ಕ್ಷೇತ್ರದಲ್ಲಿ ಭಯದ ವಾತಾವರಣದಲ್ಲಿ ನಾನಿಲ್ಲ. ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ನನಗಿರುವಾಗ ನಾನು ಚುನಾವಣೆಗೆ ನಿಲ್ಲಲು ಭಯಪಡುವ ಅಗತ್ಯವಿಲ್ಲ ಎಂದು ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.

 ಕೆ.ಆರ್‌.ಪೇಟೆ : ಕ್ಷೇತ್ರದಲ್ಲಿ ಭಯದ ವಾತಾವರಣದಲ್ಲಿ ನಾನಿಲ್ಲ. ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ನನಗಿರುವಾಗ ನಾನು ಚುನಾವಣೆಗೆ ನಿಲ್ಲಲು ಭಯಪಡುವ ಅಗತ್ಯವಿಲ್ಲ ಎಂದು ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.

ಪಟ್ಟಣದ ಬಸವೇಶ್ವರ ನಗರದ ತಮ್ಮ ನಿವಾಸದ ಆವರಣದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಚುನಾವಣೆಗೆ ನಿಲ್ಲಬೇಕೋ ಬೇಡವೋ ಎನ್ನುವುದನ್ನು ನಿಮ್ಮ ತೀರ್ಮಾನಕ್ಕೆ ಬಿಡುತ್ತಿದ್ದೇನೆ. ಕ್ಷೇತ್ರದ ಶಾಸಕನಾಗಿ ಮತ್ತು ಸಚಿವನಾಗಿ ಜನಪರ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದರು.

ಕ್ಷೇತ್ರಕ್ಕೆ 1800ಕೋಟಿ ಅನುದಾನ ತಂದು ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಿ ರೈತರು ಮತ್ತು ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸಲು ಶ್ರಮಿಸಿದ್ದೇನೆ. ನೀವೆಲ್ಲ ಇರುವಾಗ ನನಗೆ ಚುನಾವಣಾ ಭಯವಿಲ್ಲ. ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ನೀವೆಲ್ಲಾ ಮತ್ತೊಮ್ಮೆ ಕೈಜೋಡಿಸಿದರೆ ಚುನಾವಣೆ ಗೆಲ್ಲುವುದು ದೊಡ್ಡದಲ್ಲ ಎಂದು ಹೇಳಿದರು.

ಮಂಡ್ಯ ಜಿಲ್ಲೆಯನ್ನು ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಬಿಜೆಪಿ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಯಡಿಯೂರಪ್ಪ ನನ್ನ ತಂದೆ ಸಮಾನ. ನಮ್ಮ ಮೇಲೆ ಅವರು ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಕೆ.ಆರ್‌. ಪೇಟೆ ಕ್ಷೇತ್ರದ ಪ್ರಚಾರಕ್ಕೆ ವಿಜಯೇಂದ್ರ, ಯಡಿಯೂರಪ್ಪ ಬರ್ತಾರೆ. ಕರ್ನಾಟಕವನ್ನೆ ಸುತ್ತುತ್ತಾರೆ, ಕೆ.ಆರ್‌. ಪೇಟೆ ಬಿಡ್ತಾರಾ.? ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವವರೆಗೂ ಯಡಿಯೂರಪ್ಪನವರು ಸುಮ್ಮನೆ ಕೂರಲ್ಲ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ಕೊಂಡ್ರೆ ಅದು ತಪ್ಪು ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ 3 ರಿಂದ 4 ಸ್ಥಾನಗಳನ್ನು ಬಿಜೆಪಿ ಪಕ್ಷವು ಪಡೆಯುತ್ತದೆ. ಮುಂದೆಯೂ ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಆಗ ಮಂಡ್ಯ ಜಿಲ್ಲೆಯನ್ನು ಸಮಗ್ರ ಅಭಿವೃದ್ದಿಪಡಿಸಲು ನಾವೆಲ್ಲರೂ ದುಡಿಯುತ್ತೇವೆ ಎಂದು ನಾರಾಯಣಗೌಡ ತಿಳಿಸಿದರು.

ಸಭೆಯಲ್ಲಿ ಮುಡಾ ಅಧ್ಯಕ್ಷ ಅಧ್ಯಕ್ಷ ಕೆ.ಶ್ರೀನಿವಾಸ್‌, ಜಿಪಂ ಮಾಜಿ ಉಪಾಧ್ಯಕ್ಷರಾದ ಎಸ್‌. ಅಂಬರೀಶ್‌, ಬೇಲದಕೆರೆ ಪಾಪೇಗೌಡ, ಹಾಪ್‌ಕಾಮ್ಸ… ಅಧ್ಯಕ್ಷ ಕೆ.ಜಿ.ತಮಣ್ಣ, ಗೂಡೆಹೊಸಹಳ್ಳಿ ಜವರಾಯಿಗೌಡ, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷರಾದ ಕೊಡಗಹಳ್ಳಿ ಜಯರಾಮೇಗೌಡ, ಅಘಲಯ ಶ್ರೀಧರ್‌, ತಾಪಂ ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮೇಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. 

KR ಪೇಟೆಯಿಂದಲೇ ಸ್ಪರ್ಧೆ

ಬೆಂಗಳೂರು (ಮಾ.23): ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಮಂಡ್ಯದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ್ದ ಸಚಿವ ನಾರಾಯಣ ಗೌಡ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರುವ ಸುಳಿವು ನೀಡಿದ್ದ ನಾರಾಯಣಗೌಡ ಇದೀಗ ಮತ್ತೆ ಬಿಜೆಯಲ್ಲೇ ಇರಲಿದ್ದಾರೆ. ಹೌದು! ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ನಾರಾಯಣಗೌಡರು ಕೆ.ಆರ್.ಪೇಟೆಯಿಂದ ಬಿಜೆಪಿಯಿಂದಲ್ಲೇ ಸ್ಪರ್ಧೆ ಮಾಡ್ತಾರೆ. 

ಕಳೆದ ಭಾನುವಾರ ದೆಹಲಿಗೆ ತೆರಳಿ ಅಮಿತ್ ಶಾ ಮತ್ತು ಬಿ.ಎಲ್.ಸಂತೋಷ್ ಜೊತೆ ನಾರಾಯಣ ಗೌಡರು ಮಾತನಾಡಿಕೊಂಡು ಬಂದಿದ್ದಾರೆ. ಅಮಿತ್ ಶಾ ಭೇಟಿಯಾದ ಬಳಿಕ ನಿನ್ನೆ (ಬುಧುವಾರ) ಬಿ.ಎಸ್.ಯಡಿಯೂರಪ್ಪನವರನ್ನೂ ಸಹ ನಾರಾಯಣ ಗೌಡ ಭೇಟಿಯಾಗಿದ್ದು, ಯುಗಾದಿ ಶುಭಾಶಯ ಹೇಳಿ ಬಂದಿದ್ದಾರೆ. ಇಂದು ತಮ್ಮ ಇಲಾಖೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆ ನಾರಾಯಣ ಗೌಡ ಪಾಲ್ಗೊಳ್ಳುತ್ತಿದ್ದಾರೆ.

ಕಲಬುರಗಿ ಪಾಲಿಕೆ ಮೇಯರ್ ಎಲೆಕ್ಷನ್‌ಗೆ ಬರ್ತಾರಾ ಎಐಸಿಸಿ ಅಧ್ಯಕ್ಷ: ಕಾಂಗ್ರೆಸ್ ಗೆಲ್ಲಬೇಕಾದ್ರೆ ಖರ್ಗೆ ಬರಲೇಬೇಕು!

ನಾರಾಯಣಗೌಡ, ಸೋಮಣ್ಣ ಬಿಜೆಪಿ ಬಿಡಲ್ಲ: ಸಚಿವರಾದ ಕೆ.ಸಿ. ನಾರಾಯಣಗೌಡ, ವಿ. ಸೋಮಣ್ಣ ಅವರು ಬಿಜೆಪಿಯನ್ನು ತೊರೆಯುವುದಿಲ್ಲ. ಅಲ್ಲದೇ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರ ಅಲೆ ರಾಜ್ಯದಲ್ಲಿ ವ್ಯಾಪಕವಾಗಿದೆ. ವಿರೋಧ ಪಕ್ಷದವರು ಬಿಜೆಪಿ ಬಗ್ಗೆ ಏನೇ ಅಪಪ್ರಚಾರ ಮಾಡಿದರೂ ರಾಜ್ಯದ ಜನ ನಂಬದೇ ಬಿಜೆಪಿ ಪರ ನಿಲ್ಲುತ್ತಾರೆ ಎಂದರು.