ಶಿರಸಿ ತಾಲೂಕಿನ 84 ಹಳ್ಳಿಗೆ ದೂರವಾಣಿ ಸಂಪರ್ಕವೇ ಇಲ್ಲ..!

* ಅವಘಡ ಸಂಭವಿಸಿದರೆ ಇತರರನ್ನು ಸಂಪರ್ಕಿಸಲು ಹರಸಾಹಸ
* ಸಂಪರ್ಕ ರಹಿತ ಗ್ರಾಮಗಳ ಪಟ್ಟಿ ಸಿದ್ಧಪಡಿಸಿದ ತಾಲೂಕಾಡಳಿತ
* ಗುಡ್ಡಗಾಡು ಪ್ರದೇಶವಾಗಿದ್ದರಿಂದ ಮೊಬೈಲ್‌ ಸಿಗ್ನಲ್‌ ತಲುಪದ ಸ್ಥಿತಿ 
 

No Telephone Connection at Sirsi Taluk in Uttara Kannada grg

ಮಂಜುನಾಥ ಸಾಯೀಮನೆ

ಶಿರಸಿ(ಜು.02):  ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ 84 ಹಳ್ಳಿಗಳು ದೂರವಾಣಿ ಸಂಪರ್ಕ ರಹಿತವಾಗಿದೆ. ಈ ಗ್ರಾಮಗಳಲ್ಲಿ ಅವಘಡ ನಡೆದರೆ ಸ್ಥಳೀಯರು ಗ್ರಾಮದ ಹೊರಬಂದು ಇತರರನ್ನು ಸಂಪರ್ಕಿಸಬೇಕಾದ ಸ್ಥಿತಿ ಇದೆ!

ಹೌದು, ತಾಲೂಕು ಆಡಳಿತ ಸಂಪರ್ಕ ರಹಿತ ಗ್ರಾಮಗಳ ಪಟ್ಟಿ ಈಗ ಸಿದ್ಧಪಡಿಸಿದೆ. ಈ ಗ್ರಾಮಗಳಲ್ಲಿ ಅವಘಡ ಸಂಭವಿಸಿದರೆ ಸಂಪರ್ಕ ಹೇಗೆ ಮಾಡುವುದು ಎಂಬ ಬಗ್ಗೆ ತಾಲೂಕು ಆಡಳಿತವೇ ಒಂದಿಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ತಾಲೂಕಿನಲ್ಲಿ ಗುಡ್ಡಗಾಡು ಪ್ರದೇಶ ಹೆಚ್ಚಿದೆ. ಬೆಟ್ಟ-ಗುಡ್ಡಗಳನ್ನು ಸುತ್ತಿ ಮಣ್ಣಿನ ರಸ್ತೆಗಳು ಗ್ರಾಮೀಣ ಜನತೆಗೆ ಸಂಪರ್ಕ ಕಲ್ಪಿಸುತ್ತವೆ. ಮಳೆ ಹೆಚ್ಚಾದರೆ ಈ ರಸ್ತೆಗಳು ಕೆಸರಿನ ಗದ್ದೆಗಳಾಗಿ ವಾಹನಗಳು ಹಳ್ಳಿ ಪ್ರವೇಶಿಸದಂತೆ ತಡೆಯುತ್ತವೆ. ಒಂದೊಮ್ಮೆ ಕಸರತ್ತು ನಡೆಸಿ ವಾಹನ ಈ ರಸ್ತೆಯಲ್ಲಿ ತಂದರೆ ಮತ್ತೆ ತಿರುಗಿ ಹೋಗುವುದೂ ಕಷ್ಟ.

ಮಲೆನಾಡಿನ ಹಳ್ಳಿಗಳೆಂದರೆ ಅಡಕೆ ತೋಟದ ಪಕ್ಕದಲ್ಲಿ 3-4 ಮನೆಗಳನ್ನು ಒಳಗೊಂಡಿವೆ. ಇಂತಹ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ವ್ಯವಸ್ಥೆಯೂ ಅಸಮರ್ಪಕವಾಗಿದೆ. ವಿದ್ಯುತ್‌ ತಂತಿಗಳ ಮೇಲೆ ಮರದ ಕೊಂಬೆಗಳು ಮುರಿದು ಬೀಳುವುದು, ವಿದ್ಯುತ್‌ ವಿತರಕಗಳಲ್ಲಿ ಫ್ಯೂಸ್‌ ಸುಟ್ಟು ಹೋಗುವುದು ಇಲ್ಲಿಯ ಮಳೆಗಾಲದ ದಿನದ ವಿದ್ಯಮಾನಗಳಲ್ಲೊಂದು. ಇದರಿಂದಾಗಿ ವಿದ್ಯುತ್‌ ಯಾವಾಗ ಇರುತ್ತದೆ, ಎಷ್ಟು ಹೊತ್ತಿಗೆ ಬರುತ್ತದೆ ಎಂದು ಹೇಳಲು ಅಸಾಧ್ಯವಾದ ಸ್ಥಿತಿ ಇದೆ.

ಉತ್ತರ ಕನ್ನಡ: ಸಂಪರ್ಕಕ್ಕೆ ಸಿಗದ SSLC ವಿದ್ಯಾರ್ಥಿಗಳು, ಶಿಕ್ಷಕರಿಗೆ ಪತ್ತೇದಾರಿ ಕೆಲಸ!

ಏಕೆ ಈ ಪಟ್ಟಿ?:

ಕೋವಿಡ್‌ ಎರಡನೇ ಅಲೆ ವೇಳೆ ತಾಲೂಕಿನ ಹಳ್ಳಿ-ಹಳ್ಳಿಗಳಲ್ಲಿ ಪಾಸಿಟಿವ್‌ ಪ್ರಕರಣಗಳು ಅಧಿಕವಾಗಿ ದಾಖಲಾಗಿದ್ದವು. ಎಲ್ಲೆಡೆ ಜ್ವರಪೀಡಿತರೆ ಕಂಡುಬಂದಿದ್ದರು. ಹಳ್ಳಿಗಳ ಸ್ಥಿತಿಯ ಅಧ್ಯಯನ ನಡೆಸಿ, ಅವರ ಆರೋಗ್ಯ ಸುಧಾರಣೆಗೆ ತಾಲೂಕಾಡಳಿತ ಯೋಜನೆಗಳನ್ನು ರೂಪಿಸಿಕೊಂಡಿತ್ತು. ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್‌ ಮತ್ತು ತಹಸೀಲ್ದಾರ್‌ ಎಂ.ಆರ್‌. ಕುಲಕರ್ಣಿ ಮೊದಲು ಸಂಪರ್ಕಕ್ಕೆ ಸಿಗದ ಗ್ರಾಮಗಳ ಕುರಿತು ಲಕ್ಷ್ಯ ವಹಿಸಿದರು. ಈ ಹಳ್ಳಿಗಳಲ್ಲಿ ಅವಘಡ ಆದಾಗ ಏನು ಮಾಡಬೇಕು, ದೂರವಾಣಿ, ವಿದ್ಯುತ್‌ ಇಲ್ಲದ ವೇಳೆಯೂ ಆ ಗ್ರಾಮದ ನಿರಂತರ ಸಂಪರ್ಕ ಕಲ್ಪಿಸುವ ಯತ್ನ ನಡೆಸಿದ್ದಾರೆ. ಈ ರೀತಿ 84 ಇಂತಹ ಹಳ್ಳಿಗಳಲ್ಲಿ ಉತ್ಸಾಹಿಗಳನ್ನು ಗುರುತಿಸಿಕೊಂಡಿದ್ದಾರೆ.

ಅವಘಡ ನಡೆದಾಗ ಈ ಯುವಕರು ಗ್ರಾಮದಿಂದ ಹೊರಬಂದು ಮೊಬೈಲ್‌ ಸಂಪರ್ಕ ಸಿಗುವ ಸ್ಥಳದಲ್ಲಿ ನಿಂತು ತಾಲೂಕು ಆಡಳಿತಕ್ಕೆ ಮಾಹಿತಿ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಂಪರ್ಕ ರಹಿತ ಹಳ್ಳಿಗಳ ಪಟ್ಟಿಯಲ್ಲಿ ಸಂಪಖಂಡ ಮತ್ತು ಹುಲೇಕಲ್‌ ಹೋಬಳಿಯ ಗ್ರಾಮಗಳ ಸಂಖ್ಯೆಯೇ ಅಧಿಕವಾಗಿದೆ. ಬಂಡಲ ಗ್ರಾಮ ಪಂಚಾಯಿತಿಯ ತೆಪ್ಪಾರ, ಸರಗುಪ್ಪ, ಜಾನ್ಮನೆ ಪಂಚಾಯಿತಿ ಬಲವಳ್ಳಿ, ನೆಗ್ಗು ಪಂಚಾಯಿತಿಯ ಕೆಲ ಗ್ರಾಮಗಳು, ಶಿವಳ್ಳಿ ಗ್ರಾಮ ಪಂಚಾಯಿತಿಯ ಕಂಬಿಗಾರ, ಮೂಡಗಾರ, ಸಾಲ್ಕಣಿ ಪಂಚಾಯಿತಿಯ ಕುದ್ರಗೋಡ ಸೇರಿದಂತೆ ಹಳ್ಳಿಗಳ ಪಟ್ಟಿಸಿದ್ಧಪಡಿಸಲಾಗಿದೆ.

ತಾಲೂಕಾಡಳಿತ ಗುರುತಿಸಿರುವ ಗ್ರಾಮಗಳಲ್ಲಿ ದೂರವಾಣಿ ವ್ಯವಸ್ಥೆ ಅವ್ಯವಸ್ಥೆಯಾಗಿದೆ. ಗುಡ್ಡಗಾಡು ಪ್ರದೇಶವಾಗಿದ್ದರಿಂದ ಮೊಬೈಲ್‌ ಸಿಗ್ನಲ್‌ ಇಲ್ಲಿ ತಲುಪದ ಸ್ಥಿತಿ ಇದೆ. ಇನ್ನೂಂದೆಡೆ ಇಲ್ಲಿಯ ಸ್ಥಿರ ದೂರವಾಣಿಗಳ ಕೇಬಲ್‌ ಸರಿಪಡಿಸುವವರಿಲ್ಲದೇ ಎಂದೋ ಅಸುನೀಗಿವೆ. ಬಿಎಸ್‌ಎನ್‌ಎಲ್‌ ಮೊಬೈಲ್‌ ಗೋಪುರಗಳ ಬ್ಯಾಟರಿ ನಿರ್ವಹಣೆ ಇಲ್ಲದೇ ವಿದ್ಯುತ್‌ ಹೋಗಿ ಅವೂ ಕಾರ್ಯ ಸ್ಥಗಿತಗೊಳಿಸುತ್ತವೆ. ಹೀಗಾಗಿ, ಹಲವು ಗ್ರಾಮಗಳಲ್ಲಿ ಮೊಬೈಲ್‌ ಹಿಡಿದು ಗುಡ್ಡ ಏರಿದರೂ ಸಿಗ್ನಲ್‌ ಸಿಗುತ್ತಿಲ್ಲ!

ಡೆಲ್ಟಾಪ್ಲಸ್‌ ಆತಂಕ: ಗೋವಾ ಗಡಿ ಬಂದ್‌

ಈಗಾದರೂ ಜನಪ್ರತಿನಿಧಿಗಳ ಗಮನಕ್ಕೆ ಬಂದೀತೆ?

ಶಿರಸಿ ತಾಲೂಕಿನಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಂಪರ್ಕ ರಹಿತ ಗ್ರಾಮಗಳಿರುವುದು ದಿಗಿಲು ಮೂಡಿಸುವಂತಿದೆ. ಹಳ್ಳಿಗರ ಕಷ್ಟಕ್ಕೆ ಜನಪ್ರತಿನಿಧಿಗಳು ಸ್ಪಂದಿಸಿದ ಪ್ರಮಾಣದ ಮಾನದಂಡದಂತಿದೆ ತಾಲೂಕು ಆಡಳಿತ ಸಿದ್ಧಪಡಿಸಿರುವ ಈ ಪಟ್ಟಿ. ಇನ್ನಾದರೂ ಈ ಹಳ್ಳಿಗಳ ಸಮಸ್ಯೆ ಆಡಳಿತಗಾರರ ಗಮನಕ್ಕೆ ಬರಲಿದೆಯೇ ಎಂದು ಕಾದು ನೋಡಬೇಕಿದೆ.

ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕೆ ನಾವು ನೆಟ್‌ವರ್ಕ್ ಇರದ ಗ್ರಾಮಗಳ ಪಟ್ಟಿ ಮಾಡಿದ್ದೇವೆ. ಈಗ ಮಳೆಯ ಪ್ರಮಾಣವೂ ಕಡಿಮೆ ಇರುವುದರಿಂದ ಸಂಪರ್ಕ ರಹಿತ ಹಳ್ಳಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಶಿರಸಿ ತಹಸೀಲ್ದಾರ್‌ ಎಂ.ಆರ್‌. ಕುಲಕರ್ಣಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios