ಮಧ್ಯಪ್ರಾಚ್ಯ ಯುದ್ಧದ ನಂತರ ಧಾರವಾಡ ಜಿಲ್ಲೆಯಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಪೆಟ್ರೋಲ್ ಬಂಕ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಮುಂಗಡ ಹಣ ಪಾವತಿಸಿದರೂ ಡಿಪೋಗಳಿಂದ ಸಮರ್ಪಕ ತೈಲ ಪೂರೈಕೆಯಾಗದ ಕಾರಣ, ಗ್ರಾಮೀಣ ಭಾಗದ ಹಲವು ಬಂಕ್‌ಗಳು 'ನೋ ಸ್ಟಾಕ್' ಬೋರ್ಡ್ ಹಾಕಿ ಮುಚ್ಚುತ್ತಿವೆ. 

ಅಜೀಜ್ ಅಹ್ಮದ್ ಬಳಗಾನೂರ

ಹುಬ್ಬಳ್ಳಿ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಜಿಲ್ಲೆಯ ಪೆಟ್ರೋಲ್ ಬಂಕ್‌ಗಳಿಗೆ ಸಮರ್ಪಕ ಇಂಧನ ಪೂರೈಕೆಯಾಗದೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಮುಂಗಡ ಹಣ ಪಾವತಿಸಿದರೂ ನಿಗದಿತ ಪ್ರಮಾಣದ ಇಂಧನ ದೊರೆಯದೆ ಬಂಕ್‌ಗಳಲ್ಲಿ ನೋ ಸ್ಟಾಕ್‌ ಬೋರ್ಡ್ ರಾರಾಜಿಸುತ್ತಿವೆ.

ಯುದ್ಧ ಪ್ರಾರಂಭವಾದ ಹದಿನೈದು ದಿನದ ಬಳಿಕ ಇಂಧನದ ತೀವ್ರ ಸಮಸ್ಯೆಯಾಗಿತ್ತು. ಈ ವೇಳೆ ಸ್ವತಃ ಜಿಲ್ಲಾಧಿಕಾರಿ ಮುಂದೆ ನಿಂತು, ಪೆಟ್ರೋಲ್‌ ಬಂಕ್‌ಗಳಿಗೆ ಅಧಿಕಾರಿಗಳ ತಂಡ ಕರೆದುಕೊಂಡು ಹೋಗಿ ವಸ್ತುಸ್ಥಿತಿ ಅ‍ವಲೋಕಿಸಿ ಸಮಸ್ಯೆ ಪರಿಹರಿಸಿದ್ದರು. ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ಇಂಧನ ಸಂಗ್ರಹವಿದೆ. ಬಂಕ್‌ಗಳಿಗೆ ಇಂಧನ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ನಿಲ್ಲದ ಸಮಸ್ಯೆ

ಕಳೆದೊಂದು ವಾರದಿಂದ ಮತ್ತೆ ಬಂಕ್‌ಗಳಲ್ಲಿ ಇಂಧನ ಸಮಸ್ಯೆ ಎದುರಾಗಿದೆ. ಆದರೆ, ಈ ಸಮಸ್ಯೆ ಕೊಂಚ ಭಿನ್ನವಾಗಿದೆ. ಎಚ್‌ಪಿಸಿ, ಬಿಪಿಸಿ, ಐಒಸಿ ಡಿಪೋಗಳಲ್ಲಿ ಅಗತ್ಯ ಪ್ರಮಾಣದ ತೈಲ ಸಂಗ್ರಹವಿದ್ದರೂ ಬಂಕ್‌ಗಳಿಗೆ ಸಮರ್ಪಕವಾಗಿ ಪೂರೈಸದಿರುವುದು ಬಂಕ್‌ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಗಡವಾಗಿ ಹಣ ತುಂಬಿದರೂ ಇಂಧನ ಪೂರೈಕೆ ಮಾಡುತ್ತಿಲ್ಲ ಎಂಬುದು ಬಂಕ್‌ ಮಾಲೀಕರ ಆರೋಪ.

ಗ್ರಾಮೀಣ ಭಾಗದ ಬಂಕ್‌ಗಳು ಬಂದ್

ಕಳೆದ 8-10 ದಿನಗಳಿಂದ ಈ ಸಮಸ್ಯೆ ಉದ್ಭವಿಸಿದ್ದು, ಅನಿವಾರ್ಯವಾಗಿ ಗ್ರಾಮೀಣ ಭಾಗದಲ್ಲಿರುವ ಹಲವು ಬಂಕ್‌ಗಳು ಬಂದ್‌ ಆಗಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಹೊರತುಪಡಿಸಿ, ಕುಂದಗೋಳ, ನವಲಗುಂದ, ಕಲಘಟಗಿ, ನಗರದ ಹೊರಭಾಗ, ಅಂಚಟಗೇರಿ, ದಾಸ್ತಿಕೊಪ್ಪ ಸೇರಿದಂತೆ ಹಲವೆಡೆ ವಾರದಲ್ಲಿ 4 ದಿನ ತೆರೆದರೆ, 3 ದಿನ ಇಂಧನವಿಲ್ಲದೇ ಬಂದ್‌ ಮಾಡಲಾಗುತ್ತಿದೆ.

ಸ್ಟಾಕ್‌ ಇದ್ದರೂ ಕೊಡುತ್ತಿಲ್ಲ

ಯುದ್ಧ ಪ್ರಾರಂಭವಾಗುವ ಮೊದಲು ರಜಾ ದಿನಗಳಲ್ಲಿ ಮುಂಗಡವಾಗಿ ಇಂಧನ ನೀಡಲಾಗುತ್ತಿತ್ತು. ಮಾರಾಟ ಮಾಡಿದ ಬಳಿಕ ಡಿಪೋಗಳಿಗೆ ಹಣ ನೀಡುತ್ತಿದ್ದೆವು. ಆದರೆ, ಇದೀಗ ಮುಂಗಡ ಹಣ ನೀಡಿದರೂ ಮೂರ್ನಾಲ್ಕು ದಿನ ಇಂಧನ ಪೂರೈಕೆಯಾಗುತ್ತಿಲ್ಲ.

ಈ ಕುರಿತು ಪ್ರಶ್ನಿಸಿದರೆ ತೈಲಬೆಲೆ ಏರಿಕೆಯಾಗಿದೆ. ನಾವು ನಷ್ಟ ಮಾಡಿಕೊಂಡು ಮೊದಲಿನ ದರದಲ್ಲಿಯೇ ಇಂಧನ ಪೂರೈಸುತ್ತಿದ್ದೇವೆ. ಈ ಸಮಸ್ಯೆ ಸರಿಯಾಗುವ ವರೆಗೂ ಅಲ್ಪ ಪ್ರಮಾಣದ ತೊಂದರೆಯಾಗಲಿದೆ ಎಂದು ಡಿಪೋದವರು ಹೇಳುತ್ತಿದ್ದಾರೆ ಎಂಬುದು ಬಂಕ್‌ ಮಾಲಿಕರ ಹೇಳಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿವೆ 204 ಬಂಕ್‌

ಧಾರವಾಡ ಜಿಲ್ಲೆಯ ನಗರ ಪ್ರದೇಶದಲ್ಲಿ ಎಚ್‌ಪಿಸಿ 13, ಬಿಪಿಸಿ 30, ಐಒಸಿ 25 ಸೇರಿ ಒಟ್ಟು 68 ಬಂಕ್‌ಗಳಿದ್ದರೆ, ಗ್ರಾಮೀಣ ಭಾಗಗಳಲ್ಲಿ ಎಚ್‌ಪಿಸಿ 35, ಬಿಪಿಸಿ 35, ಐಒಸಿ 54 ಸೇರಿ ಒಟ್ಟು 192 ಬಂಕ್‌ಗಳಿವೆ. ಇನ್ನಿತರೆ 12 ಖಾಸಗಿ ಪೆಟ್ರೋಲ್‌ ಬಂಕ್‌ ಸೇರಿ ಜಿಲ್ಲೆಯಲ್ಲಿ ಒಟ್ಟು 204 ಪೆಟ್ರೋಲ್‌ ಬಂಕ್‌ಗಳಿವೆ.

ಡಿಸಿ ಭೇಟಿಗೆ ನಿರ್ಧಾರ

ಸಮರ್ಪಕವಾಗಿ ಇಂಧನ ಪೂರೈಕೆ ಆಗದಿರುವುದರಿಂದ ಪಟ್ಟಣ, ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಬಂದು ಇಂಧನ ಹಾಕಿಸಿಕೊಳ್ಳುತ್ತಿದ್ದಾರೆ. ಜತೆಗೆ ಕಳೆದ ಒಂದು ವಾರದಿಂದ ನಗರ ಪ್ರದೇಶದಲ್ಲೂ ಸಮರ್ಪಕ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಭೇಟಿಯಾಗಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ.

ಶಾಂತರಾಜ ಪೋಳ, ಅಧ್ಯಕ್ಷರು- ಧಾರವಾಡ ಜಿಲ್ಲಾ ಪೆಟ್ರೋಲಿಯಂ ಮಾಲಿಕರು ಹಾಗೂ ಡಿಲರ್ಸ್ ಅಸೋಸಿಯೇಷನ್