ಬೆಂಗಳೂರು(ಫೆ.08): ಕೂರಲು ಕುರ್ಚಿ ಇಲ್ಲ, ಗಸ್ತು ತಿರುಗಲು ವಾಹನ, ಠಾಣೆಗೆ ಬೇಕಿರುವ ಸಂಖ್ಯೆಯಷ್ಟುಸಿಬ್ಬಂದಿ ಇಲ್ಲ, ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಕೃತ್ಯ ನಡೆದರೂ ಇನ್‌ಸ್ಪೆಕ್ಟರ್‌ ಸ್ವಂತ ವಾಹನದಲ್ಲೇ ಸ್ಥಳಕ್ಕೆ ಧಾವಿಸಬೇಕು..!

ಇಂತಹದೊಂದು ದುಸ್ಥಿತಿ ಇರುವುದು ರಾಜ್ಯದ ಯಾವುದೋ ಮೂಲೆಯಲ್ಲ. ಬದಲಿಗೆ ಸಿಲಿಕಾನ್‌ ಸಿಟಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ. ಹೌದು, ರಾಮನಗರ ವ್ಯಾಪ್ತಿಗೆ ಸೇರಿದ್ದ ಠಾಣೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಗೆ ಸೇರಿಸಿದರೂ ಅಲ್ಲಿನ ಸಮಸ್ಯೆ ಮಾತ್ರ ಹೇಳತೀರದ್ದಾಗಿದೆ.

ಬೆಂಗಳೂರು: 5 ಸಾವಿರದ ಮೊಬೈಲ್‌ಗೆ ಸ್ನೇಹಿತನ ಕೊಲೆ

ಬ್ಯಾಡರಹಳ್ಳಿ ಠಾಣೆಯನ್ನು ಕಮಿಷನರೇಟ್‌ ವ್ಯಾಪ್ತಿಗೆ ಸೇರಿಸಿ ಸರ್ಕಾರ ಕಳೆದ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿತ್ತಾದರೂ ಪ್ರಕ್ರಿಯೆ ಪೂರ್ಣಗೊಂಡು ಠಾಣೆ ಕಮಿಷನರೇಟ್‌ ವ್ಯಾಪ್ತಿಗೆ ಸಂಪೂರ್ಣವಾಗಿ ಸೇರಿಕೊಂಡಿದ್ದು ಒಂದೂವರೆ ತಿಂಗಳ ಹಿಂದೆ. ಠಾಣೆ ತಮ್ಮ ವ್ಯಾಪ್ತಿಗೆ ಸೇರ್ಪಡೆಯಾದ ಬಳಿಕ ಡಿ.22ರಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಅವರು ಬ್ಯಾಡರಹಳ್ಳಿ ಠಾಣೆಗೆ ಭೇಟಿ ಗೌರವ ವಂದನೆ ಸ್ವೀಕರಿಸಿದ್ದರು. ಆದರೆ ಅವರು ಬಂದು, ಹೋಗಿದ್ದೆ ಆಯಿತೇ ಹೊರತು ಯಾವುದೇ ಸವಲತ್ತು ಮಾತ್ರ ಸಿಕ್ಕಿಲ್ಲ.

ಸಂಕಷ್ಟಕ್ಕೆ ಸಿಲುಕಿದ ನಗರದ ಪ್ರತಿಷ್ಠಿತ ಮಂತ್ರಿಮಾಲ್!

ಕಮಿಷನರೇಟ್‌ ವ್ಯಾಪ್ತಿಗೆ ಸೇರುವ ಮುನ್ನ ಠಾಣೆಯಲ್ಲಿ ಸುಮಾರು 60 ಮಂದಿ ಸಿಬ್ಬಂದಿ ಇದ್ದರು. ಇದೀಗ ಕೇವಲ 40 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪೈಕಿ ಅರ್ಧದಷ್ಟುಸಿಬ್ಬಂದಿ ಎರವಲು ಸೇವೆ ಮೇಲೆ ನಿಯೋಜನೆಗೊಂಡಿದ್ದಾರೆ. ಮಂಜೂರಾತಿಯಾದ 6 ಸಬ್‌ ಇನ್‌ಸ್ಪೆಕ್ಟರ್‌ಗಳಿಗೆ (ಪಿಎಸ್‌ಐ) ಒಂದು ಹುದ್ದೆ, 8 ಸಹಾಯ ಸಬ್‌ ಇನ್‌ಸ್ಪೆಕ್ಟರ್‌ಗೆ ನಾಲ್ಕು, 40 ಕಾನ್‌ಸ್ಟೇಬಲ್‌ಗಳ ಪೈಕಿ ಆರು ಮಂದಿಯನ್ನು ಠಾಣೆಗೆ ನಿಯೋಜಿಸಲಾಗಿದೆ. ಉಳಿದಂತೆ 20 ಕಾನ್‌ಸ್ಟೇಬಲ್‌ಗಳನ್ನು ಎರವಲು ಸೇವೆ ಮೇಲೆ ಕಳುಹಿಸಲಾಗಿದೆ. ಅರ್ಧಕ್ಕೆ ಅರ್ಧದಷ್ಟುಸಿಬ್ಬಂದಿ ಕೊರತೆ ಇದೆ.

ವಾಹನ ಮಾತ್ರವಲ್ಲ, ಕುರ್ಚಿ, ಟೇಬಲೂ ಇಲ್ಲ!

ಬ್ಯಾಡರಹಳ್ಳಿ ಠಾಣೆ ನಗರ ವ್ಯಾಪ್ತಿಗೆ ಸೇರಿದ ಮೇಲೆ ಈ ಹಿಂದೆ ಇನ್‌ಸ್ಪೆಕ್ಟರ್‌ಗೆ ನೀಡಲಾಗಿದ್ದ ಪೊಲೀಸ್‌ ಜೀಪ್‌, ಗಸ್ತು ತಿರಗಲು ನೀಡಲಾಗಿದ್ದ ಎರಡು ಹೊಯ್ಸಳ ವಾಹವನ್ನು ವಾಪಸ್‌ ನೀಡಲಾಗಿದೆ. ಠಾಣಾ ಇನ್‌ಸ್ಪೆಕ್ಟರ್‌ಗೆ ವಾಹನ ಹಾಗೂ ಸಿಬ್ಬಂದಿಗೆ ಗಸ್ತು ವಾಹನ, ಚೀತಾ ವಾಹನ ನೀಡಿಯೇ ಇಲ್ಲ. ಇದರಿಂದ ಇನ್‌ಸ್ಪೆಕ್ಟರ್‌ ಸ್ವಂತ ವಾಹನದಲ್ಲಿ ಯಾವುದೇ ಕೃತ್ಯ ನಡೆದರೂ ಸ್ಥಳಕ್ಕೆ ಧಾವಿಸಬೇಕಾದ ದುಸ್ಥಿತಿ ಇದೆ.

ಕನಿಷ್ಠ ಚೀತಾ ಬೈಕ್‌ ಇಲ್ಲ, ಹಾಗಾಗಿ ಸಿಬ್ಬಂದಿ ಸ್ವಂತ ವಾಹನದಲ್ಲಿ ಗಸ್ತು ತಿರುಗುವ ಸ್ಥಿತಿ ಇದೆ. ಠಾಣೆಯಲ್ಲಿದ್ದ ಎಂಟು ಕಂಪ್ಯೂಟರ್‌ ಪೈಕಿ ನಾಲ್ಕು ಕಂಪ್ಯೂಟರ್‌, ಬಳಕೆ ಮಾಡಲಾಗುತ್ತಿದ್ದ ಯುಪಿಎಸ್‌ಅನ್ನು ಸಹ ಕೊಂಡೊಯ್ದಿದ್ದಾರೆ. ವಿದ್ಯುತ್‌ ಇಲ್ಲದೇ ಹೋದರೆ ಎಫ್‌ಐಆರ್‌ ದಾಖಲಿಸಲು ನೆರೆಯ ಕಾಮಾಕ್ಷಿಪಾಳ್ಯ ಠಾಣೆಗೆ ಹೋಗಬೇಕಾದ ಸ್ಥಿತಿ ಇದೆ ಎಂದು ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

70ನೇ ವರ್ಷದೊಳಗೆ ಒಮ್ಮೆಯಾದ್ರೂ ಸಿಎಂ ಆಗ್ತೀನಿ: ಕತ್ತಿ

70 ಲಕ್ಷ ವೆಚ್ಚದಲ್ಲಿ ಕಮಾಂಡ್‌ ಕಂಟ್ರೋಲ್‌ ಸೆಂಟರ್‌, 28 ಅತ್ಯಾಧುನಿಕ ಕ್ಯಾಮರಾಗಳನ್ನು ಸಾರ್ವಜನಿಕ ರಸ್ತೆ, ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ವಿಪರ್ಯಾಸವೆಂದರೆ ನಿರ್ವಹಣೆ ಇಲ್ಲದೆ, ಕೇವಲ 7 ಕ್ಯಾಮರಾಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

ಬ್ಯಾಡರಹಳ್ಳಿ ಠಾಣೆಗೆ ವಾಹಗಳನ್ನು ಶೀಘ್ರವೇ ನೀಡಲಾಗುವುದು. ನಗರದ ಹಲವು ಠಾಣೆಗಳಿಗೆ ಇನ್ನೂ ಹೆಚ್ಚಿನ ವಾಹನದ ಅಗತ್ಯ ಇದೆ. ಬ್ಯಾಡರಹಳ್ಳಿಗೆ ಠಾಣೆಗೆ ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದ್ದಾರೆ.

-ಎನ್‌.ಲಕ್ಷ್ಮಣ್‌