ಮಂಗಳೂರು(ಜ.29): ಮಂಗಳೂರಿನಲ್ಲಿ ಎನ್‌ಆರ್‌ಸಿ, ಸಿಎಎ ಪರ ಸಮಾವೇಶವನ್ನು ಸರ್ಕಾರವೇ ಆಯೋಜಿಸಿದೆ. ಸರ್ಕಾರವೇ ಕಾರ್ಯಕ್ರಮ ಆಯೋಜಿಸುವಾಗ ಅಲ್ಲಿ ಭಾಗವಹಿಸಿದ್ದ ಯಾರೊಬ್ಬರೂ ರಾಷ್ಟ್ರಧ್ವಜ ಹಿಡಿದಿಲ್ಲ. ಇದರ ಉದ್ದೇಶ ಏನು? ಅವರಿಗೆ ಇದನ್ನು ಯಾರೂ ಕಲಿಸಲಿಲ್ಲವಾ? ಕೇವಲ ಬಾಯಲ್ಲಿ ಮಾತ್ರ ದೇಶಪ್ರೇಮವೇ ಎಂದು ಶಾಸಕ ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಮಂಗಳೂರಿಗೆ ಬಂದು ಪೌರತ್ವ ಕಾನೂನಿನಿಂದ ಯಾರಿಗೂ ತೊಂದರೆ ಇಲ್ಲ. ಭಯಪಡಬೇಡಿ ಎಂದಿದ್ದಾರೆ. ಜನತೆ ಭಯಪಡುವ ಪರಿಸ್ಥಿತಿ ಏಕೆ ಉದ್ಭವವಾಯಿತು ಎನ್ನುವುದಕ್ಕೆ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದ ಖಾದರ್‌, ಯಾವುದೇ ಕಾನೂನಿನಿಂದ ಜನರನ್ನು ಭಯಪಡಿಸಲು ಮುಂದಾಗಬೇಡಿ ಎಂದಿದ್ದಾರೆ.

ನನ್ನ ತಲೆ ತೆಗೆದ ಮಾತ್ರಕ್ಕೆ ಹೋರಾಟ ನಿಲ್ಲಲ್ಲ:

ಪೌರತ್ವ ಪರ ಸಮಾವೇಶದ ಸಂದರ್ಭ ತಮ್ಮ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಯು.ಟಿ. ಖಾದರ್‌, ಕೆಲವರಿಗೆ ಪೌರತ್ವ ಕಾಯ್ದೆ ಏನು ಎಂದೇ ತಿಳಿದಿಲ್ಲ. ಅವರಿಗೆ ಕಾಯ್ದೆ ಕುರಿತು ನಿಜ ವಿಚಾರ ಗೊತ್ತಾದರೆ ಅದನ್ನು ಜಾರಿಗೊಳಿಸಿದವರ ವಿರುದ್ಧವೇ ಘೋಷಣೆ ಕೂಗುತ್ತಾರೆ ಎಂದಿದ್ದಾರೆ.

ಅವಹೇಳನಕಾರಿ ಘೋಷಣೆ ಕೂಗಿದವರ ವಿರುದ್ಧ ಕೇಸ್‌ ಹಾಕಬಹುದು. ಆದರೆ ಅವರ ಮನೆಯಲ್ಲಿ ವಯಸ್ಸಾದ ತಾಯಿಯನ್ನು ನೋಡುವವರು ಯಾರು ಎನ್ನುವ ಕನಿಕರ ನನ್ನಲ್ಲಿದೆ. ‘ತಲೆಯನ್ನೂ ತೆಗೆಯುತ್ತೇವೆ, ಕೈಕಾಲು ತೆಗೆಯುತ್ತೇವೆ’ ಎಂದಿದ್ದಾರೆ. ತಲೆಯನ್ನೇ ತೆಗೆದ ಮೇಲೆ ಕೈ-ಕಾಲು ತೆಗೆಯುವ ಸನ್ನಿವೇಶ ಯಾಕೆ ಉದ್ಭವಿಸುತ್ತದೆ? ನನ್ನ ತಲೆ ತೆಗೆದ ಮಾತ್ರಕ್ಕೆ ಎನ್‌ಆರ್‌ಸಿ ವಿರುದ್ಧದ ಹೋರಾಟ ನಿಲ್ಲುವುದಿಲ್ಲ. ನನ್ನ ತಲೆ ತೆಗೆದು ಸಂತೋಷ ಆಗುವುದಾದರೆ ಇಷ್ಟೆಲ್ಲಾ ಬೊಬ್ಬೆ ಏಕೆ? ಎಲ್ಲಿಗೆ ಬರಬೇಕು ಹೇಳಿ ಅಲ್ಲಿಗೇ ಬರುತ್ತೇನೆ ಎಂದಿದ್ದಾರೆ.

ಆದಿತ್ಯರಾವ್‌ಗೆ ಟಿಕೆಟ್, ಬಿಜೆಪಿ ಅಭ್ಯರ್ಥಿಯಾಗ್ತಾನಾ ಬಾಂಬರ್..?

ನನ್ನ ವಿರುದ್ಧ ಘೋಷಣೆ ಕೂಗಿದವರು ಯಾರೂ ನನ್ನ ಕ್ಷೇತ್ರದವರಲ್ಲ. ದಕ್ಷಿಣ ಕನ್ನಡದವರೂ ಅಲ್ಲ. ನಮ್ಮ ಜಿಲ್ಲೆಯವರು ಈ ಮಟ್ಟಕ್ಕಿಳಿಯಲ್ಲ ಎಂದು ಹೇಳಿದ ಖಾದರ್‌, ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಚರ್ಚಿಸಲು ಎಷ್ಟೋ ವಿಚಾರಗಳಿವೆ. ಮುಂದೆಯೂ ಏನೇನೋ ಕೇಳಬೇಕಾಗಬಹುದು. ಕೇವಲ ಶೇ.5ರಷ್ಟುಜನ ಬಿಟ್ಟರೆ ಶೇ.95ರಷ್ಟುಮಂದಿ ನನಗೆ ಒಳ್ಳೆಯದಾಗಲಿ ಎಂದೇ ಪ್ರಾರ್ಥನೆ ಮಾಡುತ್ತಿದ್ದಾರೆ. ಪೊಳ್ಳು ಬೆದರಿಕೆಗೆ ಹೆದರಲ್ಲ ಎಂದು ಖಾದರ್‌ ಹೇಳಿದರು.