Asianet Suvarna News Asianet Suvarna News

ಗದಗ: ಅರಣ್ಯ ಸಚಿವ ಪಾಟೀಲರ ತವರಲ್ಲೇ ಸಸಿಗಳಿಗಿಲ್ಲ ರಕ್ಷಣೆ, ಇನ್ನು ರಾಜ್ಯದ ಗತಿ?

ಸಚಿವರು ಕಾಳಜಿ ವಹಿಸಿ ನೆಟ್ಟ ಸಸಿಗಳ ನಿರ್ವಹಣೆ ಇಲ್ಲ ಒಣಗುತ್ತಿವೆ| ಪಕ್ಕದ ಕಾಲುವೆಯಲ್ಲಿ ನೀರಿದ್ದರೂ ಸಸಿಗಳಿಗಿಲ್ಲ ನೀರಿನ ಭಾಗ್ಯ| ಕಾರ್ಮಿಕರ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೊರಗುತ್ತಿವೆ ಗಿಡಗಳು|

No Sapling Protection in Gadag District
Author
Bengaluru, First Published Jan 2, 2020, 8:10 AM IST
  • Facebook
  • Twitter
  • Whatsapp

ಎಸ್‌.ಜಿ. ತೆಗ್ಗಿನಮನಿ

ನರಗುಂದ(ಜ.02): ಪರಿಸರ ಉಳಿಸಬೇಕೆಂದು ಸರ್ಕಾರ ಸಾವಿರಾರು ಕೋಟಿ ರುಪಾಯಿ ಹಣ ಖರ್ಚು ಮಾಡುತ್ತಿದೆ. ಆದರೆ, ನೆಟ್ಟ ಸಸಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ರಕ್ಷಣೆ ಮಾಡದೇ ಇರುವುದರಿಂದ ಇಂದು ಅರಣ್ಯ ಸಚಿವರ ತವರಲ್ಲಿಯೇ ಸಸಿಗಳು ಸಂರಕ್ಷಣೆಯಿಲ್ಲದೆ ಒಣಗುತ್ತಿವೆ.

2019ರ ಜೂನ್‌ ತಿಂಗಳ ನಂತರ ನರಗುಂದ ವಿಧಾನಸಭೆ ಮತಕ್ಷೇತ್ರದ ಶಾಸಕ ಸಿ.ಸಿ. ಪಾಟೀಲರು ಅರಣ್ಯ ಸಚಿವರಾದ ಮೇಲೆ ಹೆಚ್ಚು ಕಾಳಜಿ ವಹಿಸಿ ಸರ್ಕಾರದಿಂದ ಹೆಚ್ಚು ಅನುದಾನ ತಂದು ತಾಲೂಕಿನಲ್ಲಿ ಹೆಚ್ಚು ಸಸಿ(ಗಿಡ)ಗಳನ್ನು ನೆಡಿಸಿ ಪರಿಸರ ಕಾಪಾಡಬೇಕೆಂದು ಮುಂದಾಗಿದ್ದಾರೆ. ಆದರೆ, ಅಧಿಕಾರಿಗಳು ನೆಟ್ಟ ಸಸಿಗಳನ್ನು ಸರಿಯಾಗಿ ಸಂರಕ್ಷಣೆ ಮಾಡದೇ ಇರುವುದರಿಂದಾಗಿ ಸಸಿಗಳು ತೇವಾಂಶದ ಕೊರತೆಯಿಂದ ಒಣಗಿ ಹೋಗುತ್ತಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ನೀಡದೇ ಇರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ದಿವ್ಯ ನಿರ್ಲಕ್ಷ:

ತಾಲೂಕಿನ ನರಗುಂದದಿಂದ ಕೊಣ್ಣೂರು ಗ್ರಾಮದ ಮಲಪ್ರಭಾ ಬಲದಂಡೆ ಮುಖ್ಯ ಕಾಲುವೆ ಎರಡೂ ಬದಿಯಲ್ಲಿ ಕಳೆದ ಜೂನ್‌ ತಿಂಗಳಿನಲ್ಲಿ 2400 ಸಸಿಗಳನ್ನು ನೆಡಲಾಗಿದೆ. ಈ ಸಸಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಕೂಲಿ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಪ್ರತಿ ತಿಂಗಳು ಸಾವಿರಾರು ರುಪಾಯಿ ಹಣ ಖರ್ಚು ಮಾಡಿದರೂ ಸಹ ಸಸಿಗಳ ಸೂಕ್ತ ನಿರ್ವಹಣೆ ಇಲ್ಲದಿರುವುದು ಹಚ್ಚಿರುವ ಸಸಿಗಳನ್ನು ನೋಡಿದರೆ ಗೊತ್ತಾಗುತ್ತದೆ.

ಒಣಗುತ್ತಿರುವ ಸಸಿಗಳು:

ಕಾಲುವೆ ಎರಡೂ ಬದಿಗಳಲ್ಲಿ ನೆಟ್ಟಿರುವ ಸಸಿಗಳ ಸುತ್ತಲೂ ಜಾಲಿ, ಕಂಟಿ ಮತ್ತು ಕಸ ಬೆಳೆದು ನಿಂತಿವೆ. ಮೇಲಾಗಿ ಕಳೆದ 2 ತಿಂಗಳಿಂದ ಈ ಸಸಿಗಳ ಸಮರ್ಪಕ ನಿರ್ವಹಣೆ ಇಲ್ಲದೇ ಹಾಗೂ ಕಾಲಕ್ಕೆ ತಕ್ಕಂತೆ ನೀರು ಹಾಕದೇ ಇರುವುದರಿಂದ ತೇವಾಂಶದ ಕೊರತೆ ಉಂಟಾಗಿ ಒಣಗುತ್ತಿವೆ. ವಿಪರ್ಯಾಸವೆಂದರೆ ನೆಟ್ಟಿರುವ ಸಸಿಗಳ ಪಕ್ಕದಲ್ಲಿಯೇ ನಿತ್ಯ ಕಾಲುವೆ ಹರಿಯುತ್ತಿದ್ದರೂ ಸಹ ಕೂಲಿ ಕಾರ್ಮಿಕರು ಸರಿಯಾದ ನಿರ್ವಹಣೆ ಕೈಗೊಳ್ಳದೇ ಇರುವ ಹಿನ್ನಲೆಯಲ್ಲಿ ಸಸಿಗಳು ಸಂಪೂರ್ಣವಾಗಿ ಒಣಗಿ ಹಾಳಾಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸೂಕ್ತ ತನಿಖೆಗೆ ಆಗ್ರಹ:

ಅರಣ್ಯ ಇಲಾಖೆ ಅಧಿಕಾರಿಗಳು ಜೂನ್‌ ತಿಂಗಳಿಂದ ಈ ವರೆಗೆ ಸಸಿಗಳಿಗೆ ಕಾಲಕ್ಕೆ ತಕ್ಕಂತೆ ನೀರು ಹಾಕಿರುವುದಾಗಿ ಲಕ್ಷಾಂತರ ರುಪಾಯಿ ಹಣ ಖರ್ಚು ಹಾಕಿದ್ದಾರೆ. ಆದರೆ, ಕಳೆದ ಆಗಸ್ಟ್‌ ತಿಂಗಳಿಂದ ನವಂಬರ್‌ ತಿಂಗಳ ವರೆಗೆ ಮಳೆಯಾಗಿದೆ. ಮಳೆಯಿಂದ ಬಿದ್ದ ನೀರು ಮಾತ್ರ ಸಸಿಗೆ ಆಹಾರವಾಗಿದ್ದು, ಅಧಿಕಾರಿಗಳು ಸಸಿಗಳಿಗೆ ನೀರು ಹಾಕದೇ ಬಂದ ಹಣವನ್ನು ಸಮರ್ಪಕವಾಗಿ ಬಳಸಿಲ್ಲ ಎಂಬ ಕುರಿತು ಜನರ ಆರೋಪವಿದ್ದು, ಇದರ ಸತ್ಯಾಸತ್ಯತೆ ಕುರಿತು ಅಧಿಕಾರಿಗಳು ಸ್ಪಷ್ಟಮಾಹಿತಿ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದ್ದು, ಈ ಕುರಿತು ಮೇಲಧಿಕಾರಿಗಳು ಸಮಗ್ರ ತನಿಖೆ ನಡೆಸುವಂತೆ ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಸಕ್ತ ಸಾಲಿನಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವ ಹಿನ್ನೆಲೆಯಲ್ಲಿ ಹಚ್ಚಿರುವ ಸಸಿಗಳ ಸುತ್ತಮುತ್ತಲಿನ ಜಾಗದಲ್ಲಿ ಬೆಳೆದಿದ್ದ ಕಸ ಸ್ವಚ್ಛಮಾಡಲು ಕಾರ್ಮಿಕರು ಸಿಗದೇ ಸಮಸ್ಯೆಯಾಗಿದೆ. ಆದ್ದರಿಂದ ಆದಷ್ಟಬೇಗ ಸಸಿಗಳಲ್ಲಿರುವ ಕಸವನ್ನು ಸ್ವಚ್ಛ ಮಾಡಿ ಗಿಡಗಳಿಗೆ ನೀರು ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದು ಉಪವಲಯ ಅರಣ್ಯ ಅಧಿಕಾರಿ ಜಿ.ಡಿ. ಶಿರಹಟ್ಟಿ ಅವರು ಹೇಳಿದ್ದಾರೆ. 

ಅರಣ್ಯ ಇಲಾಖೆಯ ಅಧಿಕಾರಿಗಳು ಈ ವರ್ಷ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸಾವಿರಾರು ಸಸಿ(ಗಿಡ)ಗಳನ್ನು ನೆಟ್ಟಿದ್ದಾರೆ. ಆದರೆ, ಅವುಗಳನ್ನು ಸರಿಯಾಗಿ ಸಂರಕ್ಷಣೆ ಮಾಡದೇ ಇರುವುದರಿಂದ ಈಗ ಸಸಿಗಳು ಒಣಗುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಬೇಗ ಸಸಿಗಳ ರಕ್ಷಣೆಗೆ ಮುಂದಾಗಬೇಕು. ನಿರ್ಲಕ್ಷ್ಯ ತೋರಿದಲ್ಲಿ ಸಂಘಟನೆಯ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷ ಈಶ್ವರಯ್ಯ ಹಿರೇಮಠ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ, ಪರಿಸರ ಸಚಿವ ಸಿ.ಸಿ. ಪಾಟೀಲ ಅವರು, ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ನೆಟ್ಟಿರುವ ಸಸಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯವಾಗಿದ್ದು, ಕರ್ತವ್ಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸದ್ಯ ಮಲಪ್ರಭಾ ಕಾಲುವೆಗೆ ನೀರು ಹರಿಯುತ್ತಿದೆ. ಇದೇ ನೀರನ್ನು ಸಸಿಗಳಿಗೆ ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios