ಬೆಂಗಳೂರು: ಬಿಡಿಎ ಸಿಬ್ಬಂದಿಗೆ ಕಚೇರೀಲಿ ಕೂರಲೂ ಜಾಗವಿಲ್ಲ!
ಬಿಡಿಎ ಕಾರ್ಯಕ್ಷೇತ್ರವೂ ವಿಸ್ತಾರಗೊಳ್ಳುತ್ತಿದ್ದು, ಅಧಿಕಾರಿ, ಸಿಬ್ಬಂದಿ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಎಂಜಿನಿಯರ್‌ಗಳು, ಸಹಾಯಕ ಎಂಜಿನಿಯರ್ ಗಳು, ಭೂಸ್ವಾಧೀನ ವಿಭಾಗ ಸೇರಿದಂತೆ ಅನೇಕರಿಗೆ ಸಮರ್ಪಕವಾದ ಕೊಠಡಿಗಳೇ ಸಿಗುತ್ತಿಲ್ಲ. ಇಲ್ಲಿ ವಾಹನ ನಿಲುಗಡೆ ಸಮಸ್ಯೆಯೂ ಇದೆ.
ಸಂಪತ್ ತರೀಕೆರೆ
ಬೆಂಗಳೂರು(ಡಿ.17): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿಯಲ್ಲಿ ಕಡತ ಇಟ್ಟುಕೊಳ್ಳಲೂ ಜಾಗವಿಲ್ಲ. ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳಲು ಅಧಿಕಾರಿಗಳಿಗೆ ಕೊಠಡಿಯೂ ಇಲ್ಲ! ಹೀಗಾಗಿ ಬಿಡಿಎಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜನರ ಕೈಗೆ ಅಧಿಕಾರಿಗಳೇ ಸಿಗುತ್ತಿಲ್ಲ.
ಬಿಡಿಎ ದಿನೇ ದಿನೇ ಬೆಂಗಳೂರಿನಂತೆಯೇ ಬೆಳೆಯುತ್ತಿದೆ. ಎಚ್‌ಎಸ್‌ಆರ್ ಲೇಔಟ್, ಬನಶಂಕರಿ, ಜಯನಗರ, ಅರ್ಕಾವತಿ, ವಿಶ್ವೇಶ್ವರಯ್ಯ ಲೇಔಟ್, ಆರ್‌ಎಂವಿ ಹೀಗೆ ಸುಮಾರು 76 ಲೇಔಟ್‌ಗಳು ಬಿಡಿಎ ನಿರ್ಮಿತವಾಗಿವೆ. ಹೀಗಾಗಿ ಪ್ರಾಧಿಕಾರದ ಕಾರ್ಯಕ್ಷೇತ್ರವೂ ವಿಸ್ತಾರಗೊಳ್ಳುತ್ತಿದ್ದು, ಅಧಿಕಾರಿ, ಸಿಬ್ಬಂದಿ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಎಂಜಿನಿಯರ್‌ಗಳು, ಸಹಾಯಕ ಎಂಜಿನಿಯರ್ ಗಳು, ಭೂಸ್ವಾಧೀನ ವಿಭಾಗ ಸೇರಿದಂತೆ ಅನೇಕರಿಗೆ ಸಮರ್ಪಕವಾದ ಕೊಠಡಿಗಳೇ ಸಿಗುತ್ತಿಲ್ಲ. ಇಲ್ಲಿ ವಾಹನ ನಿಲುಗಡೆ ಸಮಸ್ಯೆಯೂ ಇದೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು: ಬಿಡಿಎ ಸೈಟ್ ಖರೀದಿಸಿ ಮನೆ ಕಟ್ಟಿರದಿದ್ದರೆ ಭಾರೀ ದಂಡ!
ಹಲವಾರು ವರ್ಷಗಳಿಂದ ಧೂಳು ಹಿಡಿದಿರುವ ಕಡತಗಳ ನಡುವೆಯೇ ಸಿಬ್ಬಂದಿ ಕುಳಿತುಕೊಂಡು ಕೆಲಸ ಮಾಡುವ ಪರಿಸ್ಥಿತಿಯೂ ಇದೆ. ಜೊತೆಗೆ ಕೆಲವೇ ಕೆಲವು ಮೇಲಾಧಿಕಾರಿಗಳನ್ನು ಹೊರತುಪಡಿಸಿ ಇತರರಿಗೆ ಒಳ್ಳೆಯ ಕಚೇರಿಯೂ (ಚೇಂಬರ್) ಇಲ್ಲ. ಅದರಲ್ಲೂ ಮುಖ್ಯವಾಗಿ ಫೀಲ್ಸ್‌ರ್ಕ್ ಮಾಡುವಂತಹ ಎಂಜಿನಿಯರ್‌ಗಳು, ಸರ್ವೇ ವಿಭಾಗದವರು ಹೀಗೆ ಕೆಲವು ವಿಭಾಗಗಳ ಅಧಿಕಾರಿ ಗಳ ಪಾಡಂತೂ ಕೇಳುವವರೇ ಇಲ್ಲದಂತಾಗಿದೆ. ಬಿಡಿಎ ದಾಖಲೆ ಪತ್ರಗಳನ್ನು ಇಡಲು ಕೊಠಡಿಗಳ ಕೊರತೆ ಇದೆ. ಕೆಲವೆಡೆ ಕಾರಿಡಾರ್‌ಗಳಲ್ಲೇ ಕಪಾಟುಗಳನ್ನು ಇಟ್ಟು ಅವುಗಳಲ್ಲಿ ದಾಖಲೆ ಪತ್ರಗಳನ್ನು ಸಂಗ್ರಹಿಸಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ನೊಂದ ಅಧಿಕಾರಿಗಳು.
ಮೂಲೆ ಸೇರಿದ 'ಅಭಿವೃದ್ಧಿ ಭವನ ಯೋಜನೆ:
ಬಿಡಿಎಗೆ ಬರುವ ಗ್ರಾಹಕರಿಗೆ ಒಂದೇ ಕಡೆ ಎಲ್ಲ ಸೇವೆಗಳು ಸಿಗಬೇಕು ಎಂಬ ಕಾರಣಕ್ಕೆ 2004ರಲ್ಲಿ ನೆಲಮಹಡಿ ಸೇರಿದಂತೆ 4 ಮಹಡಿಗಳ ಕಟ್ಟಡವನ್ನು ಬಿಡಿಎ ಕೇಂದ್ರ ಕಚೇರಿಯ ಹಳೆಯ ಕಟ್ಟಡಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗಿತ್ತು. ಈಗ ಬೆಂಗಳೂರಿನೊಂದಿಗೆ ಬಿಡಿಎ ಕೂಡ ಬೆಳೆದಿದ್ದು 20 ವರ್ಷಗಳ ಹಿಂದಿನ ಕಟ್ಟಡ ಚಿಕ್ಕದು ಎನ್ನಿಸತೊಡಗಿದೆ.
ಹಾಗಾಗಿ ಈಗಿರುವ ಕಟ್ಟಡವನ್ನು ತೆರವುಗೊಳಿಸಿ ಅದೇ ಜಾಗದಲ್ಲಿ 250 ಕೋಟಿ ರು. ವೆಚ್ಚದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸುವ ಯೋಜನೆಯನ್ನು ಹಿಂದಿನ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರ ಅಧಿಕಾರವಧಿಯಲ್ಲಿ ರೂಪಿಸಲಾಗಿತ್ತು. ಕೇಂದ್ರ ಕಚೇರಿ ಆವರಣದಲ್ಲಿರುವ 2.29 ಎಕರೆ ಜಮೀನನ್ನು ಅದಕ್ಕಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಭವನ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಬಿಡಿಎ ಕಚೇರಿಗಳಿಗೆ ಸುಮಾರು 2.25 ಲಕ್ಷ ಚದರ ಅಡಿಗಳಷ್ಟು ಜಾಗದ ಅವಶ್ಯಕತೆ ಇದೆ. 4.25 ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣದ ಕಟ್ಟಡ ನಿರ್ಮಾಣ ಮಾಡುವುದು, ಹೆಚ್ಚುವರಿ ಜಾಗವನ್ನು ಸರ್ಕಾರಿ ಅಥವಾ ಸರ್ಕಾರದ ಅಧೀನದ ಸಂಸ್ಥೆಗಳ ಕಚೇರಿಗಳಿಗೆ ಬಾಡಿಗೆಗೆ ನೀಡುವ ಉದ್ದೇಶ ಹೊಂದಲಾಗಿತ್ತು. ಇದೇ ಸಂದರ್ಭದಲ್ಲಿ ಸುಸ್ಥಿತಿಯಲ್ಲಿ ಇರುವ ಕಟ್ಟಡ ತೆರವಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ನಂತರ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವದೊಂದಿಗೆ ಬಿಡಿಎಗೆ ಹೊಸ ಅಧ್ಯಕ್ಷರು ಬಂದ ನಂತರ ಅಭಿವೃದ್ಧಿ ಭವನ ಯೋಜನೆಯೂ ಮೂಲೆಗೆ ಸೇರಿದೆ.
ಬೆಂಗ್ಳೂರಲ್ಲಿ ಅಕ್ರಮ ಕಟ್ಟಡ ತಡೆಗೆ ಶೀಘ್ರದಲ್ಲೇ ಪ್ರಬಲ ಕಾನೂನು: ಸಿದ್ದರಾಮಯ್ಯ
ಸಂಜೆ ಇಲ್ಲವೇ ನಾಳೆ ಬನ್ನಿ...
ವಿವಿಧ ಸಮಸ್ಯೆಗಳ ಪರಿಹಾರಕ್ಕೆಂದು ಬಿಡಿಎ ಕೇಂದ್ರ ಕಚೇರಿಗೆ ಬರುವ ಜನರ ಕೈಗೆ ಅಧಿಕಾರಿಗಳು ಸಿಗುವುದೇ ಇಲ್ಲ. ಕೈಗೆ ಸಿಕ್ಕ ಸಿಬ್ಬಂದಿ ವಿಚಾರಿಸಿದರೆ, ಫೀಟ್ವರ್ಕ್ ಹೋಗಿದ್ದಾರೆ. ಇಲ್ಲವೋ ಸೈಟ್ ಹತ್ತಿರ ಹೋಗಿದ್ದಾರೆ. ಮಧ್ಯಾಹ್ನ ಸಿಗೋದಿಲ್ಲ. ಸಂಜೆ ಇಲ್ಲವೇ ನಾಳೆ ಬನ್ನಿ ಅಂತಾರೆ. ಒಂದೇ ಬಾರಿಗೆ ಅಧಿಕಾರಿಗಳು ಸಿಕ್ಕಿದ ಉದಾಹರಣೆಯೇ ಇಲ್ಲ. ಆನ್‌ಲೈನ್ ವ್ಯವಸ್ಥೆ ಇದೇ, ಅದರಲ್ಲೇ ನಿಮ್ಮ ಸಮಸ್ಯೆ ದಾಖಲಿಸಿ, ವಾರದೊಳಗೆ ಪರಿಹಾರ ಆಗುತ್ತದೆ ಎನ್ನುತ್ತಾರೆ. ಈವರೆಗೂ ಅಂತಹ ಕ್ರಾಂತಿಕಾರ ಬದಲಾವಣೆ ಬಿಡಿಎನಲ್ಲಿ ಆಗಿಲ್ಲ ಎಂಬುದು ಗ್ರಾಹಕರೊಬ್ಬರ ಅಳಲು.
ಬಿಡಿಎ ಕೇಂದ್ರ ಕಚೇರಿಗೆ ಹೊಸ ಕಟ್ಟಡ ನಿರ್ಮಾಣದ ಪ್ರಸ್ತಾಪ ಹಿಂದೆ ಇತ್ತು. ಆದರೆ, ಅನುಮೋದನೆ ಸಿಕ್ಕಿರಲಿಲ್ಲ, ಸದ್ಯಕ್ಕೆ ಇರುವಂಥ ವ್ಯವಸ್ಥೆಯೇ ಮುಂದುವರೆಯುತ್ತಿದ್ದು ಬೇರೆ ಯಾವುದೇ ಯೋಜನೆ ಇಲ್ಲ ಎಂದು ಬಿಡಿಎ ಆರ್ಥಿಕ ಸದಸ್ಯ ಲೋಕೇಶ್ ತಿಳಿಸಿದ್ದಾರೆ.