಗಿ, ರವಿ ಬಾದಗಿ, ಆನಂದ ಕೋಮಾರಿ, ರಮೇಶ ಉಕ್ಕುಂದ ಶುಕ್ರವಾರ ಬೆಳಗ್ಗೆ ಮುಂಬೈ ತಲುಪಿದ್ದಾರೆ. ಮುಂಬೈ ಮಹಾನಗರದಲ್ಲಿ ಸೋನು ಸೂದ್‌ ಮನೆ ಹುಡುಕಲು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12ರ ವರೆಗೂ ಅಲೆದಾಡಿದ್ದಾರೆ. ಅವರಿವರನ್ನು ಕೇಳುತ್ತ ಅಂತೂ ಸೂದ್‌ ಅವರ ಮನೆ ಹುಡುಕವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟುದೂರದಿಂದ ತಮ್ಮ ಭೇಟಿಗೆ ಬಂದ ವಿಷಯ ತಿಳಿದ ನಟ ಸೋನು ಸೂದ್‌ 12.30ಕ್ಕೆ ಈ ಯುವಕರಿಗೆ ಭೇಟಿ ನೀಡಿದ್ದಾರೆ.

ಸೈಕಲ್ ಏರಿ ಮೊಟ್ಟೆ, ತರಕಾರಿ ಮಾರುತ್ತಿರುವ ನಟ ಸೋನು ಸೂದ್!

ಅಲೆಮಾರಿಗಳಾದ ನಾವು ತಾತ್ಕಾಲಿಕ ಶೆಡ್‌ನಲ್ಲಿ ವಾಸಿಸುತ್ತಿದ್ದೇವೆ. ಸ್ಥಳೀಯ ಆಡಳಿತದಿಂದ ನಮಗೆ ಸೂರು ಸಿಗುತ್ತಿಲ್ಲ. ತಾವು ನಮ್ಮ ನೆರವಿಗೆ ಬರಬೇಕು ಎಂದು ಯುವಕರು ಮೊರೆ ಇಟ್ಟರು. ಯುವಕರ ಸಮಸ್ಯೆಯನ್ನು ಶಾಂತಚಿತ್ತರಾಗಿ ಆಲಿಸಿದ ಸೋನು ಸೂದ್‌, ಸದ್ಯ ದೇಶಾದ್ಯಂತ ಜನರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಶಾಶ್ವತ ಸೂರು ಕಲ್ಪಿಸುವುದು ಕಷ್ಟ. ಆದರೆ, ನಿಮ್ಮ ಸಮುದಾಯಕ್ಕೆ ಅಗತ್ಯವಿರುವ ರೇಶನ್‌, ಔಷಧಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿದ್ದರೆ ಅದಕ್ಕೆ ನೆರವು, ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.

ಇಷ್ಟೊಂದು ದೊಟ್ಟ ನಟರಾದರೂ ಅರ್ಧ ತಾಸು ನಮ್ಮೊಂದಿಗಿದ್ದು ಸಮಸ್ಯೆ ಅಲಿಸಿದರು. ಕೈಲಾದ ಸಹಾಯ ನೀಡುವುದಾಗಿ ಭರವಸೆ ನೀಡಿದರು. ಇದು ನಮಗೆ ಖುಷಿ ನೀಡಿತು ಎಂದು ಈ ಯುವಕರು ತಿಳಿಸಿದ್ದಾರೆ.

ಟೆಂಟ್‌ನಲ್ಲಿ ವಾಸ:

ಅಲೆಮಾರಿ ಸುಡುಗಾಡು ಸಿದ್ಧರ 40 ಕುಟುಂಬಗಳು ಇಲ್ಲಿಯ ಶಾಂತಿನಗರದಲ್ಲಿನ ನಗರಸಭೆಯ ನಿವೇಶನದಲ್ಲಿ ಟೆಂಟ್‌ ಹಾಕಿಕೊಂಡು ಹಲವಾರು ವರ್ಷಗಳಿಂದ ನೆಲೆಸಿವೆ. ಮಳೆ, ಬಿರುಗಾಳಿಗೆ ಪ್ರತಿ ವರ್ಷ ಇವರ ಬದುಕು ಅತಂತ್ರಗೊಳ್ಳುತ್ತಿದೆ.

ಬೆಂಗಳೂರಿಗೆ 1,500 ಫುಟ್‌ ಕಿಟ್‌ ಕಳುಹಿಸಿಕೊಟ್ಟ ಸೋನು ಸೂದ್!

2019ರಲ್ಲಿ ಅತಿವೃಷ್ಟಿಯಾದಾಗ ಇವರ ಟೆಂಟ್‌ಗಳು ನೀರುಪಾಲಾಗಿದ್ದವು. ಬೀದಿಪಾಲಾಗಿದ್ದ ಈ ಕುಟುಂಬಗಳಿಗೆ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಜಿಲ್ಲಾಡಳಿತ ಈ ಕುಟುಂಬಗಳಿಗೆ ಶಾಂತಿನಗರದ ಬಳಿ ನಗರಸಭೆಯ ನಿವೇಶನದಲ್ಲಿ ತಗಡಿನ ಶೆಡ್‌ ನಿರ್ಮಿಸಿ ಕೊಟ್ಟಿತ್ತು. ಕಳೆದ ಏಪ್ರಿಲ್‌ನಲ್ಲಿ ಬೀಸಿದ ಗಾಳಿಗೆ ಆ ಶೆಡ್‌ ಕೂಡ ಹಾರಿಹೋಗಿ ಮತ್ತೆ ಅಲೆಮಾರಿ ಕುಟುಂಬಗಳು ಅತಂತ್ರವಾಗಿದ್ದವು. ಅನೇಕ ವರ್ಷಗಳಿಂದ ಶಾಶ್ವತ ಸೂರು ಕಲ್ಪಿಸುವಂತೆ ನಗರಸಭೆ, ಜಿಲ್ಲಾಡಳಿತಕ್ಕೆ ಮೊರೆ ಇಟ್ಟರೂ ಸ್ಪಂದಿಸದಿದ್ದರಿಂದ ನಟ ಸೋನು ಸೂದ್‌ ಅವರನ್ನು ಭೇಟಿಯಾಗಿ ತಮ್ಮ ಮೊರೆ ಇಡಲು ನಿರ್ಧರಿಸಿದ್ದರು. ಅದರಂತೆ ಶುಕ್ರವಾರ ನಟನನ್ನು ಭೇಟಿಯಾಗಿದ್ದಾರೆ.

ಅಲೆಮಾರಿ ಸಮುದಾಯವಾದರೂ ನಾವು ಅನೇಕ ವರ್ಷಗಳಿಂದ ಒಂದೇ ಕಡೆ ನೆಲೆಸಿದ್ದೇವೆ. ನಮಗೆ ಸೂರು ಕಲ್ಪಿಸುವಂತೆ ಸ್ಥಳೀಯ ಆಡಳಿತಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸದಿದ್ದರಿಂದ ನಟ ಸೋನು ಸೂದ್‌ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡೆವು ಎಂದು ಅಲೆಮಾರಿ ಯುವಕ ಶೆಟ್ಟಿ ವಿಭೂತಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios