ಉತ್ತರ ಕನ್ನಡ(ಫೆ.13): ಆರ್ಥಿಕ ಸಂಕಷ್ಟದ ಕಾರಣ ಈ ಬಾರಿ ಬಜೆಟ್‌ನಲ್ಲಿ ಹೊಸ ಕಾಲೇಜುಗಳ ಸ್ಥಾಪನೆ ಅಥವಾ ಹೊಸ ಹುದ್ದೆ ಸೃಷ್ಟಿಗಳ ಘೋಷಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ಸದ್ಯ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಬುಧವಾರ ಹೊನ್ನಾವರದ ಎಸ್‌ಡಿಎಂ ಕಾಲೇಜಿಗೆ ಭೇಟಿ ನೀಡಿದ ಬಳಿಕ ಮಾತನಾಡಿ, ನೆರೆ ಮತ್ತಿತರ ಪ್ರಕೃತಿ ವಿಕೋಪಗಳಿಂದಾಗಿ ಸರ್ಕಾರ ತೊಂದರೆಯಲ್ಲಿದ್ದರೂ ಬಜೆಟ್‌ನಲ್ಲಿ ಶಿಕ್ಷಣಕ್ಕೆ ನೀಡಬೇಕಾದ ಅನುದಾನ ಮುಂದುವರಿಸಲಾಗುವುದು ಎಂದಿದ್ದಾರೆ.

ಆಯಾ ಜಿಲ್ಲೆಯವರೇ ಉಸ್ತುವಾರಿ:

ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಸದ್ಯ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲವಾದರೂ, ಇದ್ದ ವ್ಯವಸ್ಥೆಯನ್ನು ಉತ್ತಮಪಡಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರತಿ ಜಿಲ್ಲೆಗೆ ಆಯಾ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿ ನೇಮಕವಾಗಲಿದ್ದು, ಮುಂದಿನ 3 ವರ್ಷದ 3 ತಿಂಗಳು ಯಾವುದೇ ಅಡ್ಡಿಯಿಲ್ಲದೇ ಸರ್ಕಾರ ಸುಸೂತ್ರವಾಗಿ ಮುನ್ನಡೆಯಲಿದೆ ಎಂದು ಹೇಳಿದರು.