ಹೆಲ್ಮೆಟ್, ಸೀಟ್‌ಬೆಲ್ಟ್ ಧರಿಸದಿದ್ರೆ ನೋ ಪೆಟ್ರೋಲ್
ಮೋಟಾರ್ ವಾಹನಗಳ ಕಾಯ್ದೆ ಅನುಷ್ಠಾನಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕೈಗೊಂಡ ಕ್ರಮಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ| ಇದರಿಂದ ಪೊಲೀಸ್ ಇಲಾಖೆ ನೆಮ್ಮದಿಯ ನೆಟ್ಟುಸಿರು ಬಿಡುತ್ತಿದೆ| ಬಾಗಲಕೋಟೆಯ ಶಾಸಕರು ಹಾಗೂ ಸಂಸದರು ಬಹಿರಂಗವಾಗಿ ಹೊಸ ಕಾಯ್ದೆಯ ಅನುಷ್ಠಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಅತ್ಯಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೆಲ್ಮೆಟ್ ಧರಿಸಿ|
ಈಶ್ವರ ಶೆಟ್ಟರ
ಬಾಗಲಕೋಟೆ(ಸೆ.30): ಈಚೆಗೆ ತಂದಿರುವ ಮೋಟಾರ್ ವಾಹನಗಳ ಕಾಯ್ದೆ ಅನುಷ್ಠಾನಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕೈಗೊಂಡ ಕ್ರಮಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಇದರಿಂದ ಪೊಲೀಸ್ ಇಲಾಖೆ ನೆಮ್ಮದಿಯ ನೆಟ್ಟುಸಿರು ಬಿಡುತ್ತಿದೆ.
ರಾಜ್ಯದ ವಿವಿಧೆಡೆ ಸಂಚಾರ ನಿಯಮದ ಕಟ್ಟುನಿಟ್ಟಿನ ಪಾಲನೆಯ ಸಂದರ್ಭದಲ್ಲಿ ವಾಗ್ವಾದ, ಸಣ್ಣ ಪುಟ್ಟ ಜಗಳಗಳು ನಡೆದಿರುವುದನ್ನು ಸೂಕ್ಷ್ಮವಾಗಿ ಕಂಡುಕೊಂಡಿದ್ದ ಜಿಲ್ಲಾ ಪೊಲೀಸರು ಕಾಯ್ದೆ ಜಾರಿಯ ಮುನ್ನ ಹಲವು ಬಗೆಯ ಸಭೆಗಳನ್ನು, ಸೂಚನೆಗಳನ್ನು ನೀಡುವ ಜೊತೆಗೆ ಮುಖ್ಯವಾಗಿ ಸಂಘ ಸಂಸ್ಥೆಗಳ ವಿಶ್ವಾಸವನ್ನು ಪಡೆದಿದ್ದರ ಪರಿಣಾಮ ಶನಿವಾರದಿಂದ ಆರಂಭಗೊಂಡ ಹೊಸ ಕಾಯ್ದೆಯ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರ ಸಹಕಾರ ದೊರೆತ್ತಿದ್ದರೆ ಕೆಲವೆಡೆ ದಂಡ ನೀಡಿ ಬಚಾವ್ ಆಗುತ್ತಿರುವ ಪ್ರಕರಣಗಳು ಸಹ ಕಾಣಸಿಗುತ್ತಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರಮುಖವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹಲವು ರೀತಿಯ ಚರ್ಚೆಯ ನಂತರ ಹೊಸ ಕಾಯ್ದೆಯ ಅನುಷ್ಠಾನ ಮಾಡಲು ಹೊರಟಿರುವುದು ಮತ್ತು ಟಂಟಂ ಚಾಲಕರ ಜೊತೆಗಿನ ಚರ್ಚೆ, ವಾಹನ ಸವಾರಿ ಮಾಡುವ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಹೆಲ್ಮೆಟ್ ಹಾಗೂ ಇತರೆ ದಾಖಲೆಗಳೊಂದಿಗೆ ಆಯಾ ಶಾಲಾ ಕಾಲೇಜುಗಳ ಪ್ರವೇಶ ಮಾಡಲು ಮಾತ್ರ ಸಾಧ್ಯ ಎಂಬ ನಿಯಮವನ್ನು ಸಂಸ್ಥೆಗಳ ಮುಖ್ಯಸ್ಥರ ಮೂಲಕ ಅನುಷ್ಠಾನ ತರಲಾರಂಭಿಸಿದೆ.
ಇದು ಸಹ ಯಶಸ್ವಿಯಾಗಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಹಾಗೂ ಸೀಟ್ ಬೆಲ್ಟ್ ಧರಿಸದ ಕಾರು ಚಾಲಕರಿಗೆ ಇಂಧನವನ್ನು ಹಾಕದಂತೆ ನಿರ್ಬಂಧ ಹೇರಿರುವುದಕ್ಕೂ ಸ್ಪಂದನೆ ದೊರೆತಿದೆ. ಈ ವಿಷಯದಲ್ಲಿ ಇಲಾಖೆ ಇನ್ನಷ್ಟು ಕ್ರಮಗಳಿಗೆ ಮುಂದಾಗಬೇಕಿದೆ.
ಜನಪ್ರತಿನಿಧಿಗಳ ಆಸಕ್ತಿ:
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಬೆಂಬಲಿಗರನ್ನು ಸಂಚಾರಿ ನಿಯಮದ ವಿಷಯದಲ್ಲಿ ಪೊಲೀಸರ ಜೊತೆ ಮಾತನಾಡಿ, ಬಿಡಿಸುವ ಪ್ರಕರಣಗಳೇ ಈವರೆಗೆ ಹೆಚ್ಚಾಗಿ ಕಾಣುತ್ತಿದ್ದವು. ಆದರೆ ಹೊಸ ಕಾಯ್ದೆಯ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಸಹ ಹಸ್ತಕ್ಷೇಪ ಮಾಡದೆ ಇಲಾಖೆ ಜೊತೆ ಕೈಜೋಡಿಸಿರುವ ಪರಿಣಾಮ ಮುಕ್ತವಾಗಿ ಕಾಯ್ದಯ ನಿಯಮಗಳನ್ನು ಜಾರಿಗೊಳಿಸಲು ಕೆಳ ಹಂತದ ಅಧಿಕಾರಿಗಳು ಸಹ ಉತ್ಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಗಲಕೋಟೆಯ ಶಾಸಕರು ಹಾಗೂ ಸಂಸದರು ಬಹಿರಂಗವಾಗಿ ಹೊಸ ಕಾಯ್ದೆಯ ಅನುಷ್ಠಾನಕ್ಕೆ ಬೆಂಬಲ ಸೂಚಿಸುವ ಜೊತೆಗೆ ನಮ್ಮ ಮಾತನ್ನು ಸಹ ಪೊಲೀಸರು ಕೇಳುವುದಿಲ್ಲ, ನೀವು ಯಾರು ನಮ್ಮ ಬಳಿ ಬರುವ ಅಗತ್ಯವಿಲ್ಲ. ಅತ್ಯಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೆಲ್ಮೆಟ್ ಸೇರಿದಂತೆ ಇತರ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ ಎಂಬ ಹೇಳಿಕೆಗಳು ಸಹ ಸಾರ್ವಜನಿಕರಲ್ಲಿ ಪರಿಣಾಮ ಬೀರುತ್ತಿದ್ದು ಬಹುತೇಕರು ಕಾಯ್ದೆಯಂತೆ ಸಂಚಾರ ಮಾಡಲು ಮುಂದಾಗುತ್ತಿದ್ದಾರೆ.
21 ವಿವಿಧ ಪ್ರಕರಣಗಳಿವೆ:
ಮದ್ಯಪಾನ ಮಾಡಿ ವಾಹನ ಚಲಾಯಿಸಿದ, ವೇಗ ಮಿತಿ ಉಲ್ಲಂಘನೆ, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿರುವ ಬಗ್ಗೆ/ವಾಹನ ನಿಲುಗಡೆಯ ಉಲ್ಲಂಘನೆ ಬಗ್ಗೆ, ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನ ನಿಲುಗಡೆಯ ಪ್ರಕರಣಗಳು, ವಾಹನ ಚಾಲನೆಯಲ್ಲಿರುವಾಗ ಮೊಬೈಲ್ ದೂರ ವಾಣಿ ಉಪಯೋಗಿಸುವವರ ವಿರುದ್ಧ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ, ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ, ಪಾದಚಾರಿ ಮಾರ್ಗವನ್ನು ಅತಿಕ್ರಮಿಸು ವುದು, ರೆಡ್ ಲೈಟ/ಸಿಗ್ನಲ್ ಜಂಪ್ ಮಾಡುವವರ ವಿರುದ್ಧ, ಮಿತಿಗಿಂತ ಹೆಚ್ಚಿನ ಭಾರ ಹೊತ್ತ ವಾಹನ, ಅಜಾಗರೂಕತೆಯಿಂದ ವಾಹನ ಓಡಿಸಿದ ಬಗ್ಗೆ, ಚಾಲನ ರಹದಾರಿ ಪತ್ರವಿಲ್ಲದೇ ವಾಹನ ಓಡಿಸುವುದು, ಪ್ರಯಾಣಿಕರನ್ನು ಅಪಾಯ ಮಟ್ಟದಲ್ಲಿ ಕರೆದುಕೊಂಡು ಹೋಗುವುದು, ಪ್ರಕಾಶಮಾನವಾದ ದೀಪವನ್ನು ಬಳಸುವವರ ವಿರುದ್ಧ, ವಾಹನಗಳ ಚಾವಣೆಯಲ್ಲಿ ಸಂಚರಿಸುವುದು, ಹೆಚ್ಚಿನ ಹೊಗೆ ಉಗುಳುವ ಕುರಿತು, ಶಬ್ದ ಮಾಲಿನ್ಯ ವರ್ಧನೆಯ ನಿರ್ಭಂದ ಉಲ್ಲಂಘನೆ, ಆಟೋಗಳಲ್ಲಿ ನಿಗದಿತದ ರಕ್ಕಿಂತ ಹೆಚ್ಚಿನದರ ವಸೂಲಿ, ಆಟೋರಿಕ್ಷಾ ಬಾಡಿಗೆ ತಿರಸ್ಕರಿಸಿದ ಬಗ್ಗೆ, ಆಟೋರಿಕ್ಷಾದಲ್ಲಿ ಹೆಚ್ಚಿನ ಶಾಲಾ ಮಕ್ಕಳನ್ನು ಕರೆದೊಯ್ಯುವ ಬಗ್ಗೆ, ಇತರೆ ಸಂಚಾರಿ ಉಲ್ಲಂಘನೆಯಂತಹ 21 ಪ್ರಕರಣಗಳಲ್ಲಿ ಪೊಲೀಸರು ಕ್ರಮಕೈಗೊಳ್ಳಬಹುದಾಗಿದೆ.
ದಂಡ ಸಂಗ್ರಹ:
2017 ರಲ್ಲಿ 26565 ಇಂತಹ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿ 1,17,91,800 ದಂಡದ ರೂಪದಲ್ಲಿ ಸಂಗ್ರಹ ಆಗಿದ್ದರೆ, 2018 ಲ್ಲಿ 32302 ಪ್ರಕರಣಗಳು ದಾಖಲಾಗಿ 1,34,41,190 ದಂಡ ವಸೂಲಿ ಮಾಡಲಾಗಿತ್ತು. ಸದ್ಯ ಆರ್ಥಿಕ ವರ್ಷಕ್ಕೆ ಇನ್ನೂ ಸಮಯವಿದ್ದರೂ 2019ರ ಇವರೆಗೆ 25,210 ಪ್ರಕರಣಗಳು ದಾಖಲಾಗಿ 1,14,92,150 ದಂಡದ ರೂಪದಲ್ಲಿ ವಿಶೇಷವೆಂದರೆ ಕಳೆದೆರಡು ತಿಂಗಳಲ್ಲಿ ಒಟ್ಟು ವಿವಿಧ ಪ್ರಕರಣಗಳಲ್ಲಿ ಸಂಗ್ರಹವಾದ ದಂಡ 50 ಲಕ್ಷ ಸಮೀಪಿಸುತ್ತದೆ. ಒಟ್ಟಾರೆ ಹೊಸ ಕಾಯ್ದೆಯ ಅನುಷ್ಠಾನದಲ್ಲಿ ಇಲಾಖೆ ಪಾರದರ್ಶಕತೆಯನ್ನು ಮುಂದುವರೆಸಿದ್ದೆ ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಸಂಚಾರ ನಿಯಮದ ಜಾಗ್ರತೆಗೆ ಒಂದು ಅರ್ಥ ಬರುತ್ತದೆ ಎಂದರೆ ತಪ್ಪಾಗಲಾರದು.
ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಲೋಕೇಶ ಜಗಲಾಸರ ಅವರು, ಹೊಸ ಮೋಟಾರು ವಾಹನಗಳ ಕಾಯ್ದೆ ಜಾರಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದ ಜಿಲ್ಲೆಯಲ್ಲಿ ಸಾರ್ವಜನಿಕರು ಹೊಂದಿ ಕೊಳ್ಳುತ್ತಿದ್ದು ಬರಲಿರುವ ದಿನಗಳಲ್ಲಿ ಮತ್ತಷ್ಟು ಜಾಗ್ರತೆ ಮೂಡಿಸಿ ಅಪಘಾತಗಳ ಸಂಖ್ಯೆ ಕಡಿಮೆಯಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವ ಉದ್ದೇಶ ಇಲಾಖೆಯದ್ದಾಗಿದೆ ಎಂದು ಹೇಳಿದ್ದಾರೆ.