ಮಾಧ್ಯಮಗಳ ಹತ್ತಿಕ್ಕುವ ಕೆಲಸ ಬೇಡ: ಸಂಸದ ಡಾ.ಸುಧಾಕರ್
ಜನಪ್ರತಿನಿಧಿಗಳ ತಪ್ಪು ಒಪ್ಪುಗಳನ್ನು ತಿದ್ದುತ್ತಾ, ವಾಸ್ತವವನ್ನು ವರದಿ ಮಾಡುವುದು ಅವರ ಸ್ವಾತಂತ್ರ್ಯ. ಅವರನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ತಮ್ಮದೇ ಪಕ್ಷದ ಮುಖಂಡರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದರು.
ದಾಬಸ್‌ಪೇಟೆ (ಜ.16): ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅಶೋಕ ಸ್ತಂಭದಲ್ಲಿ ಕಾಣದೇ ಇರುವ ನಾಲ್ಕನೇ ಸಿಂಹದ ರೀತಿ ಇದ್ದು ಜನಪ್ರತಿನಿಧಿಗಳ ತಪ್ಪು ಒಪ್ಪುಗಳನ್ನು ತಿದ್ದುತ್ತಾ, ವಾಸ್ತವವನ್ನು ವರದಿ ಮಾಡುವುದು ಅವರ ಸ್ವಾತಂತ್ರ್ಯ. ಅವರನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ತಮ್ಮದೇ ಪಕ್ಷದ ಮುಖಂಡರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದರು.
ಸೋಂಪುರ ಹೋಬಳಿಯ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ 20 ವರ್ಷಗಳ ರಾಜಕೀಯ ಜೀವನದಲ್ಲಿ ಮಾಧ್ಯಮಗಳ ಜೊತೆ ನಾನು ಅತ್ಯಂತ ಸ್ನೇಹಪೂರ್ವಕವಾಗಿ, ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇನೆ. ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುತ್ತೇನೆ ಕೂಡ. ಅದೇ ರೀತಿ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ನಮ್ಮ ಇಷ್ಟದಂತೆ ಪತ್ರಕರ್ತರು ಬರೆಯಬೇಕು ಎಂದು ಹೇಳುವುದು ಮಹಾತಪ್ಪು. ಸಮಾಜಕ್ಕೆ ಅನುಗುಣವಾಗಿ ಸತ್ಯಾನ್ವೇಷಣೆ ಮಾಡಿ ಪೂರಕ ವರದಿ ಮಾಡುವುದು,
ನಮ್ಮ ತಪ್ಪುಗಳನ್ನು ತಿದ್ದುವ ಕೆಲಸ ಮಾಡುವುದು ಪತ್ರಕರ್ತರ ಕರ್ತವ್ಯ. ಅದನ್ನು ಹತ್ತಿಕ್ಕುವ ಕೆಲಸ ಒಪ್ಪುವಂತಹದ್ದಲ್ಲ ಎಂದು ಹೇಳಿದರು. ಆದಷ್ಟು ಬೇಗ ಕಾಮಗಾರಿ ಆರಂಭ:ರಾಷ್ಟ್ರೀಯ ಹೆದ್ದಾರಿ-48ರ ಕಾಮಗಾರಿ ನಾಲ್ಕು ದಿನಗಳ ಒಳಗೆ ಆರಂಭಿಸಲಾಗುವುದು.ಅದೇ ರೀತಿ ರಿಂಗ್ ರಸ್ತೆ ಕುರಿತಂತೆ ಸಾರಿಗೆ ಸಚಿವರು ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದ ನಿರಂತರ ಸಂಪರ್ಕದಲ್ಲಿದ್ದು ಆದಷ್ಟು ಬೇಗ ಕಾಮಗಾರಿ ಶುರು ಮಾಡಲು ಪ್ರಯತ್ನ ನಡೆದಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬಾಣಂತಿಯರ ಸಾವು: ಕೇಂದ್ರಕ್ಕೆ ಸಂಸದ ಡಾ.ಸುಧಾಕರ್ ಪತ್ರ
ಶೀಘ್ರದಲ್ಲೇ ಭೂ ಪರಿಹಾರ ಬಿಡುಗಡೆ: ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ ಬಗ್ಗೆ ಈಗಾಗಲೇ ಚರ್ಚೆಯಾಗಿದ್ದು ಟೆಂಡರ್ ಕೂಡ ಆಗಿದೆ. ಮುಂದಿನ ತಿಂಗಳು ಬಜೆಟ್ ನಲ್ಲಿ ಪ್ರಸ್ತಾಪಿಸಿ ನಂತರ ಭೂ ಮಾಲೀಕರಿಗೆ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುವುದು. ಆ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದರು. ಈ ವೇಳೆ ಸಂಸದರಿಗೆ ಬಿಜೆಪಿ ಮುಖಂಡ ಸಪ್ತಗಿರಿ ಶಂಕರ್ ನಾಯಕ್, ತಾಪಂ ಮಾಜಿ ಅಧ್ಯಕ್ಷ ಪುಟ್ಟಗಂಗಯ್ಯ, ಎಪಿಎಂಸಿ ಮಾಜಿ ನಿರ್ದೇಶಕ ಗಂಗಣ್ಣ, ಜೆಡಿಎಸ್ ಮುಖಂಡ ಭವಾನಿ ಶಂಕರ್ ಭೈರೇಗೌಡ್ರು, ಬಮೂಲ್ ರಮೇಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರಾಜಮ್ಮ, ತಾಲೂಕು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವೇದಾವತಿ, ಸಾಮಾಜಿಕ ಜಾಲತಾಣದ ಸಂಚಾಲಕಿ ಶೀಲಾ ಮತ್ತಿತರು ಉಪಸ್ಥಿತರಿದ್ದರು.