ಮೈಸೂರು(ಜೂ.16): ಪ್ರತಿ ವರ್ಷ ಆಶಾಢ ಮಾಸದಲ್ಲಿ ಮೈಸೂರು ಚಾಮುಂಡಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುವುದರೊಂದಿಗೆ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ವಿಶೇಷ ಪೂಜೆ, ವರ್ದಂತಿ ಉತ್ಸವ ನಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.

ಕೊರೋನಾ ವೈರಸ್ ಕಾಟದಿಂದ ಈ ಬಾರಿ ಆಷಾಢ‌ ಮಾಸದ 4 ಶುಕ್ರವಾರದ ವಿಶೇಷ ಪೂಜೆ, ವರ್ದಂತಿ ಉತ್ಸವಕ್ಕೆ ಬ್ರೇಕ್ ಬೀಳಲಿದೆ. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಈ ಬಗ್ಗೆ ಹೇಳಿಕೆ ನೀಡಿದ್ದು, ಆಷಾಢ ಮಾಸದ ಒಂದು ತಿಂಗಳು ಶುಕ್ರವಾರ, ಶನಿವಾರ, ಭಾನುವಾರ, ಈ ಮೂರು ದಿನವೂ ದೇವರ ದರ್ಶನ ಇರುವುದಿಲ್ಲ ಎಂದಿದ್ದಾರೆ.

 

ಈ‌ ಬಾರಿ ಚಾಮುಂಡಿ ವರ್ದಂತಿಯೂ ನಡೆಯುವುದಿಲ್ಲ. ಎಲ್ಲಿಯು ವರ್ದಂತಿ ಹಾಗೂ ಆಷಾಢದ ಹೆಸರಿನಲ್ಲಿ ಪ್ರಸಾದ ವಿತರಣೆ ಮಾಡುವಂತಿಲ್ಲ. ದೇಗುಲದ ಒಳಗಡೆ ಎಂದಿನಂತೆ ಧಾರ್ಮಿಕ ಪೂಜೆ ನಡೆಯುತ್ತವೆ ಎಂದಿದ್ದಾರೆ.

ಜಿಲ್ಲಾ ವ್ಯಾಪ್ತಿಯ ಚಾಮುಂಡೇಶ್ವರಿ ದೇಗುಲದಲ್ಲಿ ಆಷಾಢ ಪೂಜೆ ನಡೆಸುವ ವಿಚಾರವಾಗಿ ಚರ್ಚೆ ನಡೆಸಿ‌ ಆದೇಶ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಡಿಸಿ ಅಭಿರಾಮ್ ಜಿ ಶಂಕರ್ ಹೇಳಿದ್ದಾರೆ.