ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತರಾಗಿ ಅರ್ಜಿ ಸಲ್ಲಿಸಿರುವ ಆರು ಮಂದಿಯಲ್ಲಿ ವರಿಷ್ಠರು ಯಾರಿಗೆ ಟಿಕೆಚ್‌ ನೀಡಿದರೂ ನಾವೆಲ್ಲ ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ನಾಗೇಂದ್ರಕುಮಾರ್‌ ತಿಳಿಸಿದರು.

ಕೆ.ಆರ್‌.ಪೇಟೆ (ಡಿ.05): ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತರಾಗಿ ಅರ್ಜಿ ಸಲ್ಲಿಸಿರುವ ಆರು ಮಂದಿಯಲ್ಲಿ ವರಿಷ್ಠರು ಯಾರಿಗೆ ಟಿಕೆಚ್‌ ನೀಡಿದರೂ ನಾವೆಲ್ಲ ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ನಾಗೇಂದ್ರಕುಮಾರ್‌ ತಿಳಿಸಿದರು.

ಪಟ್ಟಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ (Congress) ಟಿಕೆಟ್‌ಗಾಗಿ ನನ್ನನ್ನು ಸೇರಿದಂತೆ ಕ್ಷೇತ್ರದಿಂದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್‌, ಬಿ.ಪ್ರಕಾಶ್‌, ಸಮಾಜ ಸೇವಕ ವಿಜಯ ರಾಮೇಗೌಡ, ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಮತ್ತು ಕಿಕ್ಕೇರಿ ಸುರೇಶ್‌ ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಈ ಜನರನ್ನು ಹೊರತು ಪಡಿಸಿ 7ನೇ ವ್ಯಕ್ತಿಯನ್ನು ಅನ್ಯ ಪಕ್ಷದಿಂದ ಕರೆತಂದು ಟಿಕೆಚ್‌ ನೀಡುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ ಎಂದು ಪರೋಕ್ಷವಾಗಿ ಕೆ.ಸಿ.ನಾರಾಯಣಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರೂ (MLA) ಆದ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ ಎನ್ನುವ ಗುಲ್ಲು ಕ್ಷೇತ್ರದಾದ್ಯಂತ ಹರಿದಾಡುತ್ತಿದೆ. ಕೆಲ ಬಿಜೆಪಿಗರೂ ನಾರಾಯಣಗೌಡರ ಪಕ್ಷಾಂತರ ಬಗ್ಗೆ ಮಾತನಾಡುತ್ತಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಗೆ ಕೆ.ಸಿ.ನಾರಾಯಣಗೌಡ ಬಂದರೆ ನಮ್ಮ ಪ್ರತಿರೋಧವಿಲ್ಲ ಎಂದರು.

7ನೇ ಅಭ್ಯರ್ಥಿ ಪಕ್ಷಕ್ಕೆ ಅಗತ್ಯವಿಲ್ಲ: 5 ವರ್ಷಗಳ ಕಾಲ ಅವರು ಪಕ್ಷದ ಸೇವೆ ಮಾಡಲಿ. ಆದರೆ, ಪಕ್ಷದ ಟಿಕೆಟ್ ಬಯಸಿ ಲಾಭಕ್ಕಾಗಿ ಬಂದರೆ ಆರು ಜನ ಟಿಕೆಟ್ ಆಕ್ಷಾಂಕ್ಷಿತರೂ ಅದನ್ನು ವಿರೋಧಿಸುತ್ತೇವೆ. ಈಗಾಗಲೇ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ನೇತೃತ್ವದಲ್ಲಿ ಆರು ಜನ ಟಿಕೆಟ್ ಆಕಾಂಕ್ಷಿತರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ 7ನೇ ಅಭ್ಯರ್ಥಿ ಅಗತ್ಯತೆ ಪಕ್ಷಕ್ಕಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದೇವೆ ಎಂದು ತಿಳಿಸಿದರು.

ನನಗೆ ಹೈಕಮಾಂಡ್‌ ಟಿಕೆಟ್‌ ನೀಡಬೇಕು: ನನ್ನ ಸೇವೆಯನ್ನು ಗುರುತಿಸಿ ಅಹಿಂದ ವರ್ಗಕ್ಕೆ ಸೇರಿದ ನನಗೆ ಪಕ್ಷದ ಹೈಕಮಾಂಡ್‌ ಟಿಕೆಚ್‌ ನೀಡಬೇಕು. ತಾಲೂಕಿನ ಎಲ್ಲಾ ವರ್ಗಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ನನಗೆ ನನ್ನದೇ ಆದ ಅಭಿಮಾನಿಗಳ ಬಳಗವಿದೆ. ಪಕ್ಷವು ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಚ್‌ ನೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಟಿಕೆಚ್‌ ಕೈತಪ್ಪಿದರೂ ವಿಚಲಿತನಾಗುವುದಿಲ್ಲ. ಪಕ್ಷದ ಗೆಲುವಿಗೆ ದುಡಿಯುವುದಾಗಿ ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಮುಖಂಡರುಗಳಾದ ಡಾ.ರಾಮಕೃಷ್ಣೇಗೌಡ, ಮೂಡನಹಳ್ಳಿ ನಾಗೇಂದ್ರ, ಮಡುವಿನಕೋಡಿ ಕಾಂತರಾಜು, ಪುರಸಭಾ ಸದಸ್ಯ ಕೆ.ಆರ್‌.ರವೀಂದ್ರಬಾಬು, ರಾಜಯ್ಯ, ಸಲ್ಲು, ಮಾಧವ ಪ್ರಸಾದ್‌, ಅಕ್ಕಿಮಂಜು, ಅಕ್ಕಿಹೆಬ್ಬಾಳು ವೆಂಕಟಪ್ಪ, ಫಯಾಜ…, ಕೋಡಿಮಾರನಹಳ್ಳಿ ಚಿಕ್ಕೇಗೌಡ ಸೇರಿದಂತೆ ಹಲವರು ಇದ್ದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಾಬು

 ಕೆ.ಆರ್‌. ನಗರ (ನ.29): ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಮತ್ತು ಒಕ್ಕಲಿಗ ಸಮಾಜದ ಪ್ರಭಾವಿ ನಾಯಕರು ಆದ ಬಾಬು ಹನುಮಾನ್‌ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ಬೆಂಗಳೂರಿನ (Bengaluru) ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸಚಿವರಾದ ಅಶ್ವತ್‌ ನಾರಾಯಣ್, ಕೆ. ಗೋಪಾಲಯ್ಯ, ನಾರಾಯಣಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ್‌ ಸುರಾನ ಮತ್ತು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಅವರ ಸಮ್ಮುಖದಲ್ಲಿ ಬಿಜೆಪಿ (bjp) ಬಾವುಟ ಹಿಡಿಯುವ ಮೂಲಕ ಪಕ್ಷಕ್ಕೆ ಪಾದಾರ್ಪಣೆ ಮಾಡಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್‌ ಸುರಾನ ಮಾತನಾಡಿ, ಕಳೆದ 25 ವರ್ಷಗಳ ಹಿಂದೆಯೇ ಬಾಬು ಹನುಮಾನ್‌ ಅವರ ತಂದೆ ಎಸ್‌.ಎ. ಗೋವಿಂದರಾಜು ಕೆ.ಆರ್‌. ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ದಾಖಲೆಯ 26 ಸಾವಿರ ಮತಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದರು ಎಂದು ಶ್ಲಾಘಿಸಿದರು.

ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬಾಬು ಹನುಮಾನ್‌ ಅವರು ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಸೇರಿ ಸಂಘಟನೆ ಮಾಡುವುದರೊಂದಿಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಗೆರೆ ದಾಟಲು ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.

ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ… ಮಾತನಾಡಿ, ಬಾಬು ಹನುಮಾನ್‌ ಅವರ ಸೇರ್ಪಡೆಯಿಂದ ಕೆ.ಆರ್‌. ನಗರ ಕ್ಷೇತ್ರದಲ್ಲಿ ಪಕ್ಷವು ಮತ್ತಷ್ಟುಬಲಶಾಲಿಯಾಗಲಿದ್ದು, ಸಂಘಟನೆಯ ವಿಚಾರದಲ್ಲಿ ನಾವು ಅವರಿಗೆ ಎಲ್ಲಾ ಸಹಕಾರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.

ಸಚಿವರಾದ ಕೆ. ಗೋಪಾಲಯ್ಯ,ಕೆ.ಸಿ. ನಾರಾಯಣಗೌಡ ಮತ್ತು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಅವರು ಮಾತನಾಡಿ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ಬಾಬು ಹನುಮಾನ್‌ ಅವರನ್ನು ಸ್ವಾಗತಿಸಿ ಎಲ್ಲರೊಂದಿಗೂ ನಿರಂತರ ಸಂಪರ್ಕ ಇರಿಸಿಕೊಂಡು ಉತ್ತಮ ಸಂಘಟನೆ ಮಾಡಬೇಕೆಂದು ಸಲಹೆ ನೀಡಿದರು.

ಪಕ್ಷಕ್ಕೆ ಸೇರ್ಪಡೆಯಾದ ನಂತರ ವೇದಿಕೆಯಲ್ಲಿ ಮಾತನಾಡಿದ ಬಾಬು ಹನುಮಾನ್‌ ನಮ್ಮ ತಂದೆ ಎಸ್‌.ಎ. ಗೋವಿಂದರಾಜು ಅವರು ಎರಡು ದಶಕಗಳ ಹಿಂದೆಯೇ ಕೆ.ಆರ್‌. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಚಾಪೂ ಮೂಡಿಸಿದ್ದರು, ಹಾಗಾಗಿ ನಾನು ಸಹ ಇಂದು ಮಾತೃ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಂಘಟನೆ ಮಾಡುತ್ತೇನೆ ಎಂದರು. ನಗರ ಬಿಜೆಪಿ ಅಧ್ಯಕ್ಷ ಯು. ಕೃಷ್ಣಭಟ್‌, ಜಿಲ್ಲಾ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮೇಲೂರು ಮಂಜುನಾಥ್‌, ಪುರಸಭೆ ಸದಸ್ಯರಾದ ರಂಗಸ್ವಾಮಿ, ನಂಜುಂಡ, ಬಿಜೆಪಿ ಮುಖಂಡರಾದ ತಂದ್ರೆ ಪುಟ್ಟಸ್ವಾಮಿ, ಸಾ.ರಾ. ರಮೇಶ್‌, ದರ್ಶನ್‌ ಮತ್ತಿತರರು ಬೆಂಗಳೂರಿನ ಕಚೇರಿಯ ಬಳಿ ಬಾಬು ಹನುಮಾನ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಸನ್ಮಾನಿಸಿದರು.