Asianet Suvarna News Asianet Suvarna News

ಮಠಾಧೀಶರು ರಾಜಕೀಯಕ್ಕೆ ಬರುವುದು ಅವರ ವೈಯಕ್ತಿಕ: ಸಚಿವ ಅಶೋಕ್‌

ಮಠಾಧೀಶರು ರಾಜಕಾರಣಕ್ಕೆ ಬರುವುದು, ಬಿಡುವುದು ಅವರ ವೈಯಕ್ತಿಕ ವಿಚಾರ. ಆದರೆ, ರಾಜ್ಯದಲ್ಲಿ ಅಂತಹ ವಾತಾವರಣವಿಲ್ಲ. ಅದನ್ನು ಇಲ್ಲಿನ ಜನರೂ ಒಪ್ಪುವುದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್ ಹೇಳಿದ್ದಾರೆ. 

no discussion about seers contesting to election minister r ashok gvd
Author
First Published Feb 27, 2023, 3:01 PM IST

ಹುಬ್ಬಳ್ಳಿ (ಫೆ.27): ಮಠಾಧೀಶರು ರಾಜಕಾರಣಕ್ಕೆ ಬರುವುದು, ಬಿಡುವುದು ಅವರ ವೈಯಕ್ತಿಕ ವಿಚಾರ. ಆದರೆ, ರಾಜ್ಯದಲ್ಲಿ ಅಂತಹ ವಾತಾವರಣವಿಲ್ಲ. ಅದನ್ನು ಇಲ್ಲಿನ ಜನರೂ ಒಪ್ಪುವುದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್ ಹೇಳಿದ್ದಾರೆ. ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಾಧೀಶರು ರಾಜಕೀಯಕ್ಕೆ ಬರಲು ಇಲ್ಲಿನ ಪರಿಸ್ಥಿತಿ ಕೂಡ ಹೊಂದಾಣಿಕೆ ಆಗಬೇಕು. ಮಠಾಧೀಶರು ಯಾರು ದೊಡ್ಡ ಸಂಖ್ಯೆಯಲ್ಲಿ ಬಂದಿಲ್ಲ. ದೇಶದಲ್ಲಿ ಯೋಗಿ ಆದಿತ್ಯನಾಥ, ಉಮಾ ಭಾರತಿ ಅಂತಹವರನ್ನು ಬಿಟ್ಟರೆ ಯಾರು ಬಂದಿಲ್ಲ ಎಂದರು.

ರಾಜಕಾರಣಕ್ಕೆ ಬಂದ ಮೇಲೆ ರಾಜಕೀಯ ಪಕ್ಷಗಳನ್ನು ಟೀಕೆ ಮಾಡಬೇಕಾಗುತ್ತದೆ. ಸ್ವಾಮಿಗಳಿಗೆ ಸಮಸ್ಯೆ ಉದ್ಭವಿಸುತ್ತವೆ. ಅಲ್ಲದೇ ಯಾವುದೇ ಒಂದು ಜಾತಿಗೆ ಮಠಾಧೀಶರು ಸೀಮಿತಗೊಳ್ಳಲು ಆಗುವುದಿಲ್ಲ. ಮಠಾಧೀಶರು ಎಂದರೆ ಕಾವಿ ಬಟ್ಟೆಹಾಕಿಕೊಂಡ ಮೇಲೆ ಎಲ್ಲ ಜನರನ್ನು ಪ್ರೀತಿ ಮಾಡಬೇಕು, ಸಮಾನವಾಗಿ ಕಾಣಬೇಕು. ಹೀಗಾಗಿ, ಈ ಎಲ್ಲ ಕಾರಣದಿಂದ ರಾಜಕೀಯಕ್ಕೆ ಸೂಕ್ತ ಆಗುವ ವ್ಯಕ್ತಿಗಳು ಬರಬೇಕು. ಹೊರತು ಎಲ್ಲರೂ ಬರಲು ಸಾಧ್ಯವಿಲ್ಲ ಎಂದು ಹೇಳಿದರು. 

ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ: ಸಚಿವ ಅಶೋಕ್‌ ವ್ಯಂಗ್ಯ

ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಇರುವ ಮಠಾಧೀಶರು ಯೋಗಿ ಆದಿತ್ಯನಾಥ, ಉಮಾ ಭಾರತಿ ಅಂತಹವರ ರೀತಿಯಲ್ಲಿ ಧೈರ್ಯವಾಗಿ ರಾಜಕಾರಣದಲ್ಲಿ ನಿಲ್ಲುವ ಅಭಿಲಾಷೆಯಿಂದ ರಾಜಕಾರಣಕ್ಕೆ ಬರಲು ಪ್ರಯತ್ನ ಮಾಡಬಹುದು. ಅದು ರಾಜಕೀಯ ಪಕ್ಷಗಳ ಮೇಲೆ ಅವಲಂಬನೆ ಆಗಿರುತ್ತದೆ. ಆ ದೃಷ್ಟಿಯಿಂದ ಮಠಾಧೀಶರು ನಮ್ಮನ್ನು ಸಂಪರ್ಕ ಮಾಡಿಲ್ಲ. ಬರುವುದು, ಬಿಡುವುದು ಅವರ ವೈಯಕ್ತಿಕ ವಿಚಾರವಾಗಿದೆ ಎಂದರು. ಈಗಾಗಲೇ ಮಠಾಧೀಶರು ರಾಜಕೀಯಕ್ಕೆ ಬರುವ ವಿಚಾರವಾಗಿ ಪರ, ವಿರೋಧವಾಗಿ ಬಹಳಷ್ಟು ಜನರು ಮಾತನಾಡಿದ್ದಾರೆ. ನಾನು ಅವರ ಪರ ಅಥವಾ ವಿರೋಧವಾಗಿಯೂ ಇಲ್ಲ ಎಂದರು.

ಗ್ರಾಮ ವಾಸ್ತವ್ಯದ ನೆನಪು ಸದಾ ಅಮರ: ಗ್ರಾಮ ವಾಸ್ತವ್ಯ ಕಾರ್ಯಕ್ರಮ ಒಂದು ಅಪರೂಪದ ಕ್ಷಣ. ಜನರ ಜೊತೆ ಬೆರೆವುದು, ಸರಕಾರದ ಸವಲತ್ತುಗಳನ್ನು ಕೊಡಿಸುವುದು, ಪ್ರೀತಿ, ವಿಶ್ವಾಸ ಕೇವಲ ಉದ್ಘಾಟನೆ ಮಾಡಿ ಹೋದರೆ ಸಿಗುವುದಿಲ್ಲ. ಇಲ್ಲಿಯೇ ಅವರ ಜೊತೆ ಇದ್ದಾಗ ಜನರ ಪ್ರೀತಿ, ವಿಶ್ವಾಸ ನಂಬಿಕೆ ವೃದ್ಧಿಯಾಗುತ್ತದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು. ಭಾನುವಾರ ಬೆಳಗಿನ ಉಪಾಹಾರ ಬಳಿಕ ಮಾಧ್ಯಮದರ ಜೊತೆ ಮಾತನಾಡಿದ ಅವರು, ಪ್ರತಿಯೊಬ್ಬ ರಾಜಕಾರಣಿ ಈ ರೀತಿಯ ಕಾರ್ಯಕ್ರಮ ಮಾಡಬೇಕು. ಜನಕ್ಕೆ ಹತ್ತಿರ ಆಗಬೇಕು. ನಮ್ಮನ್ನು ಆಯ್ಕೆ ಮಾಡುವ ಜನಗಳ ಜೊತೆ ಕಷ್ಟಸುಖದಲ್ಲಿ ನಾವೂ ಇದ್ದೀವಿ ಎನ್ನುವ ಭಾವನೆಯನ್ನು ಬೆಳೆಸಬೇಕು. 

ಅದೇ ಗ್ರಾಮ ವಾಸ್ತವ್ಯ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸವಿನೆನಪು ಸದಾ ನನ್ನ ಜೀವನದಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಏಕೆಂದರೆ ನಾನು ಯಾರು ಅಂತ ಅವರಿಗೆ ಗೊತ್ತಿಲ್ಲ, ಅವರು ಯಾರು ಅಂತ ನನಗೆ ಗೊತ್ತಿಲ್ಲ, ನಾನು ಬರುತ್ತೇನೆ ಅಂತ ಅವರಿಗೆ ಗೊತ್ತಿಲ್ಲ. ಆದರೆ, ನಾನು ಅವರ ಮನೆಗೆ ಬಂದಿದ್ದೇನಿ ಅವರ ಪ್ರೀತಿಯ ಅಡುಗೆ ಸವಿದಿದ್ದೇನಿ. ಇವೆಲ್ಲಾ ಜೀವನದಲ್ಲಿ ಮರೆಯಲಾರದ ಘಟನೆಗಳು. ಅವರಿಗೂ ಇಬ್ಬರು ಮಂತ್ರಿಗಳು, ಒಬ್ಬ ಎಂಎಲ್ಸಿ ಬರುತ್ತಾರೆ ಈ ತರ ಬಂದು ಉಪಾಹಾರ ಸೇವಿಸುತ್ತಾರೆ ಅನ್ನೋದು ಅವರಿಗೂ ಗೊತ್ತಿರಲಿಲ್ಲ. ಇವೆಲ್ಲ ಕೂಡಾ ಗ್ರಾಮ ವಾಸ್ತವ್ಯ ಫಲದಿಂದ ಸಾಧ್ಯವಾಗಿದೆ. 

Grama Vastavya: ಹಾಸ್ಟೆಲ್‌ ಮಕ್ಕಳಿಗೆ ಉಪಾಹಾರ ಬಡಿಸಿದ ಸಚಿವ ಅಶೋಕ್‌

ಜನಪ್ರತಿನಿಧಿಗಳು ಹಾಗೂ ಜನಗಳ ನಡುವೆ ಸೇತುವೆ ನಿಮಾಣ ಮಾಡುವ ಮೂಲಕ ಗ್ರಾಮ ವಾಸ್ತವ್ಯ ಯಶಸ್ವಿಯಾಗಿ ಮಾಡಿದ್ದೇವೆ. ಇಲಾಖೆಯಲ್ಲಿ ಮಾಡಿದ ಸೇವೆಗಳು ನೂರಕ್ಕೆ ನೂರರಷ್ಟುತೃಪ್ತಿ ತಂದಿದೆ. ಇಲಾಖೆಯಲ್ಲಿ ಹಲವಾರ ಬದಲಾವಣೆ ತಂದಿದ್ದೇನೆ. 79ಎ/ಬಿ ತೆಗೆದು ರೈತರಿಗೆ ಅವಕಾಶ, ವಿದ್ಯಾವಂತರಿಗೆ ಅವಕಾಶ, 72 ತಾಸಿನಲ್ಲಿ ಪಿಂಚಣಿ ಅವರ ಮನೆ ಬಾಗಿಲಿಗೆ, 60 ಲಕ್ಷ ರೈತರ ಕುಟುಂಬಕ್ಕೆ ಕಂದಾಯ ದಾಖಲೆಗಳನ್ನು ಕೊಟ್ಟಿದೇವೆ. ಚಿಕ್ಕಮಂಗಳೂರು, ಹಾಸನ, ಕೊಡಗು ಜಿಲ್ಲೆಯಲ್ಲಿನ ಕಾಫಿ ಬೆಳೆಗಾರರಿಗೆ ಸುಮಾರ 40 ಸಾವಿರ ಎಕರೆ ಜಮೀನನ್ನು ಮತ್ತೊಂದು ವರ್ಷ ಲೀಜ್‌ ಮೇಲೆ ಕೊಟ್ಟಿದ್ದೇವೆ. ಬಡವರು ಸರ್ಕಾರದ ಜಮೀನಲ್ಲಿ ಮನೆ ಕಟ್ಟಿಕೊಂಡವರಿಗೆ 94ಸಿ ಅಡಿಯಲ್ಲಿ ಅವರಿಗೆಲ್ಲರಿಗೂ ಹಕ್ಕುಪತ್ರ ಕೊಡುವಂಥ ವ್ಯವಸ್ಥೆ ಮಾಡಿದ್ದೇನೆ ಎಂದರು.

Follow Us:
Download App:
  • android
  • ios